ಕರಾವಳಿ ಡ್ರಗ್ಸ್ ಸಾಗಾಟದ ಹೆಬ್ಬಾಗಿಲು!

Update: 2020-03-11 05:33 GMT

ಕಾಲಮಾನಕ್ಕೆ ತಕ್ಕಂತೆ ಮಾದಕ ವಸ್ತು ವ್ಯಸನವೂ ಬದಲಾಗುತ್ತಾ ಬರುತ್ತಿದೆ. ಮೊದಲು ಗುಟ್ಕಾ, ತಂಬಾಕಿನಿಂದ ಆರಂಭವಾದದ್ದು, ಸದ್ಯ ಗಾಂಜಾ, ಎಲ್‌ಎಸ್‌ಡಿ, ಎಂಡಿಎಂಎಗಳಂತಹ ಆಧುನಿಕ ಮಾದಕ ದ್ರವ್ಯ ಪ್ರವರ್ಧಮಾನಕ್ಕೆ ಬರುತ್ತಿದೆ. ಡ್ರಗ್ಸ್ ವಿರುದ್ಧದ ವಿಶೇಷ ಕಾರ್ಯಾಚರಣೆ ಮುಂದುವರಿದಿದ್ದು, ಡ್ರಗ್ಸ್‌ನ್ನು ಸಂಪೂರ್ಣ ಮಟ್ಟ ಹಾಕಲು ಇಲಾಖೆ ಸನ್ನದ್ಧವಾಗಿದೆ.

| ಲಕ್ಷ್ಮೀಗಣೇಶ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ, ಮಂಗಳೂರು ಪೊಲೀಸ್ ಆಯುಕ್ತಾಲಯ

ಮಂಗಳೂರು, ಮಾ.11: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯು ಡ್ರಗ್ಸ್ ಮಾಫಿಯಾದ ಟಾರ್ಗೆಟ್ ಏರಿಯಾ! ನೆರೆ ರಾಜ್ಯಗಳ ಮೂಲಕ ಕರಾವಳಿ ಜಿಲ್ಲೆಗಳಿಗೆ ನಾನಾ ರೀತಿಯ ಡ್ರಗ್ಸ್ ಪದಾರ್ಥಗಳು ಅವ್ಯಾಹತವಾಗಿ ಸರಬರಾಜಾಗುತ್ತಿವೆ.

ಹೊರಜಿಲ್ಲೆ, ರಾಜ್ಯದ ವಿದ್ಯಾರ್ಥಿಗಳನ್ನಷ್ಟೇ ಗುರಿಯಾಗಿಸಿಕೊಂಡು ಕರಾವಳಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿದ್ದು, ಇದು ರಾಜ್ಯದ ಗಾಂಜಾ ಮಾಫಿಯಾ ಹೆಬ್ಬಾಗಿಲಾಗಿ ಕಾರ್ಯಾಚರಿಸುತ್ತಿದೆ ಎಂದರೂ ಉತ್ಪ್ರೇಕ್ಷೆಯಾಗಲಾರದು. ಈ ಡ್ರಗ್ಸ್ ವಹಿವಾಟು ಗ್ರಾಮಾಂತರ ಪ್ರದೇಶಗಳ ಜತೆಗೆ ಶಾಲಾ-ಕಾಲೇಜು ಕ್ಯಾಂಪಸ್‌ಗಳನ್ನೂ ಆವರಿಸಿರುವುದು ಆತಂಕಕಾರಿ.

ನೆರೆಯ ಕೇರಳ, ಕಾಸರಗೋಡು, ಗೋವಾ, ಮಹಾ ರಾಷ್ಟ್ರದಿಂದ ರೈಲಿನಲ್ಲಿ ಮಂಗಳೂರಿಗೆ ಡ್ರಗ್ಸ್ ಪೂರೈಕೆ ಯಾಗುತ್ತಿದೆ. ವೆಬ್‌ಸೈಟ್, ಇಮೇಲ್, ವಾಟ್ಸ್‌ಆ್ಯಪ್‌ನಲ್ಲೂ ಡ್ರಗ್ಸ್ ದಂಧೆ ಬುಕ್ಕಿಂಗ್ ನಡೆಯುತ್ತಿದೆ.

ನೆರೆ ರಾಜ್ಯಗಳಿಂದ ಪೂರೈಕೆ: ವೈದ್ಯಕೀಯ, ಬ್ಯಾಂಕಿಂಗ್, ಶೈಕ್ಷಣಿಕ ಸಹಿತ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರಾವಳಿ ಪ್ರದೇಶದಲ್ಲಿ ಮಾದಕ ದ್ರವ್ಯ ಪೂರೈಕೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ನೆರೆಯ ಕೇರಳ, ಗೋವಾ ರಾಜ್ಯಗಳಿಂದ ಕರಾವಳಿಗೆ ಡ್ರಗ್ಸ್ ಪೂರೈಕೆ ಹೆಚ್ಚುತ್ತಿದ್ದು, ಮಾದಕ ದ್ರವ್ಯದ ಬಲೆಗೆ ಯುವಕರೇ ಅಧಿಕ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ.

ಮಾದಕ ದ್ರವ್ಯ ಪೂರೈಕೆ ದಂಧೆಯು ಕರಾವಳಿ ಜಿಲ್ಲೆಗಳಿಗೆ ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಿತಿಮೀರಿದೆ. ಈ ಹಿಂದೆ ಕೆಲವು ಮೆಡಿಕಲ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾತ್ರ ಮಾದಕ ವ್ಯಸನಕ್ಕೆ ಅಂಟಿಕೊಳ್ಳುತ್ತಿದ್ದರು.

ಆದರೆ ಇತ್ತೀಚೆಗೆ ಈ ಚಟ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೂ ಆವರಿಸಿಕೊಂಡಿರು ವುದು ಆಘಾತಕಾರಿ. ನಾರ್ಕೊಟಿಕ್ಸ್‌ನ ವಿವಿಧ ಪ್ರಕರಣಗಳಲ್ಲಿ ಆರೋಪಿ ಗಳನ್ನು ವಿಚಾರಿಸಿದಾಗ ಇಲ್ಲಿನ ಯುವಕರಿಗೆ ಕೇರಳದಿಂ ದಲೇ ಗಾಂಜಾ ಪೂರೈಕೆಯಾಗುತ್ತಿರುವ ವಿಷಯ ಮೇಲಿಂದ ಮೇಲೆ ಖಾತ್ರಿಯಾಗುತ್ತಿದೆ. ವೈದ್ಯಕೀಯ ಹಾಗೂ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯನ್ನಾಗಿಸಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಕೇರಳದಿಂದ ಬರುವ ಕೆಲವು ವಿದ್ಯಾರ್ಥಿಗಳೂ ಗಾಂಜಾ ಮಾರಾಟ ಮಾಡುತ್ತಿರುವುದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ.

2019ರ ಜುಲೈ 17ರಂದು ಬೋಂದೆಲ್‌ನಲ್ಲಿ ಗಾಂಜಾ ಸಾಗಾಟ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದರು. ಇಲ್ಲಿ ಉಡುಪಿ ಕಡೆಗೆ ಸಾಗಾಟಕ್ಕೆ ಯತ್ನಿಸುತ್ತಿದ್ದ 12 ಲಕ್ಷ ರೂ. ವೌಲ್ಯದ 41 ಕಿ.ಗ್ರಾಂ ಗಾಂಜಾ ಪತ್ತೆಯಾಗಿತ್ತು. ಮಾದಕ ವಸ್ತುಗಳಿಗೆ ಹೊರರಾಜ್ಯದ ವಿದ್ಯಾರ್ಥಿಗಳೇ ಪ್ರಮುಖ ಗಿರಾಕಿಗಳಾಗಿದ್ದಾರೆ. ಅವರ ಜತೆಗೆ ಸ್ಥಳೀಯ ವಿದ್ಯಾರ್ಥಿಗಳೂ ಮಾದಕದ ಮತ್ತೇರಿಸಿಕೊಳ್ಳುವುದರ ಮೂಲಕ ಮಾದಕ ಪ್ರಪಂಚಕ್ಕೆ ಸುಲಭವಾಗಿಯೇ ಲಗ್ಗೆ ಇಡುತ್ತಿದ್ದಾರೆ. ದೊಡ್ಡ ಪ್ರಮಾಣದ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೇಟ್‌ಗಳನ್ನಾಗಿ ಮಾಡಿ ಪೂರೈಕೆ ಮಾಡುತ್ತಿರುವುದು ಹಲವು ಬಾರಿ ಬೆಳಕಿಗೆ ಬಂದಿದೆ. ಅಲ್ಲದೆ, ಮಾರಾಟಕ್ಕೆ ಸ್ಥಳೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವುದು ಕೂಡ ಹೊಸ ಸಂಗತಿಯಲ್ಲ.

ಅಪಾಯಕಾರಿ ಮಾದಕ ವ್ಯಸನಕ್ಕೆ 15ರಿಂದ 28ರೊಳಗಿನ ವಯೋಮಾನದ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗುತ್ತಿದ್ದಾರೆ. ಗಾಂಜಾ, ಕೊಕೇನ್, ಮಾರಿಜುವಾನಾ, ಬ್ರೌನ್‌ಶುಗರ್, ಹೆರಾಯಿನ್ ಸೇವನೆಯ ಜತೆಗೆ ಕೆಲವರು ವೈಟ್ನರ್ ಆಘ್ರಾಣಿಸುವ ಗೀಳನ್ನೂ ಅಂಟಿಸಿಕೊಂಡಿದ್ದಾರೆ. ವ್ಯಸನಮುಕ್ತ ಕೇಂದ್ರಗಳಿಗೆ ದಾಖಲಾಗುವ ಯುವಜನರ ಸಂಖ್ಯೆಯಲ್ಲೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಭೀತಿ ಮೂಡಿಸಿದೆ.

ಪ್ರೌಢಶಾಲೆ, ಕಾಲೇಜುಗಳ ಸಮೀಪದಲ್ಲೂ ಮಾದಕವಸ್ತು ಪತ್ತೆಯಾಗುತ್ತಿರುವ ಬಗ್ಗೆ ದೂರುಗಳಿದ್ದು, ಪುತ್ತೂರು ಕಾಲೇಜಿನಲ್ಲೂ ಇಂತಹ ಘಟನೆ 2019ರಲ್ಲಿ ನಡೆದಿತ್ತು. ಸಹಪಾಠಿ ವಿದ್ಯಾರ್ಥಿಗಳೇ ದಲಿತ ವಿದ್ಯಾರ್ಥಿನಿಗೆ ಅಮಲು ಪದಾರ್ಥ ತಿನ್ನಿಸಿ ಸಾಮೂಹಿಕ ಅತ್ಯಾಚಾರಗೈದ ವೀಡಿಯೊ ವೈರಲ್ ಆಗಿತ್ತು. ಈ ಬಗ್ಗೆ ದ.ಕ. ಜಿಲ್ಲಾ ಪೊಲೀಸರು ಸ್ವಯಂ ಪ್ರೇರಿತ (ಸುಮೊಟೊ) ಕೇಸು ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು. ಹಲವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮಹಿಳಾ ಆಯೋಗದಿಂದಲೂ ಸುಮೊಟೊ ಕೇಸು ದಾಖಲಿಸಲಾಗಿತ್ತು. ಪ್ರಕರಣದಲ್ಲೂ ಡ್ರಗ್ಸ್‌ನ ವಾಸನೆ ಕಂಡುಬಂದಿತ್ತು.

ಅಂತಾರಾಜ್ಯ ನಂಟು ಹೊಂದಿರುವ ಡ್ರಗ್ಸ್ ಮಾಫಿಯಾ, ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಪೊಲೀಸ್, ರಾಜಕಾರಣಿಗಳು ಮತ್ತು ಡ್ರಗ್ಸ್ ದಂಧೆಕೋರರ ಅಪವಿತ್ರ ಮೈತ್ರಿಯಿಂದಾಗಿ ಕರಾವಳಿ ಜಿಲ್ಲೆಗಳ ಯುವಜನ ಮಾದಕ ದ್ರವ್ಯ ವ್ಯಸನದಲ್ಲಿ ಸಿಲುಕಿ ತೊಳಲಾಡುತ್ತಿರುವ ಕರಾಳ ದೃಶ್ಯ ಕಣ್ಣಿಗೆ ರಾಚುತ್ತಿದೆ. ಆರಂಭದಲ್ಲಿ ಮಾದಕ ದ್ರವ್ಯ ಕುರಿತು ಮೈಮರೆತ ಇಲ್ಲಿನ ಸ್ಥಳೀಯ ಆಡಳಿತಗಳು ಈಗ ಡ್ರಗ್ಸ್ ಜಾಲದ ಬಲೆಯಿಂದ ಹೊರಬರಲಾಗದೆ ಒದ್ದಾಡುತ್ತಿವೆ.

ಮಂಗಳೂರು ಸಹಿತ ಕರಾವಳಿ ಜಿಲ್ಲೆಗಳಲ್ಲೂ ‘ಉಡ್ತಾ ಪಂಜಾಬ್’ ಅಂಥ ಪರಿಸ್ಥಿತಿ ಉದ್ಭವವಾಗದಂತೆ ಆಡಳಿತ ಎಚ್ಚರಿಕೆ ವಹಿಸಬೇಕಿದೆ. ತಕ್ಷಣವೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದೊಂದು ದಿನ ಯುವಜನಾಂಗಕ್ಕೆ ಗಂಡಾಂತರ ಕಾದಿದೆ. ಮಾದಕ ದ್ರವ್ಯ ಮಾಫಿಯಾವನ್ನು ಬುಡಸಮೇತ ಕಿತ್ತೊಗೆಯಲು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತರಬೇಕು. ದಂಧೆಗೆ ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿ ಕುಮ್ಮಕ್ಕು ನೀಡುತ್ತಿರುವ ಆರೋಪವನ್ನು ನಿರ್ಲಕ್ಷಿಸುವಂತಿಲ್ಲ. ಮಾದಕ ವಸ್ತುಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಕೈಮೀರಿ ಹೋಗಬಹುದು ಎನ್ನುವ ಆತಂಕಕಾರಿ ವಿಷಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News