ನಿರ್ಭಯಾ ಪ್ರಕರಣ: ಆರೋಪಿಗಳಿಗೆ ಮಾರ್ಚ್ 20ಕ್ಕೆ ಗಲ್ಲು ಖಚಿತ
ಹೊಸದಿಲ್ಲಿ, ಮಾ. 16: ತನ್ನ ಮರಣದಂಡನೆಯ ವಿರುದ್ಧ ಹೊಸ ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಓರ್ವ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಇದರೊಂದಿಗೆ ನಾಲ್ವರು ಆರೋಪಿಗಳು ಮಾ. 20ಕ್ಕೆ ಗಲ್ಲಿಗೇರುವುದು ಬಹುತೇಕ ಖಚಿತವಾಗಿದೆ. ಯಾವುದೇ ಕಾನೂನು ಪರಿಹಾರದ ಅವಕಾಶ ಉಳಿದಿಲ್ಲ. ನೀವು (ಮುಖೇಶ್ ಸಿಂಗ್) ಕ್ಷಮಾದಾನ ಅರ್ಜಿ ಸಲ್ಲಿಸಿದ್ದಿರಿ. ಅದು ತಿರಸ್ಕೃತವಾಯಿತು. ವಾರಂಟ್ ಜಾರಿಗೊಳಿಸಲಾಯಿತು. ಪರಿಹಾರಾತ್ಮಕ ಅರ್ಜಿಯನ್ನೂ ತಿರಸ್ಕರಿಸಲಾಯಿತು. ಇನ್ನು ಯಾವ ಕಾನೂನು ಪರಿಹಾರಾತ್ಮಕ ಮಾರ್ಗಗಳು ಉಳಿದಿವೆ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಎಂ. ಆರ್. ಶಾ ಅವರಿದ್ದ ಪೀಠ ಪ್ರಶ್ನಿಸಿತು.
ಪ್ರಕರಣದಲ್ಲಿ ನ್ಯಾಯಾಲಯಗಳು ಈ ಹಿಂದಿದೆ ನೀಡಿದ್ದ ಎಲ್ಲ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದ ಮುಖೇಶ್ ಸಿಂಗ್, ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರಿಂದ ನನ್ನ ಕ್ಷಮಾದಾನ ಅರ್ಜಿ ತಿಸ್ಕೃತವಾಗಲು ಹಾಗೂ ಕಾನೂನು ಪರಿಹಾರಾತ್ಮಕ ಅರ್ಜಿ ತಿರಸ್ಕೃತಗೊಳ್ಳಲು ವಕೀಲರಾದ ವೃಂದಾ ಗ್ರೋವರ್ ಕಾರಣ ಎಂದು ಹೇಳಿದ್ದಾನೆ.
ಈ ಪ್ರಕರಣದಲ್ಲಿ ಕೇಂದ್ರ ಸರಕಾರ, ದಿಲ್ಲಿ ಸರಕಾರ ಹಾಗೂ ಆ್ಯಮಿಕಸ್ ಕ್ಯೂರಿ (ಸರಕಾರದ ಕಾನೂನು ಸಲಹೆಗಾರ್ತಿ)ಯಾಗಿ ಕಾರ್ಯ ನಿರ್ವಹಿಸಿದ ನ್ಯಾಯವಾದಿ ವೃಂದಾ ಗ್ರೋವರ್‌ರ ಕ್ರಿಮಿನಲ್ ಪಿತೂರಿ ಹಾಗೂ ವಂಚನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ನ್ಯಾಯವಾದಿ ಎಂ.ಎಲ್. ಶರ್ಮಾ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ಮುಖೇಶ್ ಆಗ್ರಹಿಸಿದ್ದಾನೆ. ಆದರೆ, ಮುಖೇಶ್ ಸಿಂಗ್‌ನ ಯಾವುದೇ ವಾದವನ್ನೂ ಅಲಿಸದ ಸುಪ್ರೀಂ ಕೋರ್ಟ್ ಆತನ ಅರ್ಜಿಯನ್ನು ತಳ್ಳಿ ಹಾಕಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ ಆರೋಪಿಗಳು
ತಮಗೆ ವಿಧಿಸಿರುವ ಮರಣದಂಡನೆ ತಡೆ ನೀಡುವಂತೆ ಕೋರಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರಲ್ಲಿ ಮೂವರು ಆರೋಪಿಗಳಾದ ಅಕ್ಷಯ್ ಸಿಂಗ್, ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.