ಚೀನಾ: ಹೊರದೇಶಗಳಿಂದ ಬಂದಿರುವ ಕೊರೋನ ಪ್ರಕರಣಗಳಲ್ಲಿ ಹೆಚ್ಚಳ

Update: 2020-03-15 16:05 GMT

ಬೀಜಿಂಗ್, ಮಾ. 15: ಕಳೆದ 24 ಗಂಟೆಗಳ ಅವಧಿಯಲ್ಲಿ ಹೊರದೇಶಗಳಿಂದ ಬಂದಿರುವ 16 ನೂತನ ಕೊರೋನವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಚೀನಾ ರವಿವಾರ ತಿಳಿಸಿದೆ. ಇದು ಒಂದು ವಾರದಲ್ಲೇ ಗರಿಷ್ಠವಾಗಿದೆ. ಚೀನಾದಲ್ಲಿ ದೇಶಿ ಕೊರೋನವೈರಸ್ ಪ್ರಕರಣಗಳು ಇಳಿಮುಖವಾಗಿರುವಂತೆಯೇ, ವಿದೇಶಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.

 ಐದು ರಾಜ್ಯಗಳು ಮತ್ತು ಬೀಜಿಂಗ್ ಮತ್ತು ಶಾಂಘೈ ಸೇರಿದಂತೆ ಹಲವು ನಗರಗಳಲ್ಲಿ ವಿದೇಶಗಳಿಂದ ಬಂದಿರುವವರ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಇದೇ ಅವಧಿಯಲ್ಲಿ, ಕೇವಲ ನಾಲ್ಕು ದೇಶಿ ಕೊರೋನವೈರಸ್ ಪ್ರಕರಣಗಳು ವರದಿಯಾಗಿವೆ. ಈ ಎಲ್ಲ ಪ್ರಕರಣಗಳು, ಚೀನಾದ ಕೊರೋನವೈರಸ್ ಕೇಂದ್ರಬಿಂದು ವುಹಾನ್ ನಗರದಲ್ಲಿ ಪತ್ತೆಯಾಗಿವೆ.

ಚೀನಾದಲ್ಲಿ ಈ ಅವಧಿಯಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲ ಸಾವುಗಳು ವುಹಾನ್‌ನಲ್ಲೇ ಸಂಭವಿಸಿವೆ. ಇದರೊಂದಿಗೆ, ಚೀನಾದಲ್ಲಿ ಮಾರಕ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆ 3,199ಕ್ಕೆ ಏರಿದೆ. ಒಟ್ಟು 80,000ಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News