ನೌಕಾಪಡೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗಕ್ಕೆ ಸುಪ್ರೀಂ ಆದೇಶ

Update: 2020-03-17 08:14 GMT

ಹೊಸದಿಲ್ಲಿ, ಮಾ.17: ಭಾರತೀಯ ನೌಕಾಪಡೆಯಲ್ಲಿ ಪುರುಷ ಹಾಗೂ ಮಹಿಳಾ ಅಧಿಕಾರಿಗಳನ್ನು ಸಮಾನವಾಗಿ ಪರಿಗಣಿಸಬೇಕೆಂದು ಇಂದು ಆದೇಶಿಸಿದ ಸುಪ್ರೀಂ ಕೋರ್ಟ್ ನೌಕಾಪಡೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗಕ್ಕೆ ಅನುಮತಿ ನೀಡಿದೆ.

ಸೇನಾ ಪಡೆಗಳಲ್ಲಿ ಲಿಂಗ ಸಮಾನತೆಗೆ ಅನುಮೋದನೆ ನೀಡುವುದಕ್ಕೆ 101 ನೆಪಗಳು ಇರಲು ಸಾಧ್ಯವಿಲ್ಲ ಎಂದು ಹೇಳಿದ ಜಸ್ಟಿಸ್ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ, ಮೂರು ತಿಂಗಳುಗಳೊಳಗೆ ವೇತನ ಹೆಚ್ಚಳದೊಂದಿಗೆ ಹಾಲಿ ಸೇವೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ಅನುಮತಿಸಬೇಕು ಎಂದು ಸೂಚಿಸಿದೆ.

ರಶ್ಯದ ಹಡಗುಗಳಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದೇ ಇರುವುದರಿಂದ ಶಾರ್ಟ್ ಸರ್ವಿಸ್ ಕಮಿಷನ್ ಮಹಿಳಾ ಅಧಿಕಾರಿಗಳಿಗೆ ಸಮುದ್ರ ನೌಕಾಯಾನ ಕರ್ತವ್ಯಗಳನ್ನು ವಹಿಸಲು ಸಾಧ್ಯವಿಲ್ಲ ಎಂಬ ಕೇಂದ್ರದ ನಿಲುವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಪುರುಷರಷ್ಟೇ ಸಮರ್ಥವಾಗಿ ಮಹಿಳೆಯರೂ ಈ ಕಾರ್ಯ ನಿರ್ವಹಿಸಬಲ್ಲರು ಈ ನಿಟ್ಟಿನಲ್ಲಿ ಯಾವುದೇ ತಾರತಮ್ಯ ಸಲ್ಲದು ಎಂದು ನ್ಯಾಯಾಲಯ ಹೇಳಿದೆ.

ಭಾರತೀಯ ನೌಕಾಪಡೆಯಲ್ಲಿರುವ ಶಾರ್ಟ್ ಸರ್ವಿಸ್ ಕಮಿಷನ್ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ನಿರಾಕರಿಸುವುದು ಅವರಿಗೆ ಅನ್ಯಾಯ ಮಾಡಿದಂತೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಸೇನಾಪಡೆಯಲ್ಲಿ ಮಹಿಳೆಯರಿಗೆ ಖಾಯಂ ಆಯೋಗ ಒದಗಿಸುವಂತೆ ಫೆಬ್ರವರಿ ತಿಂಗಳಲ್ಲಿ ನೀಡಿದ ತೀರ್ಪಿನ ಬೆನ್ನಿಗೇ ಇಂದಿನ ತೀರ್ಪು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News