ರೋಗಿಗಳಲ್ಲಿ ಕೊರೋನವೈರಸ್ 37 ದಿನ ಜೀವಿಸಬಲ್ಲದು: ಚೀನಾ ವಿಜ್ಞಾನಿಗಳ ಅಧ್ಯಯನ
ಬೀಜಿಂಗ್ (ಚೀನಾ), ಮಾ. 13: ನೂತನ-ಕೊರೋನವೈರಸ್ ರೋಗಿಗಳ ಶ್ವಾಸನಾಳಗಳಲ್ಲಿ ರೋಗಾಣುಗಳು 37 ದಿನಗಳ ಕಾಲ ಇರುತ್ತವೆ, ಹಾಗಾಗಿ ರೋಗಿಗಳಲ್ಲಿ ಸೋಂಕು ಹಲವು ವಾರಗಳ ಕಾಲ ಇರುತ್ತದೆ ಎಂದು ಚೀನಾ ವೈದ್ಯರ ಅಧ್ಯಯನವೊಂದು ತಿಳಿಸಿದೆ.
ಈ ಅವಧಿಯಲ್ಲಿ ವೈರಸ್‌ನ ಆರ್‌ಎನ್‌ಎ ರೋಗಿಗಳ ಶ್ವಾಸನಾಳಗಳಲ್ಲಿ ಇರುವುದನ್ನು ವೈದ್ಯರು ಪತ್ತೆಹಚ್ಚಿದ್ದಾರೆ. ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಎಷ್ಟು ಕಷ್ಟ ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ‘ಲ್ಯಾನ್ಸೆಟ್’ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವೊಂದು ತಿಳಿಸಿದೆ.
ಕಳೆದ ವರ್ಷದ ಕೊನೆಯಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿರುವ ಕೊರೋನವೈರಸ್ ಕಾಯಿಲೆ ಈಗ 118 ದೇಶಗಳಿಗೆ ಹರಡಿದೆ ಹಾಗೂ ಸುಮಾರು 1,25,000 ಜನರು ರೋಗದ ಸೋಂಕಿಗೆ ಒಳಗಾಗಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಕೊರೋನವೈರಸ್ ಕಾಯಿಲೆಯನ್ನು ‘ಮಹಾ ಸಾಂಕ್ರಾಮಿಕ ರೋಗ’ ಎಂಬುದಾಗಿ ಘೋಷಿಸಿದೆ.
ಅತಿ ರಕ್ತದೊತ್ತಡ ಹೊಂದಿದವರು ಸಾಯುವ ಅಪಾಯ ಜಾಸ್ತಿ
ಅತಿ ರಕ್ತದೊತ್ತಡ ಹೊಂದಿರುವ ಕೊರೋನವೈರಸ್ ರೋಗಿಗಳು ಸಾಯುವ ಅಪಾಯ ಹೆಚ್ಚಿದೆ ಎಂದು ಚೀನಾದ ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ವೈದ್ಯರು ಜನವರಿಯಿಂದ ತೀವ್ರ ನಿಗಾ ಘಟಕಗಳಲ್ಲಿ ಕೊರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಇದಕ್ಕೆ ಕಾರಣವನ್ನು ತಿಳಿಸುವ ಯಾವುದೇ ಸಂಶೋಧನೆಯು ಪ್ರಕಟವಾಗಿಲ್ಲವಾದರೂ, ಚೀನಾದ ಕೊರೋನವೈರಸ್ ಸೋಂಕಿನ ಕೇಂದ್ರಬಿಂದುವಾಗಿರುವ ವುಹಾನ್‌ನಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಅತಿ ರಕ್ತದೊತ್ತಡ ಹೊಂದಿರುವ ಜನರು ಈ ಕಾಯಿಲೆಗೆ ಗುರಿಯಾದರೆ ಅವರು ಸಾಯುವ ಸಾಧ್ಯತೆ ಅಧಿಕ ಎಂದು ಹೇಳಿದ್ದಾರೆ.
ವುಹಾನ್‌ನಲ್ಲಿ ರೋಗ ಸ್ಫೋಟಗೊಂಡ ಜನವರಿಯಲ್ಲಿ, ಮೊದಲು ಮೃತಪಟ್ಟ 170 ಮಂದಿಯ ಪೈಕಿ ಅರ್ಧದಷ್ಟು ಮಂದಿ ಅತಿ ರಕ್ತದೊತ್ತಡ ಹೊಂದಿದ್ದರು.
‘‘ಇದು ಅತ್ಯಧಿಕ ಪ್ರಮಾಣವಾಗಿದೆ’’ ಎಂದು ಪೀಕಿಂಗ್ ಯೂನಿಯನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ನಿರ್ದೇಶಕರಾಗಿರುವ ಡು ಬಿನ್ ಹೇಳಿದ್ದಾರೆ.