ಸರ್ವೋಚ್ಚ ಸ್ಥಾನ ಪ್ರಾಪ್ತಿಯ ಮಹತ್ವಾಕಾಂಕ್ಷೆ ಬೆಳೆಸಿಕೊಳ್ಳಿ

Update: 2020-03-12 18:21 GMT

ದಿನಾಂಕ 16 ಮೇ 1938ರಂದು ಚಿಪಳೂಣ ಎಂಬಲ್ಲಿ ಡಾ.ಅಂಬೇಡ್ಕರರು ಸ್ಫೂರ್ತಿದಾಯಕ ಭಾಷಣವನ್ನು ಮಾಡಿದರು. ಅವರಿಗಿಂತ ಮೊದಲು ಶ್ರೀಮತಿ ರತ್ನಾಬಾಯಿ ಮಾತನಾಡಿದರು. ‘‘ಗೌಡರು ನಮ್ಮ ಮೇಲೆ ಭಯಂಕರ ದೌರ್ಜನ್ಯ ಮಾಡುತ್ತಿದ್ದಾರೆ. ಈಗಂತೂ ತೀರ ಅತಿರೇಕ ತಲುಪಿದೆ. ನೀವು ಇಲ್ಲಿ ಸಭೆ ಮಾಡಿ ಖೇಡ, ದಾಪೋಲಿ ಬಳಿಕ ಮುಂಬೈಗೆ ಹೋಗುತ್ತೀರಿ. ಆದರೆ ನಾವು ಮಾತ್ರ ಇಲ್ಲೇ ಶಾಶ್ವತವಾಗಿ ಉಳಿಯಬೇಕಾಗುತ್ತದೆ. ನೀವು ಹೋದ ಬಳಿಕ ನಮ್ಮ ಮೇಲಿನ ಹಿಂಸೆ ಮತ್ತೆ ಮುಂದುವರಿಯುತ್ತದೆ. ಹೀಗಿರುವಾಗ ನಮಗಾಗಿ ನಿವೇನು ಮಾಡುತ್ತೀರಿ? ಆದರೂ ನನಗೆ ಡಾ.ಅಂಬೇಡ್ಕರರ ಮೇಲೆ ನಂಬಿಕೆಯಿದೆ.’’ ವಗೈರೆ. ಈ ಮಾತಿಗೆ ಕಾಂಗ್ರೆಸ್ ಪಕ್ಷದವರು ಕುಹಕತನದಿಂದ ಚಪ್ಪಾಳೆ ಬಾರಿಸಿದರು.

‘ನಿಜಕ್ಕೂ ಇಲ್ಲಿ ರೈತರ ಜೊತೆಗಿದ್ದು ಯಥಾಶಕ್ತಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದರೆ ಧನ್ಯತಾಭಾವ ಮೂಡುತ್ತಿತ್ತು. ಆದರೆ ದುರದೃಷ್ಟವೆಂದರೆ, ನಿಮ್ಮಂತೆ ನನಗೂ ವ್ಯವಸಾಯವಿದೆ. ಅದನ್ನು ಮಾಡದ ಹೊರತು ನನ್ನ ಉದರ ನಿರ್ವಹಣೆಯಾಗುವಂತಿಲ್ಲ. ನನ್ನ ವ್ಯವಸಾಯವು ದೊಡ್ಡ ದರ್ಜೆಯದಾಗಿದ್ದರೂ ನಾನು ಕಟ್ಟಲ್ಪಟ್ಟಿದ್ದೇನೆ. ನಾನು ಬಡಪರಿಸ್ಥಿತಿಯಲ್ಲೇ ಜನಿಸಿದೆ. ಅಪ್ಪ ಮಾಡಿದ 2-4 ಸಾವಿರ ರೂಪಾಯಿ ಸಾಲ ನನ್ನ ತಲೆಯ ಮೇಲಿತ್ತು. ತಾತ್ಪರ್ಯವೇನೆಂದರೆ, ನಾನು ಆಗರ್ಭ ಶ್ರೀಮಂತನಲ್ಲ. ಹೀಗಾಗಿ ನನ್ನಿಚ್ಛೆಯ ವಿರುದ್ಧ ನಿಮ್ಮನ್ನು ತೊರೆದು ನನ್ನ ವ್ಯವಸಾಯಕ್ಕಾಗಿ ನಾನು ಮುಂಬೈಗೆ ಹೋಗಲೇಬೇಕಾಗಿದೆ.

ಈಗ ತಾನೇ ರತ್ನಾಬಾಯಿಯ ಭಾಷಣದ ಬಳಿಕ ಕೆಲವರು ಕುಹಕತನದಿಂದ ಚಪ್ಪಾಳೆ ಬಾರಿಸಿದರು. ನಮ್ಮ ಪಕ್ಷದ ‘ಹಜಾಮತಿ’ಯಾ ಯಿತೆಂದು ಅವರು ಭಾವಿಸಿರಬೇಕು. ಈ ಜನರಿಗೆ ಬಾರಿಸುವ ಹಕ್ಕು ನೀಡಿದವರು ಯಾರು? ಎಂದು ನಾನು ಹೇಳಬಯಸುತ್ತೇನೆ. ನಾವು ಮುಂಬೈಯಲ್ಲಿದ್ದರೂ ಈ ಜನರಂತೂ ಹನ್ನೆರಡೂ ತಿಂಗಳೂ ಇಲ್ಲೇ ಇರುತ್ತಾರೆ. ಅವರಿಗೆ ನಿಮ್ಮ ದುಃಖ ಕಾಣಿಸುವುದಿಲ್ಲವೇ? ಅವರಿಗೆ ಗೊತ್ತಿದ್ದರೂ ಅವರು ನಿಮಗಾಗಿ ಏನೂ ಮಾಡಲು ಬಯಸುವುದಿಲ್ಲ. ಕೆಲವು ಗೌಡರ ಮತ್ತು ನನ್ನ ಅರ್ಹತೆ ಒಂದೇ ಏನು? ಯಾರಾದರೂ ನನ್ನ ಎದುರಿಗೆ ಬಂದರೆ, ನಾನವನನ್ನು ಬೌದ್ಧಿಕತೆಯಿಂದ ಸೋಲಿಸುತ್ತೇನೆ. ಅವರು ನನ್ನ ಮತ್ತು ತಮ್ಮ ತುಲನೆ ಮಾಡುತ್ತಿದ್ದರೆ, ಎಲ್ಲಿ ಹಿಮಾಲಯ, ಎಲ್ಲಿ ಮೂತ್ರದ ಕಲ್ಲು! ಎಂದು ಕೇಳಬಲ್ಲೆ! ನಾನು ಶ್ರೀಮಂತನಾಗಿರದಿದ್ದರೂ ಈವರೆಗಿನ ನನ್ನ ಜೀವನ ನಿಷ್ಕಲ್ಮಷವಾಗಿದೆ. ನಿಮ್ಮ ಹಿತದ ಕಾರ್ಯವನ್ನು ಮಾಡಿದ್ದೇನೆ, ಮುಂದೆಯೂ ಅದನ್ನೇ ಮಾಡುತ್ತೇನೆ.

ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನೀಡಿದ ವಚನಗಳಲ್ಲಿ ಯಾವುದನ್ನು ಪಾಲಿಸಿದೆ? ಕಾಂಗ್ರೆಸ್ ಈವರೆಗೆ ಮಂಜೂರು ಮಾಡಿದ ಮಸೂದೆಯಲ್ಲಿ ರೈತರ ಹಿತ ಸಂಬಂಧದ್ದು ಏನಿದೆ? ಅದರ ಬದಲು ಗೌಡಿಕೆಯಂತಹ ಮಹತ್ವದ ಬಿಲ್ಲನ್ನು ಕಳೆದ ಹತ್ತು ತಿಂಗಳಿಂದ ಕಾಂಗ್ರೆಸ್‌ಮುಂದೂಡುತ್ತಲಿದ್ದು ಚುನಾವಣೆಯ ಕಾಲಕ್ಕೆ ನೀಡಿದ ವಚನಕ್ಕೆ ಮಸಿ ಬಳಿಯುತ್ತಲಿದೆ. ನಾನಿಂದು ಕಾಂಗ್ರೆಸ್ ಸೇರಿಕೊಂಡರೆ ನನಗಲ್ಲಿ ಯೋಗ್ಯಸ್ಥಾನ ಸಿಗಲಿಕ್ಕಿಲ್ಲ. ನನ್ನ ಪ್ರತಿಷ್ಠೆ ಉಳಿಯಲಿಕ್ಕಿಲ್ಲ ಎಂದು ನಿಮಗನಿಸುತ್ತದೆಯೇ? ನಾನೊಂದು ವೇಳೆ ಕಾಂಗ್ರೆಸ್ ಸೇರಿದರೆ, ನನ್ನ ಬುದ್ಧಿಯ ಬಲದಿಂದ ಅಲ್ಲೂ ಪ್ರಭಾವ ಬೀರದೆ ಗೌರವದ ಸ್ಥಾನವನ್ನು ಗಳಿಸದೆ ಇರಲಾರೆ ಎಂಬ ನಂಬಿಕೆ ನನಗಿದೆ. ಗಾಂಧಿಯ ಪ್ರಾಣ ಉಳಿಸಿದವರಾರು? ನಾನು. ಆದರೆ ಗಾಂಧಿಯ ಕಾಂಗ್ರೆಸ್ ಬಡವರಿಗಾಗಿಲ್ಲ ಎನ್ನುವುದು ಖಚಿತವಾಗಿದ್ದರಿಂದ ನಾನು ಕಾಂಗ್ರೆಸ್ ಸೇರಲು ಸಿದ್ಧನಿಲ್ಲ. ಗಾಂಧಿಯ ವ್ಯಕ್ತಿತ್ವದ ಎದುರಿಗೆ ಸುಭಾಶ್ಚಂದ್ರ ಭೋಸ್, ಪಂಡಿತ್ ನೆಹರೂ ಅವರು ತಮ್ಮ ತಲೆಬಾಗಿಸಿದರು. ಆದರೆ ಗಾಂಧಿಯ ಪ್ರಭಾವ ನನ್ನ ಮೇಲೆ ಎಂದೂ ಬೀಳಲಿಲ್ಲ. ಕಾಂಗ್ರೆಸ್ ಇಲ್ಲಿಯವರೆಗೆ ‘ಭಟಜಿ ಶೇಠಜಿ’ಗಳ ಹಣದಿಂದ ಸಾಕಲ್ಪಡುತ್ತಿರುವುದರಿಂದ ಅದು ಅವರ ‘ದಾಸ’ನಾಗಿ ಬಿಟ್ಟಿದೆ. ಅನ್ನ ತಿಂದವರ ಹಂಗಿನಲ್ಲಿರಬೇಕಾಗುತ್ತದೆ ಹೀಗಿರುವಾಗ ಶೇಠ್ ಸಾಹುಕಾರರ ಹಣದಿಂದ ಸಾಕಲಾದ ಕಾಂಗ್ರೆಸ್ ಅವರ ವಿರುದ್ಧ ಹೇಗೆ ಹೋಗಲು ಸಾಧ್ಯ ಹೇಳಿ? ಇಂದಿನವರೆಗೆ ‘ಬ್ರಾಹ್ಮಣ’ ವರ್ಗದವರು ನಿಮಗಾಗಿ ಏನು ಮಾಡಿದ್ದಾರೆ? ನೀವು ಅವರ ಮನೆಯ ಪಾತ್ರೆ ತಿಕ್ಕುವುದು, ಅವರ ಹೆಂಗಸರ ಸೀರೆ ಒಗೆಯುವುದು ಬಿಟ್ಟು ಬೇರೇನು ಮಾಡಿದ್ದೀರಿ? ಇಂದು ಸರಕಾರಿ ನೌಕರಿಯಲ್ಲಿರುವ ಜನರು ಯಾರು? ಇಂದು ನೀವೆಲ್ಲಿಯೇ ಹೋಗಿ ಜಡ್ಜ್, ಮಾಮಲೇದಾರ, ಮುನ್ಸಿಫ್, ಕಲೆಕ್ಟರ್- ಇವರೆಲ್ಲ ಮೇಲುವರ್ಗದವರೇ ಆಗಿದ್ದಾರೆ. ಇಂದು ನಿಮ್ಮ ಸಂಖ್ಯೆಯು ಶೇ.80 ಇದ್ದೂ, ಸರಕಾರಿ ನೌಕರಿಯಲ್ಲಿ ಕಡಿಮೆ ಜನರಿರುವುದು ಯಾವುದರ ಸಂಕೇತ? ನಿಮ್ಮಲ್ಲಿ ಯಾರಾದರೂ ಪ್ರೈಮ್ ಮಿನಿಸ್ಟರ್ ಆಗುವುದನ್ನು ನಾನು ನೋಡಬೇಕಾಗಿದೆ. ನನಗೆ ಹಿಡಿಯಷ್ಟು ಭಟಜಿ-ಶೇಠಜಿಗಳ ರಾಜ್ಯ ಬೇಡ. ಶೇ.80 ಜನರಿರುವ ನಿಮ್ಮ ರಾಜ್ಯಬೇಕು.

ನೀವಿಂದು ಗೌಡರ ದೌರ್ಜನ್ಯದಿಂದಾಗಿ ಪುಕ್ಕಲು ಮತ್ತು ಹೇಡಿಗಳಾಗಿದ್ದೀರಿ. ಗೌಡ ಬರೇ ನಿಮ್ಮನ್ನು ದಿಟ್ಟಿಸಿದರೂ ಸಾಕು ನೀವು ನಡುಗುತ್ತೀರಿ. ಈಗ ಈ ಭಯವನ್ನು ತೊರೆದು ‘ಏ’ ಎಂದರೆ ‘ಯಾಕೋ’ ಎನ್ನುವ ಸಿದ್ಧತೆ ನಿಮ್ಮಲ್ಲಿರಬೇಕು. ಅವನು ಕೋಲಿನಿಂದ ಹೊಡೆದರೆ ನೀವೂ ಕೋಲಿನಿಂದಲೇ ಹೊಡೆಯಿರಿ. ಕಾನೂನಿನಂತೆ ಪ್ರತಿಯೊಬ್ಬನಿಗೆ ಸ್ವಸಂರಕ್ಷಣೆ ಮಾಡಿಕೊಳ್ಳುವ ಅಧಿಕಾರವಿದೆ. ನಾನು ಬ್ಯಾರಿಸ್ಟರ್‌ನಾಗಿರುವುದರಿಂದ ಈ ಮಾತು ಹೇಳುತ್ತಿದ್ದೇನೆ. ಏಕೆಂದರೆ ಪ್ರತಿಯೊಬ್ಬರ ಸಹಾಯಕ್ಕೆ ಪೊಲೀಸರನ್ನು ನೀಡುವುದು ಸಾಧ್ಯವಿಲ್ಲ. ನೀವಿಂದು ಜಾತಿಭೇದ, ಧರ್ಮಭೇದವನ್ನು ಮರೆತು ಗೌಡಕಿಯನ್ನು ನಾಮಾವಶೇಷ ಮಾಡಬೇಕಾಗಿದೆ. ರೈತರೆಲ್ಲ ಒಂದೇ ಜಾತಿ ಎಂದು ತಿಳಿಯಬೇಕು. ಹಾಗೆಯೇ ಗೌಡ ಮಹಾರಗೇಣಿದಾರರನ್ನು ಕಿತ್ತೊಗೆದರೆ, ಅದನ್ನು ಮುಸಲ್ಮಾನ ಗೇಣಿದಾರ ಮಾಡಬಾರದು. ಹಾಗೆಯೇ ಮುಸಲ್ಮಾನರನ್ನು ಕಿತ್ತೊಗೆದರೆ ಮಹಾರರು ಕೆಲಸ ಮಾಡಬಾರದು. ಇಂದು ಗೌಡರು ನಿಮ್ಮ ದೌರ್ಜನ್ಯ ಮಾಡುತ್ತಿದ್ದರೂ ಇದೇ ಕೊನೆಯದು. ಮನುಷ್ಯ ಸಾಯುವಾಗ ಹೆಚ್ಚು ಒದ್ದಾಡುತ್ತಾನೆ. ಸ್ವತಂತ್ರ ಕಾರ್ಮಿಕ ಪಕ್ಷವು ನಿಮಗಾಗಿ ಗೌಡಿಕೆ ಮಸೂದೆಯನ್ನು ತಂದಿದೆ. ಇದು ನಿಮಗೂ ಗೊತ್ತಿರಬಹುದು. ಅದರಿಂದ ಕಾಯ್ದೆ ಮಂಡಳದಲ್ಲಿ ಕಾಂಗ್ರೆಸ್ ಬಹುಮತ ಅಂಗೀಕಾರವಾಗದಿದ್ದರೆ ನಾನು ಆಜ್ಞೆ ಮಾಡಿದ ಕೂಡಲೇ ಎಲ್ಲ ಗೇಣಿದಾರರು ಗೌಡನಿಗೆ ಗುತ್ತಿಗೆ ನೀಡುವುದನ್ನು ಸ್ಥಗಿತ ಮಾಡಿ. ಆಗವನು ನಿಮ್ಮ ‘ದಾವೆ’ ಹೂಡಿ ಜಪ್ತಿ ವಾರಂಟ್ ತಂದು, ನಿಮ್ಮಲ್ಲಿರುವ ಧಾನ್ಯವನ್ನು ಬೆಲಿಫ್‌ನಿಂದ ಜಪ್ತು ಮಾಡಿ ಒಯ್ಯುತ್ತಾನೆ. ಆದರೆ ರತ್ನಗಿರಿ ಜಿಲ್ಲೆಯ ರೈತರೆಲ್ಲರೂ ಸೇರಿ ಗೌಡನಿಗೆ ಗುತ್ತಿಗೆ ಹಾಕುವುದನ್ನು ನಿಲ್ಲಿಸಿದರೆ ಸರಕಾರಕ್ಕೆ ಪಾಠ ಕಲಿಸಿದಂತಾಗುತ್ತದೆ. ಏಕೆಂದರೆ ಪ್ರತಿ ತಾಲೂಕಿನಲ್ಲೂ 50-60 ಸಾವಿರ ರೈತರಿದ್ದಾರೆ. ಈ ಲೆಕ್ಕದಂತೆ ಗೌಡ ಅಷ್ಟೇ ದಾವೆಯನ್ನು ಹೂಡಬೇಕಾಗುತ್ತದೆ. ಪ್ರತಿ ತಾಲೂಕಿನಲ್ಲಿ ಇಬ್ಬರೋ ಮೂವರೋ ಬೆಲಿಫ್ ಇರುವುದರಿಂದ ಇಷ್ಟೆಲ್ಲ ರೈತರಿಂದ ವಸೂಲಿ ಮಾಡುವುದು ಅಸಾಧ್ಯ. ಇದರಿಂದ ಗೌಡಕಿಗೆ ಆಘಾತಬೀಳದೆ ಇರಲಾರದು. ಆಗ ನೀವು ಕಾರಾಗೃಹಕ್ಕೆ ಹೋಗಲೂ ಸಿದ್ಧರಾಗಬೇಕು. ನಿಮಗಾಗಿ ನಾನು ಕಾರಾಗೃಹ ಸೇರಲೂ ಸಿದ್ಧ. ಪ್ರಸಂಗ ಬಂದರೆ ಪಕ್ಷದ ಕಾರ್ಯಕರ್ತರೂ ಸಿದ್ಧರಾಗುತ್ತಾರೆ. ಆದರೆ ನೀವೂ ಆತ್ಮಬಲಿದಾನಕ್ಕೆ ಸಿದ್ಧರಾಗಬೇಕು. ಸೆರೆವಾಸ ಅಪಮಾನವಲ್ಲ. ಏಕೆಂದರೆ ಅಧಿಕಾರದಲ್ಲಿರುವ ‘ಎಲ್ಲ ಕಾಂಗ್ರೆಸ್ ದಿವಾನರು’ ಸೆರೆಮನೆಗೆ ಹೋಗಿ ಬಂದವರೇ, ನೀವು ಕಳ್ಳತನ ಅಥವಾ ಯಾವುದೇ ಅಪರಾಧಕ್ಕಾಗಿ ಸೆರೆಮನೆಗೆ ಹೋಗುತ್ತಿಲ್ಲ. ಒಂದು ತತ್ವಕ್ಕಾಗಿ ಹೋಗುತ್ತಿದ್ದೀರಿ, ಅಷ್ಟೇ.

‘‘ಸ್ವತಂತ್ರ ಕಾರ್ಮಿಕ ಪಕ್ಷವು ರೈತರನ್ನು ವಂಚಿಸುವ ಪಕ್ಷವಾಗಿದೆ. ಅಂಬೇಡ್ಕರ್ ಮಹಾರರ ಮೂಲಕ ಕುಲಗೆಡಿಸುವ, ಪಂಕ್ತಿ ಭೋಜನ, ಲಗ್ನ ಸಮಾರಂಭದಲ್ಲಿ ಗಲಿಬಿಲಿ ಹಂಚುವ ಪ್ರಯತ್ನ ಮಾಡುತ್ತಿದೆ’’ ಎಂದು ಕಾಂಗ್ರೆಸ್‌ನ ಕೆಲಪ್ರಚಾರಕರು ವದಂತಿಯನ್ನು ಹರಡುತ್ತಿದ್ದಾರೆ. ನೀವು ಅವರ ಮಾತಿಗೆ ಮರಳಾಗಬೇಡಿ. ಮಹಾರ ಜನರು ಸತತ ನನ್ನನ್ನು ಅನುಸರಿಸುತ್ತಾರೆ ಎಂಬ ನಂಬಿಕೆ ನನಗಿದೆ. ಆದರೆ ನೀವು ಗೇಣಿದಾರರು ಮತ್ತು ಉಳಿದವರು ಗೌಡರ ಮಸೂದೆ ಅಂಗೀಕಾರಗೊಂಡ ಬಳಿಕ ಸ್ವತಂತ್ರ ಕಾರ್ಮಿಕ ಪಕ್ಷದ ಜೊತೆಗಿನ ಸಂಬಂಧವನ್ನು ಕಡಿದುಕೊಂಡು, ಹೊಳೆದಾಟಿದ ಮೇಲೆ...... ಅಂತಾರಲ್ಲ ಹಾಗೆ ಮಾಡಲಾರರು ಎಂಬ ನಂಬಿಕೆ ನನಗಿದೆ. ನೀವು ಹಲವಾರು ತಲೆಮಾರಿನವರೆಗೆ ಸ್ವತಂತ್ರ ಕಾರ್ಮಿಕ ಪಕ್ಷದ ಜೊತೆಗೆ ಸಂಬಂಧವಿರಿಸಿಕೊಳ್ಳಿ, ಏಕೆಂದರೆ ಗೌಡಕಿ ಮಸೂದೆಯ ಬಳಿಕ ಹಲವು ಬಿಲ್‌ನ್ನು ಪಕ್ಷ ತರಲಿದೆ. ರೈತರ ಮತ್ತು ಕಾರ್ಮಿಕರ ಕೈಗೆ ಸತ್ತೆಯನ್ನು ತಂದು ಕೊಡುವುದೇ ಸ್ವತಂತ್ರ ಕಾರ್ಮಿಕ ಪಕ್ಷದ ಅಂತಿಮ ಧ್ಯೇಯ. ಅದರಿಂದ ಅವರದೇ ಸರಕಾರ ಅಸ್ತಿತ್ವಕ್ಕೆ ಬರಲಿದೆ.

ಈ ರೀತಿಯಲ್ಲಿ ಅಂಬೇಡ್ಕರರ 1:30 ಗಂಟೆಯ ಕಾಲದ ವಿಚಾರಪೂರಿತ ಭಾಷಣ ಮುಗಿದ ಬಳಿಕ ಭಾಯಿ ಟಿಪಣಿಸ, ಭಾಯಿ ಚಿತ್ರೆ, ಭಾಯಿ ಕೋವಳೆ, ಭಾಯಿ ಪ್ರಧಾನ ಮುಂತಾದವರೂ ಭರ್ಜರಿ ಭಾಷಣ ಮಾಡಿದರು. ‘ಡಾ.ಅಂಬೇಡ್ಕರರಿಗೆ ಜಯವಾಗಲಿ’ ಎಂಬ ಜೈಘೋಷದೊಂದಿಗೆ ಸಭೆ ಮುಕ್ತಾಯಗೊಂಡಿತು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News