ಕೋಮು ಗಲಭೆ: ಕೇಂದ್ರ ಸಚಿವನ ಪುತ್ರನ ವಿರುದ್ಧ ಪ್ರಕರಣಕ್ಕೆ ಅಸ್ತು

Update: 2020-03-14 04:04 GMT
ಅರ್ಜಿತ್ ಶಾಶ್ವತ್ (ಫೋಟೊ : ANI Twitter)

ಪಾಟ್ನಾ: ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರ ಪುತ್ರ ಅರ್ಜಿತ್ ಶಾಶ್ವತ್ ವಿರುದ್ಧ ಪ್ರಕರಣ ದಾಖಲಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ಪೊಲೀಸ್ ಇಲಾಖೆಗೆ ಹಸಿರು ನಿಶಾನೆ ತೋರಿದ್ದಾರೆ.

ಬಿಹಾರದ ಭಾಗಲ್ಪುರದಲ್ಲಿ ಎರಡು ವರ್ಷ ಹಿಂದೆ ನಡೆದ ಕೋಮುಗಲಭೆಯಲ್ಲಿ ಶಾಮೀಲಾದ ಆರೋಪದಲ್ಲಿ ಅರ್ಜಿತ್ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

2018ರ ಮಾರ್ಚ್ 17ರಂದು ನಡೆದ ಕೋಮುಗಲಭೆಯಲ್ಲಿ ಅರ್ಜಿತ್ ಹಾಗೂ ಇತರ ಎಂಟು ಮಂದಿ ಶಾಮೀಲಾಗಿದ್ದಾರೆ ಎಂದು ಆಪಾದಿಸಲಾಗಿತ್ತು. ಅರಿಜಿತ್ ನೇತೃತ್ವದಲ್ಲಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಧ್ವನಿವರ್ಧಕ ಬಳಸಿದ್ದನ್ನು ಕೆಲವರು ಆಕ್ಷೇಪಿಸಿದಾಗ ಗಲಭೆ ಆರಂಭವಾಗಿತ್ತು.

ದೊಂಬಿ, ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ಸೇರಿದಂತೆ ಉಂಟಾದ ಹಿಂಸಾಚಾರದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದರು. ಅರ್ಜಿತ್ ಕೈವಾಡ ವೀಡಿಯೊ ತುಣುಕಿನಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು, ಅರ್ಜಿತ್ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದರು. ಪೊಲೀಸರಿಗೆ ಶರಣಾದ ಬಳಿಕ 2018ರ ಎಪ್ರಿಲ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣ ನಿತೀಶ್ ಹಾಗೂ ಬಿಜೆಪಿ ಮುಖಂಡರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಜಿತ್ ಸೇರಿದಂತೆ ಒಂಬತ್ತು ಮಂದಿಯ ವಿಚಾರಣೆಗೆ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಶೀಘ್ರವೇ ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗಲಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News