ಜಾತಿ ದೌರ್ಜನ್ಯಗಳು ಮತ್ತು ಸಾಮಾಜಿಕ ಮಾಧ್ಯಮಗಳು

Update: 2020-03-10 18:27 GMT

ಈಗ ದೌರ್ಜನ್ಯಗಳು ಉತ್ಸವದ ಸ್ವರೂಪವನ್ನು ಪಡೆಯುತ್ತಿವೆ. ಮೊದಲನೇ ಹಂತದಲ್ಲಿ ದೌರ್ಜನ್ಯಗಳನ್ನು ಎಸಗಿ ಪೈಶಾಚಿಕ ಆನಂದವನ್ನು ಪಡೆಯುತ್ತಾರೆ. ನಂತರದ ಹಂತದಲ್ಲಿ ಅದೇ ಸಮಾಜದ ಜಾತಿ ಆಧಿಪತ್ಯವನ್ನೂ ಸಹ ಮತ್ತೊಮ್ಮೆ ಸಾಬೀತು ಮಾಡುತ್ತದೆ. ದಲಿತ ಪುರುಷ ಮತ್ತು ಮಹಿಳೆಯರನ್ನು ಬಹಿರಂಗವಾಗಿ ಬೆತ್ತಲೆ ಮೆರವಣಿಗೆ ಮಾಡಿಸುವುದು ಒಂದೆಡೆ ಪೈಶಾಚಿಕ ಆನಂದವನ್ನು ನೀಡಿದರೆ, ದಲಿತರನ್ನು ಬಹಿರಂಗವಾಗಿ ಕಟ್ಟಿಹಾಕಿ ಬಡಿಯುವುದು ಮೇಲ್ಜಾತಿಗಳ ಸಾಮಾಜಿಕ ಮೇಲ್ತನವನ್ನು ಸ್ಥಾಪಿಸುವ ಯೋಜನೆಯನ್ನು ಪೂರೈಸುತ್ತದೆ. ಇಂತಹ ಜಾತಿವಾದದ ಉತ್ಸವಗಳನ್ನು ಆಗುಗೊಳಿಸಿರುವುದು ಸಾಮಾಜಿಕ ಮಾಧ್ಯಮಗಳು ಅದರಲ್ಲೂ ವಿಶೇವಾಗಿ ಅದರ ದೃಶ್ಯ ಅವತಾರಗಳು.

ಹಲವಾರು ದಶಕಗಳ ಹಿಂದೆ ಬಿ.ಆರ್. ಅಂಬೇಡ್ಕರ್ ಅವರು ಗುರುತು ಮಾಡಿ ತೋರಿಸಿದ ಒಂದು ನಿಗೂಢ ವಿದ್ಯಮಾನವನ್ನೇ ದೌರ್ಜನ್ಯಗಳು, ಅದರಲ್ಲೂ ದಲಿತರ ಮೇಲೆ ಹೆಚ್ಚುತ್ತಲೇ ಇರುವ ದೌರ್ಜನ್ಯಗಳು ಎತ್ತಿ ತೋರಿಸುತ್ತದೆ. ಅಸ್ಪೃಶ್ಯರ ಮೇಲೆಯೇ ಏಕೆ ದೌರ್ಜನ್ಯಗಳು ನಡೆಯುತ್ತದೆಂದು ಅವರು ಪ್ರಶ್ನಿಸಿದ್ದರು. ಅದೇ ನಿಗೂಢವು ಮತ್ತಷ್ಟು ತೀವ್ರತೆಯೊಂದಿಗೆ ಮತ್ತೆ ಮರುಕಳಿಸುತ್ತಿದೆ. ಈಗ ದೌರ್ಜನ್ಯಗಳು ಉತ್ಸವದ ಸ್ವರೂಪವನ್ನು ಪಡೆಯುತ್ತಿವೆ. ಮೊದಲನೇ ಹಂತದಲ್ಲಿ ದೌರ್ಜನ್ಯಗಳನ್ನು ಎಸಗಿ ಪೈಶಾಚಿಕ ಆನಂದವನ್ನು ಪಡೆಯುತ್ತಾರೆ. ನಂತರದ ಹಂತದಲ್ಲಿ ಅದೇ ಸಮಾಜದ ಜಾತಿ ಆಧಿಪತ್ಯವನ್ನೂ ಸಹ ಮತ್ತೊಮ್ಮೆ ಸಾಬೀತು ಮಾಡುತ್ತದೆ. ದಲಿತ ಪುರುಷ ಮತ್ತು ಮಹಿಳೆಯರನ್ನು ಬಹಿರಂಗವಾಗಿ ಬೆತ್ತಲೆ ಮೆರವಣಿಗೆ ಮಾಡಿಸುವುದು ಒಂದೆಡೆ ಪೈಶಾಚಿಕ ಆನಂದವನ್ನು ನೀಡಿದರೆ, ದಲಿತರನ್ನು ಬಹಿರಂಗವಾಗಿ ಕಟ್ಟಿಹಾಕಿ ಬಡಿಯುವುದು ಮೇಲ್ಜಾತಿಗಳ ಸಾಮಾಜಿಕ ಮೇಲ್ತನವನ್ನು ಸ್ಥಾಪಿಸುವ ಯೋಜನೆಯನ್ನು ಪೂರೈಸುತ್ತದೆ. ಇಂತಹ ಜಾತಿವಾದದ ಉತ್ಸವಗಳನ್ನು ಆಗುಗೊಳಿಸಿರುವುದು ಸಾಮಾಜಿಕ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಅದರ ದೃಶ್ಯ ಅವತಾರಗಳು.

ಅಂದಾಜು 2004ರ ಆಸುಪಾಸಿನಲ್ಲಿ ಸಾಮಾಜಿಕ ಜಾಲತಾಣಗಳು ಬಳಕೆಗೆ ಬರುವ ಮುಂಚೆ ಜಾತಿ ದೌರ್ಜನ್ಯಗಳ ಸ್ವರೂಪ ಮತ್ತು ತೀವ್ರತೆಗಳನ್ನು ದಲಿತರು ಅರ್ಥಮಾಡಿಕೊಳ್ಳುವಂತೆ ಮಾಡುತ್ತಿದ್ದದ್ದು ಮುದ್ರಣ ಮಾಧ್ಯಮಗಳು. ಮುದ್ರಣ ಮಾಧ್ಯಮಗಳ ಮೂಲಕವೇ ದೌರ್ಜನ್ಯಗಳಿಗೆ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಾ ದಲಿತರು ತಮ್ಮ ನಡುವಿನಲ್ಲಿ ಒಂದು ಸಾಮೂಹಿಕತೆಯನ್ನು ರೂಢಿಸಿಕೊಳ್ಳುವುದು ಸಾಧ್ಯವಾಯಿತು. ಆದರೆ ಸಮಕಾಲೀನ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ದೌರ್ಜನ್ಯಕೋರರ ಮೇಲೂ ಹಾಗೂ ದೌರ್ಜನ್ಯಕ್ಕೆ ತುತ್ತಾದವರ ಮೇಲೂ ಭಿನ್ನಭಿನ್ನವಾದ ರಿಣಾಮಗಳನ್ನು ಬೀರುತ್ತಿವೆ.

ದೌರ್ಜನ್ಯಕ್ಕೆ ಬಲಿಯಾದ ವ್ಯಕ್ತಿಗಳಲ್ಲಿ ಮಾತ್ರವಲ್ಲದೆ ಅವರ ಸಮುದಾಯಗಳಿಗೂ ನೈತಿಕವಾಗಿ ಗಾಯವನ್ನುಂಟು ಮಾಡುವ ಸಲುವಾಗಿಯೇ ದೌರ್ಜನ್ಯಕ್ಕೆ ಬಲಿಯಾದವರ ಗಾಬರಿ ಮತ್ತು ಘಾಸಿಗೊಳಗಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಸ್ತೃತವಾಗಿ ಹರಡಲಾಗುತ್ತದೆ. ನೈತಿಕ ಗಾಯಗಳಿಂದಾಗಿ ಬಲಿಯಾದವರ ಆತ್ಮ ಘನತೆ ಕುಗ್ಗುತ್ತದೆ ಹಾಗೂ ಮತ್ತೊಂದು ಕಡೆ ಆ ವ್ಯಕ್ತಿಗಳ ಸಮುದಾಯಗಳನ್ನು ನಿರ್ದಿಷ್ಟವಾಗಿ ಗುರಿ ಮಾಡಿಕೊಂಡು ಅಪಮಾನಗೊಳಿಸುವುದರಿಂದ ಆ ಸಮುದಾಯವೂ ಘಾಸಿಗೊಳಗಾಗುತ್ತದೆ. ಗುಜರಾತ್‌ನ ಉನಾ ಮತ್ತು ರಾಜಸ್ಥಾನದ ನಗೌರಾ ಘಟನೆಗಳ ಚಿತ್ರಗಳನ್ನು ಆರೋಪಿಗಳೇ ವಿಸ್ತೃತವಾಗಿ ಜಾಲತಾಣಗಳಲ್ಲಿ ಹಂಚಿದರು. ಇದು ದೌರ್ಜನ್ಯಕ್ಕೆ ಗುರಿಯಾದವರನ್ನು ಮತ್ತಷ್ಟು ಅಪಮಾನ ಮತು ಸ್ವದ್ವೇಷಗಳಿಗೆ ಗುರಿಯಾಗುವಂತೆ ಮಾಡುವ ಉದ್ದೇಶವನ್ನು ಹೊಂದಿವೆ. ಮತ್ತೊಂದು ಕಡೆ ಆಕ್ರಮಣವನ್ನು ಮಾಡಿದವರಿಗೆ ಸಾಮೂಹಿಕ ಹೆಮ್ಮೆ ಹಾಗೂ ಗೌರವಗಳಂತಹ ಸಾಮಾಜಿಕವಾಗಿ ಉನ್ನತವಾದ ಭಾವನೆಗಳನ್ನು ಉದ್ದೀಪಿಸುವ ಉದ್ದೇಶಗಳನ್ನು ಹೊಂದಿವೆ. ಹೀಗೆ ತನ್ನೆಲ್ಲಾ ದುರುದ್ದೇಶಗಳ ಜೊತೆಜೊತೆಗೆ ಸಾಮಾಜಿಕ ಮಾಧ್ಯಮಗಳು ಮೇಲ್ಜಾತಿಗಳಲ್ಲಿ ಏರುಕ್ರಮದ ಹೆಮ್ಮೆ ಮತ್ತು ಗೌರವಗಳನ್ನು ಹುಟ್ಟುಹಾಕಿದರೆ, ದೌರ್ಜನ್ಯಗಳಿಗೆ ಗುರಿಯಾದ ದಲಿತರಲ್ಲಿ ಆತ್ಮಘನತೆಯನ್ನು ಕುಗ್ಗಿಸುತ್ತಾ ಹೋಗುತ್ತದೆ. ಈ ಕಾರಣದಿಂದಾಗಿಯೇ ದಲಿತರು ತಮ್ಮ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ದೂರು ದಾಖಲಿಸಲು ಮುಂದಾಗುವುದಿಲ್ಲ. ಆದರೆ ನಿರ್ದಿಷ್ಟ ಸಮುದಾಯವನ್ನೇ ಗುರಿ ಮಾಡಿದ ದೌರ್ಜನ್ಯಗಳ ವಿರುದ್ಧ ಸಮುದಾಯದ ಯುವಕರು ಒಂದು ಗುಂಪಾಗಿ ಪ್ರಕರಣ ದಾಖಲಿಸಲು ಮುಂದಾಗಿರುತ್ತಾರೆ. ಅಂಬೇಡ್ಕರ್‌ಅವರ ಕಾಲದಿಂದಲೂ ಈ ಅಪಮಾನಗಳ ವಿರುದ್ಧ ಅಥವಾ ಸಕಾರಾತ್ಮಕವಾಗಿ ಹೇಳುವುದಾದರೆ ಘನತೆ ಮತ್ತು ಆತ್ಮ ಗೌರವಗಳೆಂಬ ಹೊಸ ಭಾಷೆಯ ಮೂಲಕವೇ ದಲಿತರು ಸಂಘಟಿತರಾಗುತ್ತಿದ್ದಾರೆ. ಈ ನವ ಉದಾರವಾದಿ ಯುಗದಲ್ಲೂ ಮತ್ತೊಮ್ಮೆ ಇದೇ ಮೌಲ್ಯಗಳೇ ದಲಿತ ಸಂಘಟನೆಯ ಹೊಸ ಪ್ರೇರಣೆಯಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳು ಜಾತಿ ಆಧಿಪತ್ಯವನ್ನು ಮರುಸ್ಥಾಪನೆ ಮಾಡುವ ಸಾಧನವೆಂದು ಪರಿಗಣಿಸಲಾಗಿದೆ. ಮೇಲ್ಜಾತಿಗಳು ಅತ್ಯಾಚಾರ ಪ್ರಕರಣಗಳಲ್ಲಿ ಮಾಡುವಂತೆ ಸಾಮಾಜಿಕ ಮಾಧ್ಯಮಗಳನ್ನು ಅಪಮಾನ ಮಾಡುವ ಸಾಧನವನ್ನಾಗಿ ಬಳಸುತ್ತಿವೆ. ಆದರೆ ಅದೇ ಮಾಧ್ಯಮಗಳೇ ಅವರ ನಿಯಂತ್ರಣಗಳನ್ನು ದಾಟಿ ಅವರ ವಿರುದ್ಧವೂ ಹೋಗಬಹುದು. ಮಾಧ್ಯಮಗಳಲ್ಲಿ ವರದಿಯಾಗಿರುವ ನಾಗಪುರ ಪೊಲೀಸರ ಹೇಳಿಕೆಯ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದ ವೀಡಿಯೊಗಳನ್ನು ಆಧರಿಸಿಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಇದೇ ಪೊಲೀಸರೇ ತಾವು ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಿದ ನಂತರ ಮೇಲ್ಜಾತಿ ಆರೋಪಿಗಳಿಗೆ ತಮ್ಮ ಮೇಲೆ ಕಳ್ಳತನದ ಆರೋಪವನ್ನು ಹೊರಿಸುವಂತೆ ಸಲಹೆ ನೀಡಿ ತಮ್ಮ ವಿರುದ್ಧವೂ ಎಫ್‌ಐಆರ್ ದಾಖಲಿಸಲು ಕಾರಣರಾದರೆಂದು ದಲಿತ ಹೋರಾಟಗಾರರು ಆರೋಪಿಸಿದ್ದಾರೆ.

ಹೀಗೆ ಮೇಲ್ಜಾತಿಗಳು ದಾಖಲಿಸಿದ ಪ್ರತಿ-ಎಫ್‌ಐಆರ್ ನಿಂದಾಗಿ ಖಂಡಿತವಾಗಿ ಎಫ್‌ಐಆರ್‌ಗಳಲ್ಲೇ ವೈರುಧ್ಯಗಳು ಸೃಷ್ಟಿಯಾಗಲಿವೆ. ಹೀಗೆ ಒಂದೇ ಪ್ರಕರಣದ ಬಗ್ಗೆ ವಿವಿಧ ಎಫ್‌ಐಆರ್‌ಗಳು ದಾಖಲಾಗುವುದರಿಂದ ಜಾತಿ ದೌರ್ಜನ್ಯದ ಸತ್ಯಗಳು ಮುಚ್ಚಲ್ಪಡುತ್ತವೆ ಅಥವಾ ಪೊಲೀಸ್ ಹಾಗೂ ಕೋರ್ಟ್ ಪ್ರಕ್ರಿಯೆಗಳಲ್ಲಿ ಸಡಿಲಗೊಂಡು ದುರ್ಬಲಗೊಳ್ಳುತ್ತವೆ. ಒಂದು ಪ್ರಕ್ರಿಯಾತ್ಮಕ ನೆಲೆಯಲ್ಲಿ ಪೊಲೀಸರು ಆರೋಪಿಗಳು ದಾಖಲಿಸುವ ಎಫ್‌ಐಆರ್ ಅನ್ನೂ ದಾಖಲಿಸಿಕೊಳ್ಳಬೇಕಾಗುತ್ತದೆಂದು ಹೇಳಲಾಗುತ್ತದೆ. ಆದರೆ ಇದರಿಂದಾಗಿ ತಮ್ಮ ಕಡೆಯಲ್ಲೂ ಸತ್ಯವಿದೆಯೆಂದು ವಾದಿಸಲು ಆರೋಪಿಗಳಿಗೆ ಸರಿಸಮವಾದ ಅವಕಾಶವನ್ನು ಒದಗಿಸಿದಂತಾಗುತ್ತದೆ. ಇದರಿಂದಾಗಿ ದಲಿತರು ದಾಖಲಿಸಿದ ಎಫ್‌ಐಆರ್‌ನಲ್ಲಿ ಸತ್ಯವಿರಬಹುದಾದರೂ ಮೇಲ್ಜಾತಿ ಆರೋಪಿಗಳು ದಾಖಲಿಸಿದ ಎಫ್‌ಐಆರ್‌ಗಳೆಲ್ಲಾ ಸುಳ್ಳೇ ಆಗಿರುತ್ತದೆಂದೇನೂ ಹೇಳಲಾಗುವುದಿಲ್ಲವೆಂದು ವಾದಿಸಲು ಅವಕಾಶ ಕೊಡಲಾಗುತ್ತದೆ. ಹೀಗೆ ವಿರುದ್ಧ ಬಗೆಯ ಎಫ್‌ಐಆರ್‌ಗಳು ದಾಖಲಾಗುವುದರಿಂದಾಗಿ ಜಾತಿ ದೌರ್ಜನ್ಯದ ಸತ್ಯವು ಸಂಪೂರ್ಣ ಸುಳ್ಳೆಂದು ಆಗದಿರಬಹುದು. ಆದರೆ ಜಾತಿ ದೌರ್ಜನ್ಯವೆಂಬುದು ಅವರವರ ಅಭಿಪ್ರಾಯವನ್ನಾಧರಿಸಿದ ಗೊಂದಲಮಯ ಸಂಗತಿಯಷ್ಟೇ ಎಂದಾಗುತ್ತದೆ. ಆಗ ದೌರ್ಜನ್ಯವೆಂಬ ಸತ್ಯವು ಕೇವಲ ಒಂದು ಬಗೆಯ ಅಭಿಪ್ರಾಯ ಮಾತ್ರ ಹಾಗೂ ಅದರ ಸತ್ಯಾಸತ್ಯತೆಯನ್ನು ಸೂಕ್ತ ಕಾನೂನು ಪ್ರಕ್ರಿಯೆಯನ್ವಯ ಸಾಬೀತು ಮಾಡಬೇಕಾಗುತ್ತದೆ. ಒಮ್ಮೆ ವಿಷಯವು ಕೋರ್ಟ್‌ನ ಮೆಟ್ಟಿಲನ್ನು ಹತ್ತಿದರೆ ಅಲ್ಲಿನ ಪ್ರಕ್ರಿಯೆಗಳ ಜೊತೆಗೆ ಸಾಗುವಷ್ಟು ಸಂಪನ್ಮೂಲಗಳು ದಲಿತರ ಬಳಿ ಇರುವುದಿಲ್ಲವಾದ್ದರಿಂದ ದಲಿತರು ಆ ಪ್ರಕ್ರಿಯೆಯಿಂದಲೇ ಹೊರದಬ್ಬಲ್ಪಡುತ್ತಾರೆ.

ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News

ಜಗದಗಲ
ಜಗ ದಗಲ