ನ್ಯಾಯ ವ್ಯವಸ್ಥೆಯ ಬೆನ್ನಿಗೆ ಇರಿದ ಗೊಗೊಯಿ

Update: 2020-03-19 05:01 GMT

2017ರಲ್ಲಿ ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶನೊಬ್ಬ ತನ್ನ ನಿವೃತ್ತಿಯ ಒಂದು ದಿನ ಮೊದಲು ‘‘ನವಿಲು ಹಿಂದೂ ಧರ್ಮದಲ್ಲಿ ಬಹು ಮುಖ್ಯ. ಯಾಕೆಂದರೆ ಹೆಣ್ಣು ನವಿಲು ಗಂಡು ನವಿಲಿನ ಜೊತೆಗೆ ದೈಹಿಕ ಸಂಪರ್ಕ ನಡೆಸುವುದಿಲ್ಲ. ಗಂಡು ನವಿಲಿನ ಕಣ್ಣೀರನ್ನು ಕುಡಿದು ಹೆಣ್ಣು ನವಿಲು ಗರ್ಭ ಧರಿಸುತ್ತದೆ’’ ಎಂಬ ಹೇಳಿಕೆಯೊಂದನ್ನು ನೀಡಿ ವಿವಾದಕ್ಕೊಳಗಾಗಿದ್ದರು. ದೈಹಿಕ ಸಂಪರ್ಕದಿಂದಲೇ ನವಿಲು ಗರ್ಭ ಧರಿಸುವ ಅಂಶ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ತಿಳಿದಿರುವ ಸತ್ಯ. ಹೀಗಿರುವಾಗ, ದೇಶದ ಅತ್ಯುನ್ನತ ಸ್ಥಾನವನ್ನು ನಿರ್ವಹಿಸಿ ನಿರ್ಗಮಿಸುತ್ತಿರುವ ನ್ಯಾಯಾಧೀಶರೊಬ್ಬರು ಈ ಬಗೆಯ ಧಾರ್ಮಿಕ ಮೌಢ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಟೀಕೆಗೆ, ವಿಡಂಬನೆಗೆ, ತಮಾಷೆಗೆ ಒಳಗಾಯಿತು. ಆದರೆ ಚರ್ಚೆ ‘ನವಿಲನ್ನು’ ಕೇಂದ್ರವಾಗಿಟ್ಟುಕೊಂಡು ನಡೆಯಿತು. ನವಿಲು ಹೇಗೆ ಬೇಕಾದರೂ ಗರ್ಭ ಧರಿಸಲಿ. ಆದರೆ, ಇಷ್ಟೊಂದು ಧಾರ್ಮಿಕ ವೌಢ್ಯವನ್ನು ಹೊಂದಿರುವ ನ್ಯಾಯಾಧೀಶನೊಬ್ಬ ನ್ಯಾಯಾಲಯಕ್ಕೆ ನಿಜಕ್ಕೂ ನ್ಯಾಯ ನೀಡಿರಬಹುದೇ? ಎಂಬ ಪ್ರಶ್ನೆ ಯಾರನ್ನೂ ಕಾಡಲಿಲ್ಲ. ನವಿಲು ಹೇಗೆ ಗರ್ಭ ಧರಿಸುತ್ತದೆ ಎನ್ನುವುದರ ಅರಿವೇ ಇಲ್ಲದ ನ್ಯಾಯಾಧೀಶ, ತನ್ನ ಮುಂದೆ ಬಂದಿದ್ದ ವಿವಿಧ ಪ್ರಕರಣಗಳನ್ನು ಹೇಗೆ ನಿಭಾಯಿಸಿರಬಹುದು? ಆತನ ತೀರ್ಪು ಎಷ್ಟರ ಮಟ್ಟಿಗೆ ಸಂವಿಧಾನಕ್ಕೆ ನ್ಯಾಯಕೊಟ್ಟಿರಬಹುದು? ಎನ್ನುವ ಚರ್ಚೆ ಮುನ್ನೆಲೆಗೆ ಬರಲೇ ಇಲ್ಲ.

ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯಿ ಮೂಲಕ ಆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಹತ್ತು ಹಲವು ಮಹತ್ವದ ತೀರ್ಪುಗಳನ್ನು ನೀಡಿರುವ ರಂಜನ್ ಗೊಗೊಯಿ ನಿವೃತ್ತರಾದ ಕೆಲವೇ ದಿನಗಳಲ್ಲಿ ಬಿಜೆಪಿಯಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ. ದೇಶವನ್ನು ಅಘೋಷಿತ ತುರ್ತು ಪರಿಸ್ಥಿತಿ ಆಳುತ್ತಿರುವ ಈ ದಿನಗಳಲ್ಲಿ, ಜನರಿಗೆ ಸುಪ್ರೀಂಕೋರ್ಟ್ ಏಕೈಕ ಭರವಸೆಯಾಗಿತ್ತು. ಆದರೆ ಆ ಎಲ್ಲ ಭರವಸೆಗಳನ್ನು ಕಾಲಿನಿಂದ ತುಳಿದು ಹಾಕುವವರಂತೆ ಗೊಗೊಯಿ ತನ್ನನ್ನು ತಾನು ಕೇಂದ್ರ ಸರಕಾರಕ್ಕೆ ಮಾರಿಕೊಂಡಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್‌ನ ವಿಶ್ವಾಸಾರ್ಹತೆಯನ್ನೇ ಅವರು ಬಲಿಕೊಟ್ಟಿದ್ದಾರೆ. ಸಂವಿಧಾನವನ್ನು ಅನುಷ್ಠಾನಗೊಳಿಸಬೇಕಾದ ನ್ಯಾಯ ವ್ಯವಸ್ಥೆಯೇ ತನ್ನನ್ನು ತಾನು ಸರಕಾರಕ್ಕೆ ಮಾರಿಕೊಂಡ ಹೊತ್ತಿನಲ್ಲಿ ಜನಸಾಮಾನ್ಯರು ಯಾರಿಂದ ನ್ಯಾಯವನ್ನು ನಿರೀಕ್ಷಿಸಬೇಕು? ಈಗ ಎರಡು ಪ್ರಮುಖ ಪ್ರಶ್ನೆಗಳು ನಮ್ಮ ಮುಂದಿವೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ಸಂದರ್ಭದಲ್ಲಿ ಗೊಗೊಯಿ ನೀಡಿದ ಬಹುತೇಕ ತೀರ್ಪುಗಳು ಕೇಂದ್ರ ಸರಕಾರದ ಮುಖ್ಯವಾಗಿ ಆರೆಸ್ಸೆಸ್ ಸಂಘಟನೆಯ ಪರವಾಗಿತ್ತು. ಆದರೆ ‘ಅವರು ಸಂವಿಧಾನಕ್ಕೆ ಬದ್ಧರಾಗಿ ಆ ತೀರ್ಪನ್ನು ನೀಡಿದ್ದಾರೆ’ ಎಂದು ಇಡೀ ದೇಶ ಅದನ್ನು ವೌನವಾಗಿಯೇ ನುಂಗಿಕೊಂಡಿತು.

ಇದೀಗ ಗೊಗೊಯಿ ಅವರ ನಡೆಯಿಂದಾಗಿ ಅವರ ತೀರ್ಪುಗಳೆಲ್ಲವೂ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಆ ತೀರ್ಪನ್ನು ದೇಶ ಈಗಲೂ ಗೌರವಿಸುವುದು ಸಾಧ್ಯವೇ? ಎರಡನೇ ಪ್ರಶ್ನೆ, ಇಂದು ದೇಶದ ಬಹುತೇಕ ಸರ್ವಾಧಿಕಾರಿ ನಡೆಯನ್ನು ಸುಪ್ರೀಂಕೋರ್ಟ್‌ನಲ್ಲಿ ವಿವಿಧ ಸಾಮಾಜಿಕ ಚಿಂತಕರು, ಹೋರಾಟಗಾರರು ಪ್ರಶ್ನಿಸಿದ್ದಾರೆ ಮತ್ತು ಭಾರತದ ಭವಿಷ್ಯ ಆ ತೀರ್ಪುಗಳ ಮೇಲೆಯೇ ನಿಂತಿದೆ. ಅವರಿಗೆ ನ್ಯಾಯ ಸಿಗಬಹುದೆ? ವಿವಾದಿತ ಅಯೋಧ್ಯೆ ತೀರ್ಪಿನಲ್ಲಿರುವ ಗೊಂದಲಗಳ ಬಗ್ಗೆ ಈ ಹಿಂದೆ ಹಲವು ನ್ಯಾಯ ತಜ್ಞರು ಪ್ರಶ್ನೆ ಮಾಡಿದ್ದರು. ಒಂದೆಡೆ, ಬಾಬರಿ ಮಸೀದಿ ಧ್ವಂಸವನ್ನು ಕ್ರಿಮಿನಲ್ ಕೃತ್ಯ ಎಂದು ಹೇಳುತ್ತಲೇ, ಆ ಭೂಮಿಯನ್ನು ನ್ಯಾಯಮೂರ್ತಿಗಳು ಧ್ವಂಸಗೈದವರ ಕೈಗೆ ಒಪ್ಪಿಸುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಇದ್ದಿರಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಅಲ್ಲಿ ರಾಮಮಂದಿರವನ್ನು ನಿರ್ಮಿಸಲು ನ್ಯಾಯಮೂರ್ತಿ ಆದೇಶ ನೀಡುತ್ತಾರೆ. ಸಂವಿಧಾನ ಮತ್ತು ಸುಪ್ರೀಂಕೋರ್ಟ್‌ನ ಮೇಲಿನ ಗೌರವದ ಕಾರಣಕ್ಕಾಗಿ ಈ ತೀರ್ಪನ್ನು ಸಕಲ ಭಾರತೀಯರೂ ಒಪ್ಪುತ್ತಾರೆ.

ಇದಾದ ಬಳಿಕ, ಈ ತೀರ್ಪಿನ ವಿರುದ್ಧ ಸಲ್ಲಿಸಲಾದ ಎಲ್ಲ ಅರ್ಜಿಗಳು ವಜಾಗೊಳ್ಳುತ್ತವೆ. ಅತ್ಯಂತ ಸೂಕ್ಷ್ಮ ಪ್ರಕರಣವಾದ ಅಯೋಧ್ಯೆ ತೀರ್ಪನ್ನು ನೀಡಿದ ಹಿನ್ನೆಲೆಯಲ್ಲಾದರೂ ಗೊಗೊಯಿ, ಬಿಜೆಪಿಯೊಂದಿಗೆ ಮತ್ತು ಸರಕಾರದ ಜೊತೆಗೆ ಅಂತರವನ್ನು ಕಾಯ್ದುಗೊಳ್ಳಬೇಕಾಗಿತ್ತು. ಆದರೆ ಗೊಗೊಯಿ ರಾಜ್ಯಸಭೆಗೆ ಆಯ್ಕೆಯಾಗಿರುವುದು ಆ ತೀರ್ಪಿನ ವಿಶ್ವಾಸಾರ್ಹತೆಯನ್ನೇ ಇಲ್ಲವಾಗಿಸಿದೆ. ರಫೇಲ್ ಹಗರಣಕ್ಕೆ ಸಂಬಂಧಿಸಿದ ತೀರ್ಪನ್ನು ಇದೀಗ ನಾವು ಮರು ಪ್ರಶ್ನಿಸಬೇಕಾಗುತ್ತದೆ. ಯಾವುದೇ ತನಿಖೆ ನಡೆಸಲು ಅವಕಾಶ ನೀಡದೆ, ಸರಕಾರಕ್ಕೆ ಕ್ಲೀನ್ ಚಿಟ್ ಕೊಟ್ಟ ನ್ಯಾಯಾಲಯದ ತೀರ್ಪು ಕೂಡ, ಸಂವಿಧಾನಕ್ಕೆ ಬದ್ಧವಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ. ಒಂದು ವೇಳೆ, ಈ ತೀರ್ಪಿನ ಹಿಂದೆ ರಾಜಕೀಯ ಹಸ್ತಕ್ಷೇಪ ಇದೆ ಎಂದಾದರೆ ಅದಕ್ಕಿಂತ ನಾಚಿಕೆಗೇಡು ಇನ್ನೊಂದಿಲ್ಲ. ಇದು ಇಡೀ ದೇಶಕ್ಕೆ ಮಾಡಿದ ಅನ್ಯಾಯವೆಂದು ಪರಿಗಣಿಸಬೇಕಾಗುತ್ತದೆ. ಈ ದೇಶದ ಭದ್ರತೆಯನ್ನು ರಕ್ಷಿಸಬೇಕಾದ ನ್ಯಾಯಾಲಯವೇ ರಫೇಲ್ ಹಗರಣ ತನಿಖೆಯಾಗದಂತೆ ನೋಡಿಕೊಂಡು ದೇಶದ ಹಿತಾಸಕ್ತಿಯನ್ನು ಅಧಿಕಾರಕ್ಕಾಗಿ ಬಲಿಕೊಟ್ಟಿತೆೆ ಎಂದು ಜನರು ಅನುಮಾನ ಪಡುವಂತಾಗಿದೆ.

ಕಾಶ್ಮೀರದಲ್ಲಾಗಿರುವ ಮಾನವ ಹಕ್ಕು ದಮನದ ಕುರಿತಂತೆ ಸುಪ್ರೀಂಕೋರ್ಟ್ ಮೌನ ವಹಿಸಿರುವ ಬಗ್ಗೆ ಈ ಹಿಂದೆ ಹಲವು ವಕೀಲರು, ಹೋರಾಟಗಾರರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಕಾಶ್ಮೀರದಲ್ಲಿ ಎಸಗುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸಿ ಹಲವರು ಕೋರ್ಟ್ ಮೆಟ್ಟಿಲೇರಿದ್ದಾರಾದರು, ಪ್ರಕರಣದ ಗಂಭೀರತೆಯನ್ನು ಕೊನೆಗೂ ನ್ಯಾಯಾಲಯ ಅರಿಯಲೇ ಇಲ್ಲ. ಇದೀಗ ಅದಕ್ಕೆ ಕಾರಣವೇನು ಎನ್ನುವುದನ್ನು ಸ್ವತಃ ಗೊಗೊಯಿ ಅವರೇ ಘೊಷಿಸಿಕೊಂಡಂತಾಗಿದೆ. ಸಿಎಎ ಮತ್ತು ಎನ್‌ಆರ್‌ಸಿಯ ಹಿಂದೆಯೂ ಗೊಗೊಯಿ ಕೈಗಳಿವೆ. ಅಸ್ಸಾಮಿನಲ್ಲಿ ನಡೆಯುತ್ತಿರುವ ಅನ್ಯಾಯದ ಬೀಜ ಗೊಗೊಯಿ ಅವರೇ ಆಗಿದ್ದಾರೆ. ಒದಗಿಸಲು ಸಾಧ್ಯವಾಗದ ಪೌರತ್ವ ದಾಖಲೆಗಳನ್ನು ನೀಡಲು ಜನರಿಗೆ ಆದೇಶಿಸಿದವರು ಗೊಗೊಯಿ. ಇವರ ನೇತೃತ್ವದ ನ್ಯಾಯ ಪೀಠ ನೀಡಿರುವ ಆದೇಶ ಇಂದು ಅಸ್ಸಾಮ್‌ನ್ನು ಮಾತ್ರವಲ್ಲ, ಇಡೀ ದೇಶವನ್ನೇ ನರಕಸದೃಶ ಮಾಡಲಿದೆ. ನ್ಯಾಯಾಧೀಶರಿಗೆ ಒಡ್ಡುವ ಇಂತಹ ರಾಜಕೀಯ ಆಮಿಷಗಳು ಮುಂದಿನ ದಿನಗಳಲ್ಲಿ ಇತರ ನ್ಯಾಯಾಧೀಶರು ನೀಡುವ ತೀರ್ಪುಗಳ ಮೇಲೆಯೂ ಬೀರಲಿವೆ.

ಮುಂದಿನ ದಿನಗಳಲ್ಲಿ ಎಲ್ಲ ನ್ಯಾಯಾಧೀಶರು, ಸರಕಾರ ಭವಿಷ್ಯದಲ್ಲಿ ನೀಡುವ ಸವಲತ್ತುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ತೀರ್ಪನ್ನು ನೀಡಿದರೆ ಭಾರತ ಸಂವಿಧಾನದ ಸ್ಥಿತಿಯೇನಾಗಬೇಕು? ಇಂದು ಪ್ರಜಾಸತ್ತೆ ಉಳಿದುಕೊಂಡಿರುವುದು ಸುಪ್ರೀಂಕೋರ್ಟ್‌ನ ಮೇಲಿರುವ ನಂಬಿಕೆಯಿಂದ. ‘ನಮಗೆ ಅನ್ಯಾಯವಾದರೆ ಸುಪ್ರೀಂಕೋರ್ಟ್ ಇದೆ’ ಎಂಬ ಭರವಸೆ ಪ್ರತಿಯೊಬ್ಬ ನಾಗರಿಕನ ಎದೆಯೊಳಗಿರುವುದರಿಂದಲೇ ಜನಸಾಮಾನ್ಯರು ಅನ್ಯಾಯವಾದಾಗಲೂ ಅದನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸಲು ಮುಂದಾಗುತ್ತಾರೆ. ಯಾವಾಗ ನ್ಯಾಯಾಲಯ ಆಳುವವರ ಕಡೆಗಿದೆ ಎನ್ನುವುದು ಜನರಿಗೆ ಸ್ಪಷ್ಟವಾಗುತ್ತದೋ ಆಗ, ಅನ್ಯಾಯದ ವಿರುದ್ಧ ಬೀದಿಗಿಳಿಯುವುದು ಅನಿವಾರ್ಯವಾಗುತ್ತದೆ. ಸಿಎಎ-ಎನ್‌ಆರ್‌ಸಿ ವಿರುದ್ಧ ಜನರು ಬೀದಿಗಿಳಿದಿರುವುದು ಇದೇ ಕಾರಣಕ್ಕೆ. ಎಲ್ಲ ತನಿಖಾ ಸಂಸ್ಥೆಗಳನ್ನು ಬಲಿತೆಗೆದುಕೊಂಡ ಮೋದಿ ನೇತೃತ್ವದ ಸರಕಾರ, ಇದೀಗ ಅಂತಿಮವಾಗಿ ನ್ಯಾಯವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ನುಂಗಿ ಹಾಕಿದೆ ಎನ್ನುವುದನ್ನು ಗೊಗೊಯಿ ಪ್ರಕರಣ ಎತ್ತಿ ಹೇಳಿದೆ. ಈ ದೇಶದ ಸಂವಿಧಾನವನ್ನು ಅದರ ಕಾವಲುಗಾರರ ಕೈಯಲ್ಲೇ ಸಾಯಿಸುವ ಉದ್ದೇಶವನ್ನು ಸರಕಾರ ಹೊಂದಿದೆಯೇನೋ ಎಂಬ ಅನುಮಾನ ದೇಶವನ್ನು ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News