ಬಂಡಾಯ ಶಾಸಕರ ರಾಜೀನಾಮೆ ಕುರಿತು ತನಿಖೆ ನಡೆಸಿ: ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಮನವಿ
ಹೊಸದಿಲ್ಲಿ, ಮಾ. 16: ರಾಜ್ಯ ವಿಧಾನ ಸಭೆಯ ಸ್ಪೀಕರ್‌ಗೆ ಬಿಜೆಪಿ ನಾಯಕರು ಸಲ್ಲಿಸಿದ ತನ್ನ ಬಂಡಾಯ ಶಾಸಕರ ರಾಜಿನಾಮೆ ಪತ್ರಗಳ ತನಿಖೆ ಅಗತ್ಯ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದೆ. ಮಧ್ಯಪ್ರದೇಶದ ತನ್ನ ಬಂಡಾಯ ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿಲ್ಲ. ಬದಲಾಗಿ ಬಲವಂತದಿಂದ ಸಲ್ಲಿಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ಪೀಠದ ಮುಂದೆ ಕಾಂಗ್ರೆಸ್ ಹೇಳಿತು.
ಕಾಂಗ್ರೆಸ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ್ ದವೆ, ಕಾಂಗ್ರೆಸ್‌ನ ಬಂಡಾಯ ಶಾಸಕರನ್ನು ವಿಮಾನದ ಮೂಲಕ ಕರೆದೊಯ್ಯಲಾಗಿದೆ. ಪ್ರಸ್ತುತ ಅವರು ಬಿಜೆಪಿ ವ್ಯವಸ್ಥೆ ಮಾಡಿದ ರೆಸೋರ್ಟ್ ಒಂದರಲ್ಲಿ ಇದ್ದಾರೆ. ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದರು. ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಕಮಲ್‌ನಾಥ್ ಅವರಿಗೆ ಸಂದೇಶ ರವಾನಿಸುವುದು ಬಿಟ್ಟು ರಾಜ್ಯಪಾಲರಿಗೆ ಬೇರೆ ಕೆಲಸ ಇಲ್ಲವೇ ಎಂದು ದವೆ ಪ್ರಶ್ನಿಸಿದ್ದಾರೆ. ಸ್ವೀಕರ್ ಅವರು ವಿಧಾನ ಸಭೆಯ ಒಡೆಯ. ರಾಜ್ಯಪಾಲರು ಅವರ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ದವೆ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.