ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 64ಕ್ಕೇರಿಕೆ
ಹೊಸದಿಲ್ಲಿ, ಮಾ. 11: ಐಟಿ ಕಂಪೆನಿಗಳಾದ ಡೆಲ್ ಹಾಗೂ ಮೈಂಡ್ ಟ್ರೀ ತನ್ನ ಇಬ್ಬರು ಉದ್ಯೋಗಿಗಳಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬುಧವಾರ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ಕೊರೋನ ವೈರಾಣು ಸೋಂಕಿನ ಪ್ರಕರಣ 64ಕ್ಕೆ ಏರಿಕೆಯಾಗಿದೆ.
ದಿಲ್ಲಿ ಹಾಗೂ ರಾಜಸ್ಥಾನದಲ್ಲಿ ತಲಾ ಒಂದು ಕೊರೋನ ವೈರಾಣು ಸೋಂಕಿನ ಹೊಸ ಪ್ರಕರಣ ದೃಢಪಟ್ಟಿವೆ ಎಂದು ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಇವರಲ್ಲಿ 16 ಮಂದಿ ಭಾರತಕ್ಕೆ ಆಗಮಿಸಿದ ಪ್ರವಾಸಿಗರು ಎಂದು ಸಚಿವಾಲಯ ತಿಳಿಸಿದೆ. ಬುಧವಾರದ ವರೆಗೆ ದಿಲ್ಲಿಯಲ್ಲಿ 5 ಮಂದಿಗೆ ಕೊರೋನ ವೈರಾಣು ಸೋಂಕು ತಗಲಿರುವುದು ದೃಢಪಟ್ಟಿವೆ. ಉತ್ತರಪ್ರದೇಶಧಲ್ಲಿ 9 ಮಂದಿಗೆ ಸೋಂಕು ತಗಲಿರುವ ಶಂಕೆ ಉಂಟಾಗಿದ್ದು ತಪಾಸಣೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ 4 ಹಾಗೂ ಮಹಾರಾಷ್ಟ್ರದಲ್ಲಿ 5 ಕೊರೋನ ವೈರಾಣು ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಲಡಾಕ್‌ನಲ್ಲಿ ಇಬ್ಬರಿಗೆ ಕೊರೋನ ವೈರಾಣು ಸೋಂಕು ತಗಲಿರುವುದು ದೃಢಪಟ್ಟಿದೆ.
ರಾಜಸ್ಥಾನ, ತೆಲಂಗಾಣ, ತಮಿಳುನಾಡು, ಜಮ್ಮು ಹಾಗೂ ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ತಲಾ ಒಬ್ಬರಿಗೆ ಕೊರೋನ ವೈರಾಣು ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಕೇರಳದಲ್ಲಿ ಇದುವರೆಗೆ ಕೊರೋನಾ ವೈರಾಣು ಸೋಂಕಿನ 17 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ ಮೂವರು ಗುಣಮುಖರಾಗಿದ್ದಾರೆ.
ಕೊರೋನಾ ವೈರಾಣು ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆ ಮತ್ತೆ ಮೂರು ದೇಶಗಳಾದ ಫ್ರಾನ್ಸ್, ಜರ್ಮನಿ ಹಾಗೂ ಸ್ಪೈನ್‌ಗೆ ಮಾರ್ಚ್ 11ರ ಹಾಗೂ ಅದಕ್ಕಿಂತ ಹಿಂದಿನ ವೀಸಾ ಹಾಗೂ ಇ-ವಿಸಾಕ್ಕೆ ನಿರ್ಬಂಧ ವಿಧಿಸಿದೆ. ಚೀನಾ, ಹಾಂಗ್‌ಕಾಂಗ್, ರಿಪಬ್ಲಿಕ್ ಆಫ್ ಕೊರಿಯಾ, ಜಪಾನ್, ಇಟಲಿ, ಸಿಂಗಪುರ, ಇರಾನ್, ಮಲೇಶ್ಯಾ, ಫ್ರಾನ್ಸ್, ಸ್ಪೈನ್, ಜರ್ಮನಿಗೆ ಪ್ರಯಾಣಿಸಿ ಹಿಂದಿರುಗಿದ ದಿನದಿಂದ 14 ದಿನಗಳ ಕಾಲ ಸ್ವಯಂಪ್ರೇರಿತವಾಗಿ ಪ್ರತ್ಯೇಕವಾಗಿ ಇರುವಂತೆ ಹಾಗೂ ಈ ಅವಧಿಯಲ್ಲಿ ಉದ್ಯೋಗದಾತರು ಉದ್ಯೋಗಿಗಳಿಗೆ ಅವರ ಮನೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡುವಂತೆ ಸಚಿವಾಲಯ ಸೂಚಿಸಿದೆ.