ಸಿಎಎ-ಎನ್‌ಆರ್‌ಸಿ ಕುರಿತು ವಿಪಕ್ಷಗಳೊಂದಿಗೆ ಮೋದಿ, ಅಮಿತ್ ಶಾ ಮಾತುಕತೆ ಆರಂಭಿಸಬೇಕು: ಆರೆಸ್ಸೆಸ್

Update: 2020-03-16 18:01 GMT

 ಬೆಂಗಳೂರು,ಮಾ.16: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಜಾರಿಗೊಳಿಸುವ ಕೇಂದ್ರದ ನಿರ್ಧಾರವನ್ನು ಸೋಮವಾರ ಇಲ್ಲಿ ಆರೆಸ್ಸೆಸ್ ಸ್ವಾಗತಿಸಿತಾದರೂ,ಈ ವಿವಾದಾತ್ಮಕ ಕಾಯ್ದೆಗಳ ಕುರಿತು ಎಲ್ಲ ಶಂಕೆಗಳನ್ನು ನಿವಾರಿಸಲು ಪ್ರತಿಪಕ್ಷಗಳೊಂದಿಗೆ ಮಾತುಕತೆಗಳನ್ನು ಆರಂಭಿಸುವಂತೆ ಸರಕಾರವನ್ನು ಆಗ್ರಹಿಸಿದೆ.

ಕೊರೋನವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರದ ನಿರ್ದೇಶಗಳಂತೆ ಇಲ್ಲಿ ನಡೆಯಲಿದ್ದ ತನ್ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಆರೆಸ್ಸೆಸ್ ರದ್ದುಗೊಳಿಸಿ ತ್ತಾದರೂ ತನ್ನ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿಯ ಸಭೆಯನ್ನು ನಡೆಸಿತು.

ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳ ಬಗ್ಗೆ ಮಾಧ್ಯಮಗಳಿಗೆ ವಿವರಗಳನ್ನು ನೀಡಿದ ಆರೆಸ್ಸೆಸ್‌ನ ಪ್ರಧಾನ ಕಾರ್ಯದರ್ಶಿ ಸುರೇಶ ಭಯ್ಯೆಜಿ ಜೋಶಿ ಅವರು,ರಾಜಕೀಯ ಪಕ್ಷಗಳು ರಾಷ್ಟ್ರೀಯ ವಿಷಯಗಳನ್ನು ರಾಜಕೀಕರಿಸುತ್ತಿರುವುದು ನಿಜಕ್ಕೂ ತೊಂದರೆಗಳನ್ನು ಸೃಷ್ಟಿಸುತ್ತಿದೆ. ಪ್ರತಿಪಕ್ಷಗಳ ಎಲ್ಲ ಶಂಕೆಗಳನ್ನು ನಿವಾರಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಆಡಳಿತ ಪಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಈ ಸಂಬಂಧ ಮಾತುಕತೆಗಳನ್ನು ಆರಂಭಿಸಬೇಕು ಎಂದರು. ಕಾಯ್ದೆಗಳ ಅಗತ್ಯವನ್ನು ತಿಳಿದುಕೊಳ್ಳಲು ಪ್ರತಿಪಕ್ಷಗಳು ಯಾವುದೇ ಆಸಕ್ತಿಯನ್ನು ತೋರಿಸಿರಲಿಲ್ಲ,ಹೀಗಾಗಿ ಅವುಗಳೊಂದಿಗೆ ಮಾತುಕತೆ ನಡೆಸುವ ಸರಕಾರದ ಹಿಂದಿನ ಪ್ರಯತ್ನಗಳು ವಿಫಲಗೊಂಡಿದ್ದವು ಎಂದು ಇದೇ ವೇಳೆ ಹೇಳಿದ ಜೋಶಿ,ಆಡಳಿತ ಪಕ್ಷವು ಮಾತುಕತೆಗಳಿಗೆ ಚಾಲನೆ ನೀಡಬೇಕು,ಆದರೆ ಮಾತುಕತೆಗಳಲ್ಲಿ ಹೆಚ್ಚಿನ ಆಸಕ್ತಿ ಇಲ್ಲವೆಂಬಂತೆ ಕಂಡುಬರುತ್ತಿರುವ ಪ್ರತಿಪಕ್ಷಗಳೂ ಅದಕ್ಕೆ ಸ್ಪಂದಿಸುವ ಅಗತ್ಯವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News