ಏಶ್ಯನ್ ಕ್ವಾಲಿಫೈಯರ್: ಫೆನಲ್‌ನಿಂದ ಹಿಂದೆ ಸರಿದ ವಿಕಾಸ್ ಕ್ರಿಶನ್‌ಗೆ ಬೆಳ್ಳಿ

Update: 2020-03-11 18:21 GMT

ಅಮ್ಮಾನ್(ಜೋರ್ಡನ್), ಮಾ.11: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ವಿಕಾಸ್ ಕ್ರಿಶನ್(69ಕೆಜಿ)ಕಣ್ಣಿಗೆ ಆಗಿರುವ ಗಾಯದಿಂದಾಗಿ ಬುಧವಾರ ನಡೆಯಬೇಕಾಗಿದ್ದ ಏಶ್ಯ/ಒಶಿಯಾನಿಯ ಕ್ವಾಲಿಫೈಯರ್‌ನ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದರು. ಈ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ವಿಶ್ವ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ್ದ ವಿಕಾಸ್ ಫೈನಲ್ ಸ್ಪರ್ಧೆಯಲ್ಲಿ ಜೋರ್ಡನ್‌ನ ಝಾಯೆದ್‌ರನ್ನು ಎದುರಿಸಬೇಕಾಗಿತ್ತು. ‘‘ಕಣ್ಣುನೋವಿನಿಂದಾಗಿ ವಿಕಾಸ್ ಟೂರ್ನಿಯ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಲಿಲ್ಲ. ಟೂರ್ನಿಯಿಂದ ಹಿಂದೆ ಸರಿಯುವಂತೆ ವೈದ್ಯರು ಅವರಿಗೆ ಸಲಹೆ ನೀಡಿದ್ದರು’’ ಎಂದು ಬಾಕ್ಸರ್ ವಿಕಾಸ್ ಹಿತೈಷಿಗಳು ಪಿಟಿಐಗೆ ತಿಳಿಸಿದ್ದಾರೆ.

ಮಂಗಳವಾರ ನಡೆದ ಸೆಮಿ ಫೈನಲ್‌ನಲ್ಲಿ ವಿಕಾಸ್ ಕ್ರಿಶನ್ ಅವರು ಕಝಖ್‌ಸ್ತಾನದ ಅಬ್ಲೈಖಾನ್‌ರನ್ನು ಮಣಿಸಿದ್ದರು.

ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ವಿಕಾಸ್ ಬಲಗಣ್ಣಿನ ಹುಬ್ಬಿಗೆ ಗಾಯವಾಗಿತ್ತು. ಗಾಯದ ಸಮಸ್ಯೆಯ ಹೊರತಾಗಿಯೂ ವಿಕಾಸ್ ಇನ್ನುಳಿದ ಸುತ್ತುಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲ್ ತಲುಪಿದ್ದರು.

ವಿಕಾಸ್ ಸಹಿತ ಭಾರತದ ಇತರ ಏಳು ಬಾಕ್ಸರ್‌ಗಳು ಸೆಮಿ ಫೈನಲ್ ಪ್ರವೇಶಿಸುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News