ಜೀವ ರಕ್ಷಕ ಔಷಧಿಯೇ ಜೀವ ಭಕ್ಷಕವಾದಾಗ

Update: 2020-03-17 18:23 GMT

ಕೊರೋನ ಇರಲಿ, ಬ್ಯಾಕ್ಟೀರಿಯಾ ಸೋಂಕು ಇರಲಿ. ವೈದ್ಯರು ಮತ್ತು ತಜ್ಞರು ಹೇಳುವುದನ್ನು ಕೇಳುವ ಅಗತ್ಯವಿದೆ. ಔಷಧಿ ತಯಾರಿಕೆಯನ್ನು ಕೇವಲ ಲಾಭದ ಉದ್ಯಮವೆಂದು ಪರಿಗಣಿಸದೆ, ಮನುಕುಲದ ರಕ್ಷಣೆಗಾಗಿ ಇರುವ ಉದ್ಯಮವೆಂದು ಪರಿಗಣಿಸಿ ಸೂಕ್ತ ಕಾನೂನುಗಳ ರಚನೆ ಮತ್ತು ಜಾರಿ ಅಗತ್ಯವಾಗಿರುತ್ತದೆ. ಜೀವರಕ್ಷಕ ಔಷಧಿಗಳ ಸಂಶೋಧನೆಗೆ ಸರಕಾರದ ಆರ್ಥಿಕ ನೆರವು ಬೇಕಿದೆ ಎನ್ನುವುದು ತಜ್ಞರ ಅಭಿಮತ. ದೀರ್ಘಕಾಲೀನ ನೆಮ್ಮದಿಗಾಗಿ ಅಲ್ಪಕಾಲೀನ ಕಷ್ಟವನ್ನು ಮತ್ತು ನಷ್ಟವನ್ನು ಅರ್ಥಮಾಡಿಕೊಳ್ಳುವ ಸಮಾಜ ಬೇಕಿದೆ.

ಕೊರೋನ ವೈರಸ್‌ನ ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆ ‘ಪ್ಯಾಂಡಮಿಕ್’ ಎಂದಿದೆ. ಪ್ಯಾಂಡಮಿಕ್ ಅಂದರೆ ವಿಶ್ವವನ್ನೇ ವ್ಯಾಪಿಸಿಕೊಂಡಿರುವ ಸಾಂಕ್ರಾಮಿಕ ರೋಗ. ಕೋವಿಡ್-19 ಎಂದು ಅಧಿಕೃತವಾಗಿ ಗುರುತಿಸಲಾಗಿರುವ ಕೊರೋನ ವೈರಸ್‌ನ ಸೋಂಕಿಗೆ ಒಂದು ಲಕ್ಷದ ಮೂವತ್ತೆರಡು ಸಾವಿರ ಜನ ಒಳಗಾಗಿದ್ದರೆ, ಸುಮಾರು ಆರು ಸಾವಿರದಷ್ಟು ಜನರು ಮೃತಪಟ್ಟಿದ್ದಾರೆ. ಚೀನಾ ದೇಶದಲ್ಲಿ ಆರಂಭಗೊಂಡ ಈ ಕಾಯಿಲೆಯಿಂದ 147 ದೇಶಗಳು ಪೀಡಿತವಾಗಿವೆ. ಭಾರತದಲ್ಲಿ 137 ಜನರು ಇದರಿಂದ ಪೀಡಿತರಾಗಿದ್ದು, ಮೂರು ಸಾವು ಸಂಭವಿಸಿದೆ.

2020ರ ಜನವರಿಯಿಂದ ಇದರ ವರದಿ ಕೇಳುತ್ತಿದ್ದರೂ, ಭಾರತದಲ್ಲಿ ಅಂತಹ ಆತಂಕ ಏನೂ ಇರಲಿಲ್ಲ. ಆರಂಭದಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ಚೀನಾದಿಂದ ಹಿಂದಿರುಗಿ ಚೇತರಿಸಿಕೊಂಡ ವರದಿಗಳು ಬಂದವು. ಹೇಗೋ ಏನೋ ಈ ಕಾಯಿಲೆ ನಮ್ಮಿಂದ ದೂರ ಎಂದಾಯಿತು. ಜೊತೆಗೆ ಮಾಧ್ಯಮಗಳಲ್ಲಿ ಒಂದಷ್ಟು ಸುದ್ದಿಗಳು ಬಂದವು: ಭಾರತೀಯರಿಗೆ ಸಹಜ ರೋಗನಿರೋಧಕ ಶಕ್ತಿಯಿದೆ; ಬೆಳ್ಳುಳ್ಳಿ ಇದಕ್ಕೆ ರಾಮ ಬಾಣ ಇತ್ಯಾದಿ. ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ವೇಗವಾಗಿ ಅಂತೆಕಂತೆಗಳು ಹರಿದಾಡಿದವು. ಕೈ ಮುಗಿಯುವ ಭಾರತೀಯ ಸಂಸ್ಕೃತಿಯೇ ಶ್ರೇಷ್ಠ; ಈಗ ಇಡೀ ವಿಶ್ವವೇ ಇದನ್ನು ಆಚರಿಸುತ್ತಿದೆ, ಭಾರತೀಯ ಸಮಾಜದ ದೊಡ್ಡ ಕೊಡುಗೆ... ಹೀಗೆ ಅನೇಕ ಸುದ್ದಿಗಳು ಹರಿದಾಡಿದವು. ಜೊತೆಗೆ, ಇಂತಹದೊಂದು ವೈರಸ್ ಬರುತ್ತದೆಂದು ಈ ಪುಸ್ತಕದಲ್ಲಿ ಹೇಳಲಾಗಿತ್ತು, ಆ ಪುಸ್ತಕದಲ್ಲಿ ಹೇಳಲಾಗಿತ್ತು ಇತ್ಯಾದಿಗಳಿವೆ. ಹೀಗೆ ಸುಳ್ಳುಗಳ ರಾಶಿರಾಶಿ ನಮ್ಮ ನಡುವೆ ಬಂದು ಬೀಳುತ್ತಿದೆ.

ಏನೆಲ್ಲಾ ಪ್ರಯತ್ನಗಳು ಆಗಿದ್ದರೂ, ಮನುಷ್ಯನಿಗೆ ಕಾಯಿಲೆಗಳನ್ನು ಪೂರ್ಣವಾಗಿ ಗೆಲ್ಲಲು ಆಗಿಲ್ಲ. ಏಕೆಂದರೆ, ಕಾಯಿಲೆ ತರುವ ರೋಗಾಣುಗಳು ಜೀವಾಣುಗಳಲ್ಲವೇ? ಅವುಗಳಿಗೂ ಸಹಜವಾಗಿ ಬದುಕ ಬೇಕೆನ್ನುವ ತುಡಿತ ಇದ್ದೇ ಇರುತ್ತದೆ. ಅವು ನಮ್ಮಷ್ಟೇ ಸಹಜವಾಗಿ ಬದಲಾಗುವ ಪರಿಸರಕ್ಕೆ ಹೊಂದಿಕೊಳ್ಳಬೇಕೆಂಬ ಜೈವಿಕ ಜ್ಞಾನವನ್ನು ಹೊಂದಿರುತ್ತವೆ! ಮನುಷ್ಯನ ಉಪಾಯಗಳನ್ನು ಈ ರೋಗಾಣುಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಸೋಲಿಸುವ ಕಾರ್ಯದಲ್ಲಿ ತೊಡಗುತ್ತವೆ. ಉದಾಹರಣೆಗೆ ಕೇವಲ ಆರು ದಶಕಗಳ ಹಿಂದೆ ಪೆನ್ಸಿಲಿನ್ ಔಷಧವನ್ನು ಕಂಡುಹಿಡಿದು ಬ್ಯಾಕ್ಟೀರಿಯಾಗಳ ಮೇಲೆ ಗೆಲುವು ಸಾಧಿಸಿದ್ದ ಮಾನವ ಜನಾಂಗ ಈಗ ಸೋತಿದೆ. ಈಗಿನ ಪರಿಸ್ಥಿತಿ ಹೇಗಿದೆ ಎಂದರೆ, ಭೂಮಿಯ ಮೇಲಿಂದ ತೊಡೆದು ಹಾಕಲಾಯಿತು ಎಂದು ನಂಬಲಾಗಿದ್ದ ‘ಕುಷ್ಠ ರೋಗ’ ಮತ್ತೆ ಮರು ಪ್ರವೇಶಿಸಿದೆ. ಇದೇ ಕತೆ ಟಿಬಿ ಕಾಯಿಲೆಯದ್ದೂ ಆಗುತ್ತಿದೆ. ಬಹುತೇಕ ಟಿಬಿ ಔಷಧಿಗಳು ರೋಗ ತರುವ ಬ್ಯಾಕ್ಟೀರಿಯಾಗಳ ಮುಂದೆ ದುರ್ಬಲವಾಗಿವೆ.

1940ರ ದಶಕದಲ್ಲಿ ಪೆನ್ಸಿಲಿನ್ ಮನುಷ್ಯನನ್ನು ಬಹುತೇಕ ಬ್ಯಾಕ್ಟೀರಿಯಾ ಸೋಂಕುಗಳಿಂದ ರಕ್ಷಿಸುತ್ತದೆಂಬ ನಂಬಿಕೆಯಿತ್ತು. ಇದಕ್ಕೆ ಪೂರಕವಾಗಿ ಎರಡನೇ ಮಹಾಯುದ್ಧದಲ್ಲಿ ಅನೇಕ ಸಾವುಗಳನ್ನು ತಡೆಯುವಲ್ಲಿ ಪೆನ್ಸಿಲಿನ್ ಸಹಕಾರಿಯಾಯಿತು. ಮಾನವ ದೈವತ್ವಕ್ಕೆ ಏರಲು ಇನ್ನೇನು ಒಂದೆರಡು ಮೆಟ್ಟಿಲುಗಳು ಮಾತ್ರವೇ ಬಾಕಿಯಿದೆ ಎಂದಾಗಿತ್ತು. ಆದರೆ ರೋಗಕಾರಕ ಜೀವಾಣುಗಳು ನಿಧಾನವಾಗಿ (ಐದಾರು ವರ್ಷಗಳಲ್ಲೇ) ಪೆನ್ಸಿಲಿನ್ ಔಷಧಿಗೆ ಪ್ರತಿರೋಧ ಶಕ್ತಿಯನ್ನು ಬೆಳಸಿಕೊಂಡವು. ಮನುಷ್ಯ ಸುಮ್ಮನಾದನೇ? ಇಲ್ಲ. ಅವನು ಜಿದ್ದಿಗೆ ಬಿದ್ದ. ಇನ್ನೂ ಪ್ರಭಾವಶಾಲಿಯಾದ ಔಷಧಿ ಕಂಡುಹಿಡಿದ. ಸರಿ ಒಂದೆರಡು ವರ್ಷ ಎಲ್ಲವೂ ನಿಯಂತ್ರಣದಲ್ಲಿತ್ತು. ಬ್ಯಾಕ್ಟೀರಿಯಾಗಳು ಹಠಕ್ಕೆ ಬಿದ್ದವು. ಅವು ತಮ್ಮ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಂಡವು. ಹೀಗೆ ಔಷಧಿ-ರೋಗಾಣುಗಳ ಈ ಹಾವು-ಏಣಿ ಆಟದಲ್ಲಿ, ಬ್ಯಾಕ್ಟೀರಿಯಾ ವಿರೋಧಿ ಔಷಧಿಗಳು ಪೆನ್ಸಿಲಿನ್‌ಗಿಂತ ಐದು ಪಟ್ಟು ಪ್ರಬಲವಾಗಿವೆ. ಹಾಗೇ ಬ್ಯಾಕ್ಟೀರಿಯಾಗಳು ಅಷ್ಟೇ... ಈ ಎಲ್ಲಾ ಔಷಧಿಗಳಿಗೂ ಪ್ರತಿರೋಧ ಶಕ್ತಿಯನ್ನು ಪಡೆದುಕೊಂಡಿವೆ. ಸದ್ಯದ ಪರಿಸ್ಥಿತಿಯಲ್ಲಿ, ರೋಗಾಣುಗಳು ಗೆಲುವಿನ ಹಾದಿಯಲ್ಲಿವೆ!

ಇಂತಹ ಸಂದರ್ಭ ಹೇಗೆ ಬಂದಿತು? ಪ್ರಮುಖವಾಗಿ ಐದು ಕಾರಣಗಳನ್ನು ಪಟ್ಟಿ ಮಾಡಬಹುದು. ಆ್ಯಂಟಿ ಬಯಾಟಿಕ್ (ಪೆನ್ಸಿಲಿನ್ ಮುಂತಾದ ಬ್ಯಾಕ್ಟೀರಿಯಾ ವಿರೋಧಿ ಔಷಧಿಗಳನ್ನು ಆ್ಯಂಟಿ ಬಯಾಟಿಕ್ ಎನ್ನಲಾಗುತ್ತದೆ) ಔಷಧಿಗಳ ದುರ್ಬಳಕೆ ಮೊದಲನೇ ಕಾರಣ. ವೈದ್ಯರು ಹೇಳಿದ ಪ್ರಮಾಣಕ್ಕಿಂತ ಕಡಿಮೆ ಮಾತ್ರೆಗಳನ್ನು ನುಂಗುವುದು ಇಲ್ಲವೇ ಹೆಚ್ಚು ಮಾತ್ರೆಗಳನ್ನು ನುಂಗುವುದು ಮತ್ತು ವೈದ್ಯರ ಸಲಹೆಯಿಲ್ಲದೆ ನೇರವಾಗಿ ಔಷಧಿಗಳನ್ನು ಖರೀದಿ ಮಾಡಿ ಬಳಸುವುದು ಮುಂತಾದವು ದುರ್ಬಳಕೆಯಾಗುತ್ತದೆ. ಇಂತಹ ತಪ್ಪುಗಳಿಂದ ರೋಗಾಣುಗಳು ಪ್ರಬಲವಾಗುತ್ತವೆ.

ನಗರ ಪ್ರದೇಶಗಳಲ್ಲಿ ಇನ್ನೂ ವಿಚಿತ್ರವಾದ ಪ್ರಕ್ರಿಯೆಯೊಂದು ನಡೆಯುತ್ತದೆ. ಹೆಚ್ಚು ಜನರು ಒಂದೆಡೆ ಇರುವ ಕಾರಣ, ಮಲಿನ ನೀರನ್ನೆಲ್ಲಾ ಒಂದೆಡೆ ಶೇಖರಿಸಿಯೋ, ಇಲ್ಲವೇ ಹರಿಯಲೋ ಬಿಡುವ ವ್ಯವಸ್ಥೆ ಇರುತ್ತದೆ. ಹೀಗೆ ಮನುಷ್ಯರಿಂದ ವಿಸರ್ಜಿತಗೊಂಡ ಮಲಿನ ನೀರಿನಲ್ಲಿ ಆ್ಯಂಟಿ ಬಯಾಟಿಕ್ ಔಷಧಿಯ ಪ್ರಮಾಣ ಹೆಚ್ಚು ಇರುವ ಕಾರಣ, ರೋಗಾಣುಗಳು ಹೆಚ್ಚು ಹೆಚ್ಚು ಔಷಧಿಯೊಂದಿಗೆ ಒಡನಾಡಿ, ತಮ್ಮ ಪ್ರತಿರೋಧ ಶಕ್ತಿಯನ್ನು ಬಲಗೊಳಿಸಿಕೊಳ್ಳುತ್ತವೆ. ಯು.ಜಿ.ಡಿ. ವ್ಯವಸ್ಥೆಯಿಂದಾಗಿ, ಕೆಜಿಗಟ್ಟಲೆ ಔಷಧಿಗಳು ಒಂದೆಡೆ ಸೇರಲು ಅವಕಾಶವಾಗಿ, ಬಿಲಿಯನ್‌ಗಟ್ಟಲೆ ರೋಗಾಣುಗಳು ಲಭ್ಯವಿರುವ ಔಷಧಿಗಳ ವಿರುದ್ಧ ಸಮರ ಹೂಡಿ, ಗೆಲ್ಲುವ ಒಳದಾರಿಗಳನ್ನು ಪತ್ತೆಹಚ್ಚಿಕೊಳ್ಳುತ್ತವೆ. ನಿಧಾನವಾಗಿ ತಮ್ಮ ಪ್ರತಿರೋಧ ತಂತ್ರಗಳನ್ನು ಗಟ್ಟಿ ಮಾಡಿಕೊಳ್ಳುತ್ತವೆ. ಆಸ್ಪತ್ರೆಗಳಲ್ಲಿ ಸೋಂಕಿಗೆ ಕಾರಣವಾಗುವ ಸೂಪರ್ ಬಗ್ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಸೋಂಕಿನ ಔಷಧಿಗಳ ಸಾಂದ್ರತೆ ಹೆಚ್ಚಿರುವ ಆಸ್ಪತ್ರೆಗಳಲ್ಲೇ ಪ್ರತಿರೋಧವಿರುವ ರೋಗಾಣುಗಳ ಸಂಖ್ಯೆ ಹೆಚ್ಚಾಗಿದ್ದು, ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೇ ಸೋಂಕು ಬರಿಸುವ ಇವು ಯಾವುದೇ ಔಷಧಿಗೂ ಜಗ್ಗದೇ ವೈದ್ಯರಿಗೆ ತಲೆ ನೋವು ತಂದಿವೆ.

ಕೋಳಿ, ಹಸು ಮುಂತಾದ ಪ್ರಾಣಿಗಳ ಸಂಗೋಪನೆಯಲ್ಲಿ ಆ್ಯಂಟಿ ಬಯಾಟಿಕ್‌ಗಳ ವ್ಯಾಪಕ ಬಳಕೆ ಇಂತಹ ಸ್ಥಿತಿ ನಿರ್ಮಾಣವಾಗಲು ಎರಡನೇ ಪ್ರಮುಖ ಕಾರಣ. ಸೋಂಕು ಇರಲಿ ಇಲ್ಲದೇ ಇರಲಿ, ಆ್ಯಂಟಿ ಬಯಾಟಿಕ್‌ಗಳನ್ನು ಬಳಸಿಕೊಂಡು ಪ್ರಾಣಿಗಳನ್ನು ಸಾಕುವ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದಾಗಿ, ರೋಗಾಣುಗಳಿಗೆ ಔಷಧಿಗಳೊಂದಿಗೆ ಒಡನಾಡಲು ಮತ್ತಷ್ಟು ಅವಕಾಶ ದೊರೆತು, ಅವು ಪ್ರತಿರೋಧ ತಂತ್ರಗಳನ್ನು ರೂಪಿಸಿಕೊಳ್ಳುತ್ತಿವೆ. ಈ ಔಷಧಿಗಳನ್ನು ಅನಗತ್ಯವಾಗಿ ಸಸ್ಯಗಳ ಮೇಲೆ ಸಿಂಪರಣೆ ಮಾಡುವುದರಿಂದ ಔಷಧಿಗಳು ಮಣ್ಣಿನಲ್ಲಿ, ನೀರಿನಲ್ಲಿ ಮತ್ತು ಗಾಳಿಯಲ್ಲಿ ಬೆರತುಹೋಗುತ್ತಿವೆ. ಇದರ ಪರಿಣಾಮ ಲಭ್ಯವಿರುವ ಔಷಧಿಗಳ ವಿರುದ್ಧ ಪ್ರತಿರೋಧ ಶಕ್ತಿಯಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ದಿನೇ ದಿನೇ ಹೆಚ್ಚಿದೆ. ಇದು ಮೂರನೆಯ ಕಾರಣವಾಗಿದೆ.

ನಾಲ್ಕನೆಯ ಕಾರಣ ಲಾಭದ ಅಂಶವನ್ನು ಒಳಗೊಂಡಿದೆ. ಆ್ಯಂಟಿ ಬಯಾಟಿಕ್ ಔಷಧಿಗಳನ್ನು ತಯಾರಿಸುವ ಕಂಪೆನಿಗಳು ವಿವಿಧ ಆ್ಯಂಟಿ ಬಯಾಟಿಕ್ ಔಷಧಿಗಳ ಮಿಶ್ರಣವನ್ನು ಮಾಡಿ ತುಸು ಹೆಚ್ಚಿನ ಬೆಲೆಗೆ ಮಾರುತ್ತವೆ. ಇದರಿಂದ ಮತ್ತೆ ಸಮಸ್ಯೆಯಾಗುತ್ತದೆ. ಏಕ ಕಾಲಕ್ಕೆ ವಿವಿಧ ಔಷಧಿಗಳು ಒಟ್ಟಿಗೆ ಸಿಗುವ ಕಾರಣ, ರೋಗಾಣುಗಳಿಗೆ ಮತ್ತಷ್ಟು ಅನುಕೂಲವಾಗಿರುತ್ತದೆ. ಲಾಭದ ಆಸೆಗೆ ಬಿದ್ದ ಕಂಪೆನಿಗಳು ಈ ನಿಟ್ಟಿನಲ್ಲಿ ಸರಕಾರಗಳು ವಿಧಿಸುವ ಯಾವುದೇ ನಿಷೇಧಗಳಿಗೆ ಸೊಪ್ಪುಹಾಕುವುದಿಲ್ಲ. ಹೀಗೆ ತಯಾರಾದ ಔಷಧಿಗಳನ್ನು ಚಾಕಲೆಟ್‌ಗಳನ್ನು ಮಾರುವ ರೀತಿಯಲ್ಲಿ ಔಷಧಿ ಅಂಗಡಿಗಳು ಮಾರುತ್ತವೆ. ಅನಿಯಂತ್ರಿತ ಔಷಧಿಗಳ ಬಳಕೆ ರೋಗಾಣುಗಳಿಗೆ ಮತ್ತಷ್ಟು ಬಲವನ್ನು ನೀಡುತ್ತವೆ.

ಹೊಸ ಆ್ಯಂಟಿ ಬಯಾಟಿಕ್‌ಗಳನ್ನು ಸಂಶೋಧಿಸುವ ಉತ್ಸಾಹವನ್ನು ಔಷಧಿ ಕಂಪೆನಿಗಳು ಕಳೆದುಕೊಂಡಿರುವುದು ಐದನೇ ಮುಖ್ಯ ಕಾರಣವಾಗುತ್ತದೆ. ಏಕೆಂದರೆ, ಆ್ಯಂಟಿ ಬಯಾಟಿಕ್ ಔಷಧಿಗಳನ್ನು ಸಂಶೋಧಿಸಿ ತಯಾರಿಸುವುದು ಸುಲಭದ ಮಾತಲ್ಲ. ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಸಂಶೋಧಿಸಿದ ಔಷಧವನ್ನು ಮೊದಲಿಗೆ ಪ್ರಾಣಿಗಳ ಮೇಲೆ ಪ್ರಯೋಗಿಸಿ, ಯಾವುದೇ ಅಪಾಯವಿಲ್ಲ ಎಂದು ಸಾಬೀತಾದ ಮೇಲೆ ಮನುಷ್ಯರ ಮೇಲೆ ಪ್ರಯೋಗಿಸಲು ಅವಕಾಶವಿರುತ್ತದೆ. ಹಾಗೂ ಹೀಗೂ ಈ ಎಲ್ಲಾ ಹಂತಗಳನ್ನು ದಾಟಿಕೊಂಡು ಬರುವ ಕಂಪೆನಿ ತಯಾರಿಸಿದ ಔಷಧಿಯು ಕೇವಲ ಎರಡು ಮೂರು ವರ್ಷಗಳಲ್ಲೇ ನಿರುಪಯುಕ್ತವಾಗಿಬಿಡುತ್ತದೆ. ಏಕೆಂದರೆ, ರೋಗಾಣುಗಳು ಈ ಹೊಸ ಔಷಧಿಯನ್ನು ಜೀರ್ಣಿಸಿಕೊಳ್ಳುವ ತಂತ್ರವನ್ನು ಕರಗತ ಮಾಡಿಕೊಳ್ಳುತ್ತವೆ! ಔಷಧಿಯ ಮಾರಾಟದ ದೃಷ್ಟಿಯಿಂದ ಲಾಭದ ಮಾತಿರಲಿ, ಹಾಕಿದ ಬಂಡವಾಳ ಹಿಂದಿರುಗಿ ಬರದ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ, ಔಷಧಿ ಕಂಪೆನಿಗಳು ಕಳೆದ ಒಂದೆರಡು ದಶಕಗಳಿಂದ ಹೊಸ ಆ್ಯಂಟಿ ಬಯಾಟಿಕ್ ಔಷಧಿಗಳ ಸಂಶೋಧನೆಯಲ್ಲಿ ತೊಡಗಿಕೊಂಡಿಲ್ಲ. ಪರಿಣಾಮ, ಒಂದೆಡೆ ಪ್ರತಿರೋಧ ಹೊಂದಿರುವ ರೋಗಾಣುಗಳ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಅವುಗಳನ್ನು ನಿಯಂತ್ರಿಸಲು ಬೇಕಿರುವ ಔಷಧಿಗಳ ಪ್ರಮಾಣ ಕ್ಷೀಣಗೊಳ್ಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ, ಔಷಧಿಗಳ ಬಳಕೆ ಕುರಿತು ಎಚ್ಚರ ವಹಿಸುವುದೇ ಏಕೈಕ ಮಾರ್ಗ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯವಾಗಿದೆ.

ಕೊರೋನ ಇರಲಿ, ಬ್ಯಾಕ್ಟೀರಿಯಾ ಸೋಂಕು ಇರಲಿ. ವೈದ್ಯರು ಮತ್ತು ತಜ್ಞರು ಹೇಳುವುದನ್ನು ಕೇಳುವ ಅಗತ್ಯವಿದೆ. ಔಷಧಿ ತಯಾರಿಕೆಯನ್ನು ಕೇವಲ ಲಾಭದ ಉದ್ಯಮವೆಂದು ಪರಿಗಣಿಸದೆ, ಮನುಕುಲದ ರಕ್ಷಣೆಗಾಗಿ ಇರುವ ಉದ್ಯಮವೆಂದು ಪರಿಗಣಿಸಿ ಸೂಕ್ತ ಕಾನೂನುಗಳ ರಚನೆ ಮತ್ತು ಜಾರಿ ಅಗತ್ಯವಾಗಿರುತ್ತದೆ. ಜೀವರಕ್ಷಕ ಔಷಧಿಗಳ ಸಂಶೋಧನೆಗೆ ಸರಕಾರದ ಆರ್ಥಿಕ ನೆರವು ಬೇಕಿದೆ ಎನ್ನುವುದು ತಜ್ಞರ ಅಭಿಮತ. ದೀರ್ಘಕಾಲೀನ ನೆಮ್ಮದಿಗಾಗಿ ಅಲ್ಪಕಾಲೀನ ಕಷ್ಟವನ್ನು ಮತ್ತು ನಷ್ಟವನ್ನು ಅರ್ಥಮಾಡಿಕೊಳ್ಳುವ ಸಮಾಜ ಬೇಕಿದೆ. ರೋಗಗಳ ವಿರುದ್ಧದ ಹೋರಾಟ ಎಂದಿಗೂ ದೇಶ, ಭಾಷೆ ಮತ್ತು ಧರ್ಮಗಳನ್ನು ಮೀರಿದ ವಿಚಾರವಾಗಿರುತ್ತದೆ. ವಿಶ್ವ ಸಂಸ್ಥೆಯ ನಾಯಕತ್ವದಲ್ಲಿ ರೋಗಗಳ ವಿರುದ್ಧ ಸಂಘಟಿತರಾಗುವುದು ಭವಿಷ್ಯವನ್ನು ಖಚಿತಪಡಿಸಿಕೊಳ್ಳುವ ದಾರಿಯಾಗಿರುತ್ತದೆ.

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News

ಜಗದಗಲ
ಜಗ ದಗಲ