×
Ad

ಪ್ರಯಾಣಿಕರೊಂದಿಗೆ ಸಿಬ್ಬಂದಿ ಸಂವಹನಕ್ಕೆ ಮಿತಿ ಇರಲಿ: ವಿಮಾನ ಯಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚನೆ

Update: 2020-03-17 23:30 IST

ಹೊಸದಿಲ್ಲಿ, ಮಾ. 17: ಎಲ್ಲ ವಿಮಾನಗಳು ಹ್ಯಾಂಡ್ ಸ್ಯಾನಿಟೈಸರ್ (ಸೋಂಕು ನಿವಾರಕ ಕೈ ತೊಳೆಯುವ ದ್ರಾವಣ) ಹೊಂದಿರಬೇಕು ಹಾಗೂ ವಿಮಾನ ಸಿಬ್ಬಂದಿ ರಕ್ಷಣೆಗೆ ಮಾಸ್ಕ್, ಕೈಗವಸಿನಂತಹ ವೈಯುಕ್ತಿಕ ರಕ್ಷಣಾ ಸಾಧನ (ಪಿಪಿಇ)ಗಳನ್ನು ನೀಡಬೇಕು ಎಂದು ನಾಗರಿಕ ವಿಮಾನ ಯಾನದ ಪ್ರಧಾನ ನಿರ್ದೇಶಕರು (ಡಿಜಿಸಿಎ) ಮಂಗಳವಾರ ಎಲ್ಲ ವಿಮಾನ ಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

 ಸಾಕಷ್ಟು ಪ್ರಮಾಣದ ಸ್ಯಾನಿಟೈಸರ್ ಅನ್ನು ಶೌಚಾಲಯದಂತಹ ಸಾಮಾನ್ಯ ಸ್ಥಳಗಳಲ್ಲಿ ಇರಿಸಬೇಕು. ಉಷ್ಣಾಂಶ ಹಾಗೂ ದಹನದ ಮೂಲ ಇರುವ ಸ್ಥಳಗಳಿಂದ ಹ್ಯಾಂಡ್ ಸ್ಯಾನಿಟೈಸರ್‌ನ್ನು ದೂರ ಇರಿಸಬೇಕು. ಶೌಚಾಲಯಗಳಲ್ಲಿ ಸಾಬೂನು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಡಿಜಿಸಿಎ ಹೇಳಿದೆ. ಪರಸ್ಪರ ಸಂವಹನ ಕನಿಷ್ಠಗೊಳಿಸುವಂತೆ ಪ್ರಯಾಣಿಕರಿಗೆ ಸಿಬ್ಬಂದಿ ಸೂಚಿಸಬೇಕು. ವಿಮಾನ ಯಾನ ಸಂಸ್ಥೆ ಸಿಬ್ಬಂದಿಗೆ ಹಾಗೂ ವಿಮಾನ ನಿಲ್ದಾಣದಲ್ಲಿರುವ ವಿಮಾನ ಯಾನ ಸಂಸ್ಥೆಯ ನಿರ್ವಹಣಾ ಸಿಬ್ಬಂದಿಗೆ ಸಾರ್ವಜನಿಕ ಸಂವಹನವನ್ನು ಮಿತಿಗೊಳಿಸಲು ಮಾರ್ಗಸೂಚಿಗಳನ್ನು ನೀಡಬಹುದು ಎಂದು ಅದು ಹೇಳಿದೆ.

ಎಲ್ಲ ವಿಮಾನಗಳು ಒಂದು ಅಥವಾ ಹೆಚ್ಚು ಸಾರ್ವತ್ರಿಕ ಮುನ್ನೆಚ್ಚರಿಕೆಯ ಕಿಟ್‌ಗಳನ್ನು ಹೊಂದಿರಬೇಕು. ಕೊರೋನ ವೈರಸ್ ಸೋಂಕಿನ ಶಂಕೆಗೊಳಗಾದ ವ್ಯಕ್ತಿಗೆ ನೆರವು ನೀಡುವ ಹಾಗೂ ಯಾವುದೇ ಸೋಂಕಿತ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸ್ವಚ್ಛಗೊಳಿಸುವ ವಿಮಾನದ ಸಿಬ್ಬಂದಿ ಈ ಕಿಟ್ ಅನ್ನು ಬಳಸಬೇಕು. ಪ್ರಯಾಣಿಕರೊಂದಿಗೆ ಸಂವಹನ ನಡೆಸುವ ಸಂದರ್ಭ ಬಳಸಲು ಸಾಕಷ್ಟು ಪ್ರಮಾಣದ ವೈಯುಕ್ತಿಕ ರಕ್ಷಣಾ ಸಾಧನ (ಪಿಪಿಇ)ಗಳನ್ನು ಎಲ್ಲ ಸಿಬ್ಬಂದಿಗೆ ನೀಡಬೇಕು ಎಂದು ಡಿಜಿಸಿಎ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News