ತನ್ನ ಹೆಸರಲ್ಲಿ ಕೊಲೆ ನಡೆಸುವುದನ್ನು ಯಾವ ತಾಯಿಯೂ ಒಪ್ಪುವುದಿಲ್ಲ: ಪೆಹ್ಲೂ ಖಾನ್ ಹತ್ಯೆ ಬಗ್ಗೆ ಬಾಲನ್ಯಾಯ ಮಂಡಳಿ

Update: 2020-03-15 17:06 GMT

ಜೈಪುರ, ಮಾ.15: ಪೆಹ್ಲೂಖಾನ್ ಹತ್ಯೆ ಪ್ರಕರಣದಲ್ಲಿ ದೋಷಿಗಳಾದ ಇಬ್ಬರು ಅಪ್ರಾಪ್ತ ವಯಸ್ಸಿನ ಯುವಕರಿಗೆ 3 ವರ್ಷದ ಶಿಕ್ಷೆ ವಿಧಿಸಿದ ಆಲ್ವಾರ್‌ನ ಬಾಲನ್ಯಾಯ ಮಂಡಳಿ, ಈ ಭೀಬತ್ಸ ಮತ್ತು ನಾಚಿಕೆಗೇಡಿನ ಕೃತ್ಯವನ್ನು ಗೋಮಾತೆ(ಹಸು)ಯ ರಕ್ಷಣೆಯ ಕಾರ್ಯ ಎಂದು ಬಿಂಬಿಸಲಾಗಿದೆ. ಆದರೆ ಯಾವೊಬ್ಬ ತಾಯಿಯೂ ತನ್ನ ಹೆಸರಲ್ಲಿ ಪುತ್ರರು ಕೊಲೆ ನಡೆಸುವುದನ್ನು ಅನುಮತಿಸಲಾರಳು ಎಂದು ಹೇಳಿದೆ.

ಅವರಿಗೆ(ಗುಂಪಿನಲ್ಲಿದ್ದವರಿಗೆ) ಆಕ್ಷೇಪಾರ್ಹ ಎಂದು ಅನಿಸಿದ್ದರೆ ಶಂಕಿತರನ್ನು ಪೊಲೀಸರಿಗೆ ಹಸ್ತಾಂತರಿಸಬೇಕಿತ್ತು. ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಪೊಲೀಸ್ ಠಾಣೆಯಿತ್ತು . ಅಲ್ಲದೆ ಪಶುಗಳ ರಕ್ಷಣೆಗಾಗಿ ಕಠಿಣ ಕಾನೂನಿದೆ. ಜನತೆ ಕಾನೂನನ್ನು ಕೈಗೆತ್ತಿಕೊಂಡರೆ ಆಗ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಇದು ಸ್ವೀಕಾರಾರ್ಹವಲ್ಲ. ಈ 21ನೇ ಶತಮಾನದಲ್ಲಿ , ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ದೇಶವಾದ ಭಾರತದಲ್ಲಿ ಕೆಲವು ಸಮಾಜ ವಿರೋಧಿ ಶಕ್ತಿಗಳು ಧರ್ಮದ ವಿಚಾರದಲ್ಲಿ ಯುವಕರ ಬುದ್ಧಿಕೆಡಿಸಿ, ಅವರನ್ನು ಗೋರಕ್ಷಕ ದಳದಂತಹ ಅಕ್ರಮ ತಂಡಗಳಿಗೆ ಸೇರಿಸಿ ಕೊಲೆ ನಡೆಸಲು ಪ್ರೇರೇಪಿಸುವುದು ಸರಿಯಲ್ಲ ಎಂದು ನ್ಯಾಯಮಂಡಳಿ ಹೇಳಿದೆ.

ಗೋರಕ್ಷಕರು ಎಂದು ಹೇಳಿಕೊಂಡ ತಂಡದಿಂದ ತೀವ್ರ ಹಲ್ಲೆಗೊಳಗಾಗಿದ್ದ ಪೆಹ್ಲೂಖಾನ್‌ರನ್ನು ಬೆಹ್ರೂರ್‌ನ ಕೈಲಾಶ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಖಾನ್ ಎರಡು ದಿನದ ಬಳಿಕ ಮೃತಪಟ್ಟಿದ್ದರು. ಅಲ್ಲಿನ ವೈದ್ಯರಾದ ಆರ್ ಸಿ ಯಾದವ್, ಅಖಿಲ್ ಸಕ್ಸೇನಾ, ಬಿ.ಡಿ ಶರ್ಮ ಮತ್ತು ಜಿತೇಂದ್ರ ಬುಟೋಲಿಯಾ ತಮ್ಮ ಹೇಳಿಕೆಯಲ್ಲಿ ಖಾನ್ ಮೈಮೇಲಿದ್ದ ಗಾಯದ ಬಗ್ಗೆ ಬೇರೆಬೇರೆ ಹೇಳಿಕೆ ನೀಡಿದ್ದರು. ಖಾನ್ ದೇಹದಲ್ಲಿ ಸಣ್ಣಪುಟ್ಟ ಗಾಯಗಳಿದ್ದವು ಎಂದು ಸಕ್ಸೇನಾ ಹೇಳಿದ್ದರೆ, ಶರ್ಮ ನೀಡಿದ್ದ ಹೇಳಿಕೆ ಪ್ರಕಾರ ಖಾನ್‌ರ ಪಕ್ಕೆಲುಬು ಮುರಿದಿತ್ತು. ಯಾದವ್ ಪ್ರಕಾರ ಖಾನ್ ಮೈಮೇಲೆ ಗಾಯದ ಗುರುತೇ ಇರಲಿಲ್ಲ. ಖಾನ್ ಅವರ ಪಕ್ಕೆಲುಬು ಹಲವೆಡೆ ಮುರಿದಿತ್ತು ಎಂದು ಬುಟೋಲಿಯಾ ಹೇಳಿಕೆ ನೀಡಿದ್ದರು. ಖಾನ್ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಎಲ್ಲಾ ವೈದ್ಯರೂ ಒಮ್ಮತದ ಹೇಳಿಕೆ ದಾಖಲಿಸಿದ್ದರು.

ಯಾವುದೇ ಪರೀಕ್ಷೆ ನಡೆಸದೆ ಖಾನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿರುವುದಕ್ಕೆ ತೀವ್ರ ಆಕ್ಷೇಪ ಸೂಚಿಸಿದ ನ್ಯಾಯಮಂಡಳಿ, ಹಲ್ಲೆಯಿಂದ ಮರಣ ಸಂಭವಿಸಿರುವುದನ್ನು ಹೃದಯಾಘಾತದಿಂದ ಮರಣ ಸಂಭವಿಸಿದೆ ಎಂದು ಬದಲಾಯಿಸಿದ್ದಕ್ಕೆ ಕಾರಣ ನೀಡುವಂತೆ ತಿಳಿಸಿ ನಾಲ್ವರು ವೈದ್ಯರಿಗೂ ನೋಟಿಸ್ ಜಾರಿಗೊಳಿಸಿದೆ. ಕೈಲಾಶ್ ಆಸ್ಪತ್ರೆ ಬಿಜೆಪಿ ಸಂಸದ ಮಹೇಶ್ ಶರ್ಮರ ಒಡೆತನದಲ್ಲಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News