ಸಂಸತ್‌ನೊಳಗೇ ನಡೆದ ಕಗ್ಗೊಲೆ!

Update: 2020-03-13 06:59 GMT

ದಿಲ್ಲಿ ಹಿಂಸಾಚಾರದ ಕುರಿತಂತೆ ಕೊನೆಗೂ ಈ ದೇಶದ ಗೃಹ ಸಚಿವರು ಬಾಯಿ ತೆರೆದಿದ್ದಾರೆ. ಅಂದರೆ ಹಿಂಸಾಚಾರದಲ್ಲಿ ಎಷ್ಟು ಹೆಣಗಳು ಬಿದ್ದಿವೆ ಎನ್ನುವುದನ್ನು ಎಣಿಸಿ ಸದನದ ಮುಂದೆ ಇಟ್ಟಿದ್ದಾರೆ. ‘ಒಟ್ಟು 52 ಭಾರತೀಯರು ಮೃತಪಟ್ಟಿದ್ದಾರೆ’ ಎಂದು ಅವರು ಸಂಸತ್‌ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಮೃತರೆಲ್ಲರನ್ನೂ ‘ಭಾರತೀಯರು’ ಎಂದು ಕರೆಯುವ ಕೃಪೆ ತೋರಿದ ಉದಾರತನಕ್ಕಾಗಿ ಅಮಿತ್ ಶಾ ಅವರನ್ನು ದೇಶ ಅಭಿನಂದಿಸಬೇಕಾಗಿದೆ. ಸತ್ತವರೆಲ್ಲರೂ ಪಾಕಿಸ್ತಾನಿಯರು ಎಂದು ಕೈ ತೊಳೆದುಕೊಳ್ಳುವ ಎಲ್ಲ ‘ಹಕ್ಕು’ಗಳು ಅವರಿಗಿತ್ತು. ಆದರೆ ಅವರು ಸಂಸತ್‌ನಲ್ಲಿ ಹಾಗೆ ಮಾಡಿಲ್ಲ ಎನ್ನುವುದು ಪ್ರಜಾಸತ್ತೆಗೆ ಮಾಡಿದ ಬಹುದೊಡ್ಡ ಉಪಕಾರವಾಗಿದೆ. ಈ ವಿಷಯದಲ್ಲಿ ಅವರು ಇನ್ನೂ ಎರಡು ಹೆಜ್ಜೆ ಮುಂದೆ ಹೋಗಿದ್ದಾರೆ. ‘ಒಟ್ಟು 52 ಭಾರತೀಯರು ಮೃತಪಟ್ಟಿದ್ದಾರೆ. ಈ ಮೃತರನ್ನು ನಾನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲಾರೆ’ ಎನ್ನುವ ಮೂಲಕ ಸಂವಿಧಾನದ ಜಾತ್ಯತೀತ ಮೌಲ್ಯಗಳ ಬದ್ಧತೆಯನ್ನು ಎತ್ತಿ ಹಿಡಿದಿದ್ದಾರೆ. ಈ ಹೇಳಿಕೆಯನ್ನು ಕೇಳಿ ಸಂಸತ್ ಬೆಚ್ಚಿ ಬಿದ್ದಿರಬಹುದು. ಯಾಕೆಂದರೆ, ಸಿಎಎ-ಎನ್‌ಆರ್‌ಸಿ ಕಾಯ್ದೆಯ ಮೂಲಕ ಇಡೀ ಭಾರತವನ್ನೇ ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಹೊರಟಿರುವ ಅಮಿತ್ ಶಾ, ದಿಲ್ಲಿಯ ಹೆಣಗಳ ಮೇಲೆ ಮಾತ್ರ ಉದಾರ ಧೋರಣೆಯನ್ನು ತೋರಿಸಿದ್ದಾರೆ. ಬಹುಶಃ ಬದುಕಿದ್ದವರನ್ನಷ್ಟೇ ಹಿಂದೂ ಮುಸ್ಲಿಮ್ ಎಂದು ವಿಭಜಿಸಿ ಅವರೆಲ್ಲ ಪರಸ್ಪರ ಬಡಿದಾಡಿ ಹೆಣಗಳಾದ ಬಳಿಕ ಅವರನ್ನು ಭಾರತೀಯರೆಂದು ಘೋಷಿಸುವ ಹೊಸ ಯೋಜನೆಯೊಂದು ಗೃಹ ಸಚಿವರ ಬಳಿಯಿರಬಹುದು.

ದಿಲ್ಲಿಯ ಹಿಂಸಾಚಾರಕ್ಕಾಗಿ ಈ ಹಿಂದೆಯಾದರೆ, ಗೃಹ ಸಚಿವ ಸ್ಥಾನದಲ್ಲಿದ್ದ ಯಾವನೇ ನಾಯಕ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತಿತ್ತು. ಸದ್ಯಕ್ಕೆ ನೈತಿಕತೆಯ ಜಾಗದಲ್ಲಿ ಕೂತು ಅನೈತಿಕತೆ ದೇಶವಾಳುತ್ತಿರುವುದರಿಂದ ‘ನೈತಿಕ ಹೊಣೆ ಹೊರುವ’ ಯಾವ ಅಗತ್ಯವೂ ಇಲ್ಲ ಎನ್ನುವುದನ್ನು ಪ್ರಧಾನಿ ಸಹಿತ ಇಡೀ ಸರಕಾರವೇ ಬಹಿರಂಗವಾಗಿ ಘೋಷಣೆ ಮಾಡಿದೆ. ಗುಜರಾತ್‌ನಲ್ಲಿ ತನ್ನ ಅಧಿಕಾರಾವಧಿಯಲ್ಲಿ 2,000 ಜನರ ಹತ್ಯೆ ನಡೆದ ಕಾರಣಕ್ಕಾಗಿಯೇ ಇಂದು ದಿಲ್ಲಿಯಲ್ಲಿ ಗೃಹ ಸಚಿವ ಸ್ಥಾನವನ್ನು ಅನುಭವಿಸುತ್ತಿದ್ದೇನೆ ಎಂದು ನಂಬಿರುವ ಸಚಿವ ಅಮಿತ್ ಶಾ ಅವರಿಂದ, ಕೇವಲ 52 ಜನರ ಸಾವಿಗಾಗಿ ರಾಜೀನಾಮೆ ಬಯಸುವುದು ಗುಜರಾತ್ ಹತ್ಯಾಕಾಂಡವನ್ನು ಅಣಕಿಸಿದಂತೆ. ಒಂದು ವೇಳೆ, ಜುಜುಬಿ 52 ಜನರಿಗಾಗಿ ರಾಜೀನಾಮೆ ನೀಡಿದರೆ, ಗುಜರಾತ್‌ನಲ್ಲಿ ಮೃತಪಟ್ಟ 2,000 ಜನರಿಗೆ ಅವಮಾನಿಸಿದಂತಾಗಲಿಲ್ಲವೆ?. ಆದುದರಿಂದಲೇ ದಿಲ್ಲಿ ಹಿಂಸಾಚಾರಕ್ಕಾಗಿ ಅವರು ರಾಜೀನಾಮೆಯನ್ನು ನೀಡಿರಲಿಕ್ಕಿಲ್ಲ. ಇದೇ ಸಂದರ್ಭದಲ್ಲಿ, ‘ಶಾಂತಿ ಸ್ಥಾಪನೆಗಾಗಿ ನಾನು ಕರೆ ನೀಡಿಲ್ಲ’ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಗೃಹ ಸಚಿವರಾಗಿ ಶಾಂತಿ ಸ್ಥಾಪನೆಗೆ ಯಾಕೆ ಕರೆ ನೀಡಿಲ್ಲ ಎನ್ನುವುದನ್ನೂ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

‘‘ಶಾಂತಿ ಸ್ಥಾಪನೆಗಾಗಿ ನಾನು ಕರೆ ನೀಡಿಲ್ಲ ಎಂದು ಆರೋಪಿಸುತ್ತಿದ್ದಾರೆ, ಹೌದು. ಆದರೆ ‘ಸಿಖ್ ಹತ್ಯಾಕಾಂಡ ನಡೆದಾಗ ದೊಡ್ಡ ಮರ ಬೀಳುವಾಗ ಭೂಮಿ ಕಂಪಿಸುತ್ತದೆ’ ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು. ಅಂತಹ ಹೇಳಿಕೆಯನ್ನು ನಾನು ನೀಡಿಲ್ಲ’’ ಎಂದು ಹೇಳಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಅಂದು ಕಾಂಗ್ರೆಸ್ ನಾಯಕರು ಆ ಹೇಳಿಕೆಯನ್ನು ನೀಡದೇ ಇದ್ದಿದ್ದರೆ ಇಂದು ಅಮಿತ್ ಶಾ ಖಂಡಿತವಾಗಿಯೂ ಶಾಂತಿಗಾಗಿ ಕರೆ ಕೊಡುತ್ತಿದ್ದರು. ಆದುದರಿಂದ, ಗೃಹಸಚಿವರಾದ ಅಮಿತ್ ಶಾ ದಿಲ್ಲಿಯಲ್ಲಿ ಶಾಂತಿಗೆ ಕರೆ ನೀಡದೆ ಇರುವಲ್ಲಿ ಕಾಂಗ್ರೆಸ್ ಪ್ರಮುಖ ಕಾರಣವಾಗಿದೆ. ಅವರು ಇದಕ್ಕಾಗಿ ದಿಲ್ಲಿ ಜನರ ಮುಂದೆ ಕ್ಷಮೆ ಯಾಚಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ‘ದೊಡ್ಡ ಮರ ಬೀಳುವಾಗ ಹಿಂಸಾಚಾರ ಸಹಜ’ ಎಂಬ ಹೇಳಿಕೆಯನ್ನು ನೀಡದೇ ಇರುವ ಮೂಲಕ ಕಾನೂನು ಸುವ್ಯಸ್ಥೆಗೆ ಸಹಕರಿಸಿದ ಅಮಿತ್ ಶಾರನ್ನು ಅಭಿನಂದಿಸಬೇಕು. ಒಂದು ವೇಳೆ, ಅವರು ಅಂತಹ ಹೇಳಿಕೆ ನೀಡಿದ್ದಿದ್ದರೆ ದಿಲ್ಲಿಯಲ್ಲಿ ಹಿಂಸಾಚಾರ ಇನ್ನೂ ಹೆಚ್ಚುತ್ತಿತ್ತು. ಆದರೆ ಈ ಬಾರಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿದ್ದ ಬೃಹತ್ ಮರ ಯಾವುದು ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ‘ಈ ದೇಶದ ಆರ್ಥಿಕತೆ ಎನ್ನುವ ಬೃಹತ್ ಮರ’ ಬಿದ್ದ ಪರಿಣಾಮದಿಂದಾಗಿ ದಿಲ್ಲಿ ಹಿಂಸಾಚಾರ ನಡೆದಿರಬಹುದು ಎಂದು ನಮಗೆ ನಾವೇ ಊಹಿಸಿಕೊಳ್ಳಬೇಕಾಗುತ್ತದೆ.

ಇದೇ ಸಂದರ್ಭದಲ್ಲಿ ದಿಲ್ಲಿ ಪೊಲೀಸರು 36 ಗಂಟೆಗಳಲ್ಲಿ ಗಲಭೆಯನ್ನು ನಿಯಂತ್ರಿಸಿದ್ದಾರೆ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದು ಮಾತ್ರವಲ್ಲ, ಗಲಭೆಯಲ್ಲಿ ಪೊಲೀಸರು ವಹಿಸಿದ ಪಾತ್ರಕ್ಕಾಗಿ ಅಭಿನಂದಿಸಿದ್ದಾರೆ. ಸುಮಾರು ಎರಡು ದಿನಗಳ ಕಾಲ ದಿಲ್ಲಿಯಲ್ಲಿ ಹಿಂಸಾಚಾರ ನಡೆದಿದೆ. ಕನಿಷ್ಠ ನಲವತ್ತೆಂಟು ಗಂಟೆಗಳ ಕಾಲ ದುಷ್ಕರ್ಮಿಗಳು ಅಮಾಯಕರ ಪ್ರಾಣ, ಮಾನ, ಸೊತ್ತುಗಳನ್ನು ನಾಶ ಪಡಿಸಿದ್ದಾರೆ. ಆದರೆ ಅಮಿತ್ ಶಾ ಅವರಿಗೆ 36 ಗಂಟೆಗಳ ಲೆಕ್ಕ ಮಾತ್ರ ಸಿಕ್ಕಿದೆ. ಬಹುಶಃ ಪೊಲೀಸರು ಗಲಭೆಯಲ್ಲಿ ಕೇವಲ 36 ಗಂಟೆಗಳ ಕಾಲ ಭಾಗವಹಿಸಿದ್ದು, ಉಳಿದ ಅವಧಿಯಲ್ಲಿ ದುಷ್ಕರ್ಮಿಗಳು ಹಿಂಸಾಚಾರ ಎಸಗಿದ್ದಾರೆ ಎಂದು ಅವರು ಹೇಳುತ್ತಿರಬೇಕು. ಅಥವಾ ಪೊಲೀಸರು ಪಾತ್ರವಹಿಸಿದ ಗಲಭೆಗಳನ್ನು 36 ಗಂಟೆಯ ಅವಧಿಯಲ್ಲಿ ನಿಯಂತ್ರಿಸಲಾಯಿತು ಎಂದು ಭಾವಿಸಬೇಕು. 36 ಗಂಟೆಗಳ ಒಳಗೆ ಗಲಭೆಯಿಂದ ಹಿಂದೆ ಸರಿದುದಕ್ಕಾಗಿ ಅಮಿತ್ ಶಾ ಪೊಲೀಸರನ್ನು ಅಭಿನಂದಿಸಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅವರ ಪ್ರಕಾರ ದಿಲ್ಲಿಯಲ್ಲಿ ಪೊಲೀಸರೇ ಗಲಭೆ ನಿಯಂತ್ರಿಸಿರುವುದರಿಂದ, ಅವರು ಗಲಭೆಯಲ್ಲಿ ಪಾತ್ರವಹಿಸಿದ್ದ ಕುರಿತಂತೆ ಆರೋಪ ಮಾಡುವಂತೆಯೇ ಇಲ್ಲ.

‘ಮಸೀದಿ, ಮನೆಗಳಿಗೆ ಪೊಲೀಸರ ನೇತೃತ್ವದಲ್ಲೇ ಬೆಂಕಿ ಹಚ್ಚಲಾಯಿತು, ಅಮಾಯಕರ ಮೇಲೆ ಪೊಲೀಸರು ಹಲ್ಲೆ ನಡೆಸಿದರು’ ಎಂಬ ಆರೋಪಗಳೆಲ್ಲ ಸುಳ್ಳು ಎಂದ ಮೇಲೆ, ಈ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಯಾರ ಮೇಲೆ ಮೊಕದ್ದಮೆಗಳನ್ನು ದಾಖಲಿಸಿರಬಹುದು ಮತ್ತು ಯಾರ್ಯಾರನ್ನು ಬಂಧಿಸಿರಬಹುದು ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಅಮಿತ್ ಶಾ ಘೋಷಿಸಿದ್ದಾರೆ ಎಂದ ಮೇಲೆ, ಈಗಾಗಲೇ ಸಂತ್ರಸ್ತರ ಮೇಲೆಯೇ ಪ್ರಕರಣ ದಾಖಲಾಗಿದೆಯೆಂದು ಅರ್ಥ. ಒಟ್ಟಿನಲ್ಲಿ ಸಂತ್ರಸ್ತರು ಆರೋಪಿಸಿದ ದುಷ್ಕರ್ಮಿಗಳ ಬದಲಿಗೆ ಪೊಲೀಸರು ಯಾರ ಮೇಲೆಲ್ಲ ಆರೋಪಗಳನ್ನು ಮಾಡಿದ್ದಾರೆಯೋ ಅವರಿಗೆ ಶಿಕ್ಷೆಯಾಗಲಿದೆ ಎಂದು ಅರ್ಥ ಮಾಡಿಕೊಂಡರೆ ಆಯಿತು. ಈ ಮೂಲಕ, ದಿಲ್ಲಿಯ ಹಿಂಸಾಚಾರದಲ್ಲಿ ಮೃತಪಟ್ಟ 52 ಜನರನ್ನು ಸಂಸತ್‌ನಲ್ಲಿ ಸ್ವತಃ ಗೃಹ ಸಚಿವ ಎರಡನೇ ಬಾರಿ ಕೊಂದು ಹಾಕಿ ಕಾನೂನನ್ನು ಎತ್ತಿ ಹಿಡಿದರು. ಮೃತರ ಜೊತೆಜೊತೆಗೇ ಪ್ರಜಾಸತ್ತೆ ಮತ್ತು ಸಂವಿಧಾನವನ್ನು ಸಂಸತ್‌ನಲ್ಲೇ ಗೋರಿ ತೋಡಿ ಹುಗಿದು ಬಿಟ್ಟರು. ಶ್ರದ್ಧಾಂಜಲಿ ಸಮಾರಂಭವಷ್ಟೇ ಬಾಕಿ ಉಳಿದಿರುವುದು. ಅದು ಸುಪ್ರೀಂಕೋರ್ಟ್ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಬಹುದು. ಚಿಂತೆ ಬೇಕಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News