ರಂಜನ್ ಗೊಗೋಯ್, ಎನ್.ಆರ್.ಸಿ. ಹಾಗೂ ಮೋದಿ ಕಾಲದಲ್ಲಿ ನ್ಯಾಯಾಂಗ

Update: 2020-03-17 05:30 GMT

ಆತ್ಮೀಯರೇ ,

ನಿವೃತ್ತ ಮುಖ್ಯ "ನ್ಯಾಯಮೂರ್ತಿ" ರಂಜನ್ ಗೊಗೋಯ್ ಅವರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನೇಮಕ ಮಾಡಿದ ನಂತರ ರಂಜನ್ ಗೊಗೋಯ್ ಮತ್ತು ನಮ್ಮ ನ್ಯಾಯಾಂಗದ ‘ನ್ಯಾಯ ನಿಷ್ಠತೆ’ ಯ ಬಗ್ಗೆ ಸಾಕಷ್ಟು ಸಕಾರಣ ಅನುಮಾನಗಳು ಹುಟ್ಟಿಕೊಂಡಿವೆ. ಈ ಚರ್ಚೆಗೆ ಪೂರಕವಾಗಿ ಮತ್ತಷ್ಟು ವಿಷಯಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.

1. ಇಂದು ಅಕ್ರಮ ವಲಸಿಗರನ್ನು ಹೊರಹಾಕುವ ಹೆಸರಲ್ಲಿ ಇಡೀ ಅಸ್ಸಾಮಿನ ಎಲ್ಲಾ ಮೂಲನಿವಾಸಿಗಳ ಪೌರತ್ವವನ್ನು ಪರಿಶೀಲಿಸುವ ಎನ್.ಆರ್.ಸಿ. ಎಂಬ ಅರಾಜಕತೆಗೆ ದೂಡಿದ್ದು ಇದೆ ರಂಜನ್ ಗೊಗೋಯ್ ಅವರ ನೇತೃತ್ವದ ಸುಪ್ರೀಂಕೋರ್ಟಿನ ಪೀಠ.

ಅಸ್ಸಾಮಿನ ಮೂಲ ನಾಗರಿಕರು ಸಾಬೀತು ಮಾಡಲಾಗದಂತ ದಾಖಲೆಗಳನ್ನು ಕಡ್ಡಾಯ ಮಾಡಿದ್ದು ಸಹ ಇದೆ ‘ನ್ಯಾಯಾಧೀಶರೇ’.  ಅಸ್ಸಾಮಿನ ಎನ್.ಆರ್.ಸಿ. ವಿಷಯದಲ್ಲಿ ರಂಜನ್ ಗೊಗೋಯ್ ಅವರು ತಾವೇ ಶಾಸಕಾಂಗ ಹಾಗು ಕಾರ್ಯಾಂಗವಾಗಿಯೂ ಕಾರ್ಯನಿರ್ವಹಿಸಿದ್ದರು!

 ಪೌರತ್ವವನ್ನು ಸಾಬೀತುಪಡಿಸಲು ರೇಷನ್ ಕಾರ್ಡ್, ಓಟರ್ ಕಾರ್ಡ್ ಗಳು ಸಾಲದು ಎಂದು ಗೌಹಾತಿ ಹೈಕೋರ್ಟಿ ನೀಡಿದ ಅವಿವೇಕದ ತೀರ್ಪುಗಳನ್ನು ಹೆಚ್ಚಿನ ವಿಚಾರಣೆ ಇಲ್ಲದೆ ಎತ್ತಿ ಹಿಡಿದದ್ದು ಕೂಡಾ ಇವರ ಪೀಠವೇ .

ಹಾಗೆಯೇ ತಮ್ಮ ಹುಟ್ಟು, ಹಾಗು ಬದುಕಿನ ಬಗ್ಗೆ ಯಾವ ದಾಖಲೆಗಳು ಇರದ ಅಸ್ಸಾಮಿನ ಮೂಲ ನಿವಾಸಿ ಮಹಿಳೆಯರ ಪೌರತ್ವ ಸಾಬೀತುಪಡಿಸಲು ಅವರು ವಾಸಿಸುತ್ತಿದ್ದ ಹಳ್ಳಿಯ ಗ್ರಾಮಾಧಿಕಾರಿ ಕೊಡುವ ಹೇಳಿಕೆಯನ್ನು ಪೌರತ್ವ ಅಧಿಕಾರಿಗಳು ಅಮಾನ್ಯಗೊಳಿಸಿದಾಗ ಯಾವುದೇ ಬಗೆಯ ನ್ಯಾಯ ವಿವೇಚನೆಯನ್ನು ಬಳಸದೇ ಅದನ್ನು ಕೇವಲ ಮದುವೆಯಾದ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಿದ್ದು ರಂಜನ್ ಗೊಗೋಯ್ ಅವರ ನ್ಯಾಯಪೀಠವೇ .

ಈಗ ಅಖಿಲ ಭಾರತ ಎನ್.ಆರ್.ಸಿ. ನಡೆದಲ್ಲಿ ರಂಜನ್ ಗೊಗೋಯ್ ಅವರ ಪೀಠ ಕೊಟ್ಟ ಈ ನ್ಯಾಯಾದೇಶಗಳೇ ಈ ದೇಶದ ಎಲ್ಲಾ ಜಾತಿ, ಧರ್ಮ ಹಾಗು ಸಮುದಾಯಗಳಿಗೆ ಸೇರಿದ ಎಲ್ಲ ಬಡವರು ಮತ್ತು ಹೆಂಗಸರು ತಮ್ಮ ಪೌರತ್ವವನ್ನು ಎಂದಿಗೂ ಸಾಬೀತುಪಡಿಸದಂತೆ ಮಾಡಲಿದೆ. ಅವರೆಲ್ಲರ ಬದುಕನ್ನು ನರಕ ಮಾಡಲಿದೆ.

2. ಹಾಗೆ ನೋಡಿದಲ್ಲಿ ತಮ್ಮದೇ ದೇಶದ ಜನತೆಯ ಪೌರತ್ವವನ್ನು ಅನುಮಾನಿಸಬೇಕೆಂದೂ ಹಾಗು ಹೊಟ್ಟೆಪಾಡಿಗೆ ಹೊರ ದೇಶದಿಂದ ವಲಸೆ ಬರುವವರನ್ನು ದೇಶದ ಮೇಲೆ ಆಕ್ರಮಣ ಮಾಡುವ ಶತ್ರುಗಳಂತೆ ಪರಿಗಣಿಸಬೇಕೆಂದು ಆದೇಶ ನೀಡಿದ್ದು ಸಹ ಇದೇ ಸುಪ್ರೀಂ ಕೋರ್ಟ್.

2005ರಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಲಾಹೋಟಿ, ಮಾಥುರ್ ಹಾಗು ಬಾಲಸುಬ್ರಹ್ಮಣ್ಯ ಅವರುಗಳ ತ್ರಿಸದಸ್ಯ ಪೀಠವೇ ವಲಸೆಯನ್ನು ಶತ್ರು ದೇಶಗಳ ಆಕ್ರಮಣವೆಂದು ಪರಿಗಣಿಸಬೇಕೆಂದು ತೀರ್ಪು ನೀಡಿತ್ತು. ಹಾಗು ಅಸ್ಸಾಮಿನಲ್ಲಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕೆಲಸವನ್ನು ‘ಫಾರಿನ್ ಟ್ರಿಬ್ಯುನಲ್ಸ್’ ಕಾಯಿದೆಯಡಿ ನಡೆಸಬೇಕೆಂದು ಆದೇಶಿಸಿತ್ತು.

ಇದರ ಮೂಲಕ ತಾವು ವಿದೇಶೀಯರಲ್ಲವೆಂದು ಸಾಬೀತುಪಡಿಸಬೇಕಾದ ಹೊಣೆಗಾರಿಕೆಯನ್ನು ಬಂಧಿತರ ಮೇಲೆ ವರ್ಗಾಯಿಸಲಾಯಿತು. ಮಾತ್ರವಲ್ಲದೆ ಗಡಿಯೋಧರು ಮತ್ತು ಆಸ್ಸಾಮ್ ಪೊಲೀಸರು ಅಸ್ಸಾಮಿನಲ್ಲಿ ಯಾರನ್ನು ಬೇಕಾದರೂ ಅನುಮಾನಾಸ್ಪದ ವಿದೇಶೀಯ ಎಂದು ಪರಿಗಣಿಸಿ ಬಂಧಿಸುವ ಅಧಿಕಾರವನ್ನು ನೀಡಿದಂತಾಯಿತು. ಈ ಸುಪ್ರೀಂ ಅವಿವೇಕ ಹಾಗು ಕ್ರೌರ್ಯಕ್ಕೆ ಈಗಲೂ ಬೆಲೆ ತೆರುತ್ತಿರುವವರು ಅಕ್ರಮ ವಲಸಿಗರಲ್ಲ. ಬದಲಿಗೆ ಅಮಾಯಕ ಹಾಗು ಅಸಹಾಯಕ ಅಸ್ಸಾಮಿಯರು.

3. ಬಲಪಂಥೀಯತೆ ಮತ್ತು ಮಾರುಕಟ್ಟೆ ಆರ್ಥಿಕತೆ ಉತ್ತುಂಗಕ್ಕೆ ತಲುಪಿರುವ ಈ ಹೊತ್ತಿನಲ್ಲಿ  ಭಾರತದ ನ್ಯಾಯಾಂಗ ನಿಜಕ್ಕೂ ಭ್ರಷ್ಟಾತೀತವಾಗಿದೆಯೇ ಎಂಬ ಬಗ್ಗೆ ಸಿಂಗಾಪುರ ಹಾಗು ಹಾಂಕಾಂಗ್ ವಿಶ್ವವಿದ್ಯಾನಿಲಯದ ಪ್ರೊಫೆಸರುಗಳಾದ ಮಾಧವ್, ಶುಭಂಕರ್ ಹಾಗು ಜಿಯಾವನ್ನಿ ಕೋ ಅವರುಗಳು ಒಂದು ಸುದೀರ್ಘ ಅಧ್ಯಯನ ಮಾಡಿದ್ದಾರೆ. ತಮ್ಮ ಅಧ್ಯಯನವನ್ನು ಅವರು . "Jobs For Justice (s)- Corruption In The Supreme Court Of India (http://www.mysmu.edu/faculty/madhavsa/research/judges.pdf)ಎಂಬ ಶೀರ್ಷಿಕೆಯಲ್ಲಿ 2017ರಲ್ಲಿ ಬಿಡುಗಡೆ ಮಾಡಿದ್ದಾರೆ. 1999-2014ರ ಅವಧಿಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸರ್ಕಾರವು ವಾದಿ ಅಥವಾ ಪ್ರತಿವಾದಿಯಾಗಿದ್ದ 2,605 ತೀರ್ಪುಗಳನ್ನು ಅವರು ಅಧ್ಯಯನ ಮಾಡಿದ್ದಾರೆ.
ಅವುಗಳಲ್ಲಿ ಕೇಂದ್ರ ಸರ್ಕಾರದ ಪರವಾಗಿ ತೀರ್ಪು ನೀಡಿದ ಸುಪ್ರೀಂ ನ್ಯಾಯಮೂರ್ತಿಗಳಿಗೆ ನಿವೃತ್ತರಾದ ನಂತರ ಕೇಂದ್ರ ಸರ್ಕಾರವು ಯಾವುದಾದರೂ ಪದವಿ, ಸ್ಥಾನಮಾನಗಳನ್ನು ನೀಡಿದೆಯೇ ಎಂಬುದು ಅವರ ಅಧ್ಯಯನದ ವಸ್ತು.
ಅಂತಿಮವಾಗಿ ಅವರು ಕಂಡುಕೊಂಡ ಸತ್ಯವೇನೆಂದರೆ ಕೇಂದ್ರ ಸರ್ಕಾರದ ಪರವಾಗಿ ತೀರ್ಪು ನೀಡಿದ ಶೇ.90ಕ್ಕೂ ಹೆಚ್ಚು ನ್ಯಾಯಾಧೀಶರಿಗೆ ಆಯೋಗಗಳ, ನ್ಯಾಯ ಪಂಚಾಚಾಯತ್ ಗಳ ಅಧ್ಯಕ್ಷ ಪದವಿ, ರಾಜ್ಯಪಾಲ, ರಾಯಭಾರಿ ಸ್ಥಾನಮಾನಗಳನ್ನು ನೀಡಿ ಗೌರವಿಸಲಾಗಿದೆ.

 ಹೀಗಾಗಿಯೇ ಅರುಣ್ ಜೈಟ್ಲಿಯವರು ವಿರೋಧ ಪಕ್ಷದಲ್ಲಿದ್ದಾಗ "ಹಾಲಿ ನ್ಯಾಯಾಧೀಶರು ತಾವು ಮಾಜಿಯಾದಾಗ ಸಿಗುವ ಸ್ಥಾನಮಾನಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡುತ್ತಾರೆ" ಎಂದು ಹೇಳಿದ್ದರು. ಹೀಗಾಗಿ ಈ ಭ್ರಷ್ಟತೆ ಕೇವಲ ವ್ಯಕ್ತಿಗತವಾದದ್ದಲ್ಲ. ಸಾಂಸ್ಥಿಕವಾದದ್ದು.

4. ಮೇಲಿನ ಅಧ್ಯಯನದಲ್ಲಿ NDA ಅವಧಿ 5 ವರ್ಷದ್ದಾದರೆ UPA ಅವಧಿ ಹತ್ತು ವರ್ಷದ್ದು. ಹೀಗಾಗಿ ಈ ಅವಧಿಯಲ್ಲಿ UPA ಯಿಂದ ಉಪಕೃತರಾದ ಸುಪ್ರೀಂ ನ್ಯಾಯಾಧೀಶರು ಜಾಸ್ತಿ. ಆದರೆ 2014ರ ನಂತರದ ಅವಧಿಯಲ್ಲಿ ಇದೆ ಬಗೆಯ ಅಧ್ಯಯನ ನಡೆದರೆ ಆಮಿಷ ಮಾತ್ರವಲ್ಲದೆ ಭೀತಿಗೆ ಬಲಿಯಾದವರ ಹೊಸ ಕಾಲಮ್ಮು ಅಗತ್ಯ ಬಿದ್ದೀತು.
 ಅಲ್ಲದೆ 2010ರ ನಂತರ ಟ್ರಿಬ್ಯುನಲ್ ಗಳ ಸಂಖ್ಯೆ ಈಗ ಇನ್ನು ಹೆಚ್ಚಾಗಿರುವುದರಿಂದ ‘ಬಲಿಯಾದವರ’ ಸಂಖ್ಯೆ ಇನ್ನು ಹೆಚ್ಚೇ ಇದ್ದಿತು!

5. ಮೋದಿ ಅವಧಿಯಲ್ಲಿ ನ್ಯಾಯಾಂಗ ಎದುರಿಸುತ್ತಿರುವುದು ಕೇವಲ ಸಾಂಸ್ಥಿಕ ಭ್ರಷ್ಟಾಚಾರದ ಸಮಸ್ಯೆಯನ್ನು ಮಾತ್ರವಲ್ಲ. ಅದರ ಜೊತೆಜೊತೆಗೆ ಇಂದು ಮೇಲಿನ ಕೋರ್ಟುಗಳಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳುವವರನ್ನು ದೇಶದ ಬೇಹುಗಾರಿಕೆ ಇಲಾಖೆಯು ಕೂಡ ಶಿಪಾರಸು ಮಾಡಬೇಕೆಂಬುದನ್ನು ಮೊನ್ನೆ ಸದನದಲ್ಲಿ ಸ್ಮೃತಿ ಇರಾನಿಯವರೇ ಹೇಳಿದ್ದಾರೆ.
ಇದರಿಂದಾಗಿ ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರಾಗಲು ಬಲಪಂಥೀಯರಾಗಿರಬೇಕಿರುವುದು ಮತ್ತು ಮೋದಿ ಮಂಡಳಿ ಸದಸ್ಯರಾಗಿರಬೇಕಿರುವುದು ಕಡ್ಡಾಯವಾಗುತ್ತಿದೆ.
ಆದ್ದರಿಂದಲೇ ಹಾಲಿ ನ್ಯಾಯಾಧೀಶರಾದ ಅರುಣ್ ಮಿಶ್ರಾ ಒಂದು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯನ್ನು ಹಾಡಿ ಹೊಗಳುವುದು ಮತ್ತು ಅದೇ ನ್ಯಾಯಾಧೀಶರೇ ಆನಂದ್ ತೇಲ್ತುಂಬ್ಡೆ ಹಾಗು ಗೌತಮ್ ನವಲಾಕಾರಾಂತ ಧೀಮಂತ ಮೋದಿ ಟೀಕಾಕಾರರಿಗೆ ಜಾಮೀನು ನಿರಾಕರಿಸುವುದು ಆಶ್ಚರ್ಯವೇನಲ್ಲ.
ಅಥವಾ ಆದರ್ಶ್ ಕುಮಾರ ಗೋಯಲ್ ನಂಥ ಆರೆಸ್ಸೆಸ್ಸಿನ ಕಾರ್ಯಕರ್ತರಿಗೆ ಅರ್ಹತೆಯನ್ನು ಮೀರಿ ಸುಪ್ರೀಂ ನ್ಯಾಯಾಧೀಶ ಸ್ಥಾನ ಕೊಡುವುದು ಅವರು ದೌರ್ಜನ್ಯ ತಡೆ ಕಾಯಿದೆಗೆ ತಿದ್ದುಪಡಿ ಮಾಡುವುದು ಹಾಗು ಅದಕ್ಕಾಗಿ ಅವರ ನಿವೃತ್ತರಾದ ಕೂಡಲೇ ಮೋದಿ ಸರ್ಕಾರ ಅವರನ್ನು ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸುವುದು ನಡೆಯುತ್ತದೆ.

6. ಈ ಎಲ್ಲ ಹಿನ್ನೆಲೆಯಲ್ಲಿ ಮೋದಿತ್ವವನ್ನು ನ್ಯಾಯಾಂಗದಲ್ಲಿ ಅನುಷ್ಠಾನಗೊಳಿಸಿದ ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೋಯ್ ರಾಜ್ಯಸಭಾ ಸದಸ್ಯರಾಗಿ ನೇಮಕಗೊಳ್ಳುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಇದು ಅವರು ಹಿಂದೆ ಮಾಡಿದ ಸೇವೆಗೆ ಸಂದ ಗೌರವ ಮಾತ್ರವಲ್ಲ. ಮುಂದೆಯೂ ಮಾಡಲಿರುವ ಮೋದಿತವಾದ ಸೇವೆಗೆ ಆಗಿರುವ ನೇಮಕಾತಿ ಎಂಬುದನ್ನು ಮರೆಯದಿರೋಣ.
ಹಾಗೆಯೇ ಈ ಅಧಃಪತನ ಕೇವಲ ವ್ಯಕ್ತಿಯದ್ದು ಮಾತ್ರವಲ್ಲ. ಮೋದಿತ್ವದ ಅವಧಿಯಲ್ಲಿ ಎಲ್ಲ ಪ್ರಜಾತಾಂತ್ರಿಕ ಸಂಸ್ಥೆಗಳ ಬಲಪಂಥೀಯರ ಕೈವಶವಾಗುತ್ತಿರುವ ಸಂಕೇತ ಹೌದು...

- ಶಿವಸುಂದರ್ 

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News