ಒಲಿಂಪಿಕ್ಸ್ ವಿಳಂಬವಾಗಬಹುದು ಎಂದ ವಿಶ್ವ ಅಥ್ಲೆಟಿಕ್ಸ್ ಮುಖ್ಯಸ್ಥ ಸೆಬಾಸ್ಟಿಯನ್

Update: 2020-03-19 17:22 GMT

ಲಂಡನ್, ಮಾ.19: ಕೊರೋನ ವೈರಸ್ ಭೀತಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್ ಈ ವರ್ಷಾಂತ್ಯಕ್ಕೆ ಮುಂದೂಡಲ್ಪಡಬಹುದು. ಆದರೆ, ಈ ಕುರಿತು ಈಗಲೇ ದೃಢ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ವಿಶ್ವ ಅಥ್ಲೆಟಿಕ್ಸ್ ಮುಖ್ಯಸ್ಥ ಸೆಬಾಸ್ಟಿಯನ್ ಕೋಯಿ ಗುರುವಾರ ಹೇಳಿದ್ದಾರೆ. ಕಳವಳ ವ್ಯಕ್ತಪಡಿಸುತ್ತಿರುವ ಅಥ್ಲೀಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರವಿಲ್ಲ ಎಂದು ಒಲಿಂಪಿಕ್ಸ್ ಮುಖ್ಯಸ್ಥರು ಬುಧವಾರ ಒಪ್ಪಿಕೊಂಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯು ಇಡೀ ವಿಶ್ವದ ಕ್ರೀಡಾ ಕಾಲೆಂಡರ್‌ನ್ನು ತಲೆಕೆಳಗಾಗಿಸಿದ್ದು, ಯುರೋ 2020 ಫುಟ್ಬಾಲ್ ಚಾಂಪಿಯನ್‌ಶಿಪ್ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಎಲ್ಲ ಟೆನಿಸ್ ಟೂರ್ನಿಗಳನ್ನು ರದ್ದುಪಡಿಸಲಾಗಿದೆ.

ಒಲಿಂಪಿಕ್ ಗೇಮ್ಸ್‌ನ್ನು ಪೂರ್ವ ನಿಗದಿಯಂತೆ ಜುಲೈ 24ರಂದೇ ಪ್ರಾರಂಭಿಸುವುದು ಸಂಘಟನೆಯ ಮುಖ್ಯ ಗುರಿಯಾಗಿದೆ ಎಂದು ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಚ್ ಇತ್ತೀಚೆಗೆ ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ ಗೇಮ್ಸ್ ಸಮನ್ವಯ ಆಯೋಗದ ಸದಸ್ಯರಾಗಿರುವ ಸೆಬಾಸ್ಟಿಯನ್, ಒಲಿಂಪಿಕ್ ಗೇಮ್ಸ್ ವಿಳಂಬವಾಗುವ ಸಾಧ್ಯತೆಯಿದೆ ಎಂದು ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.

‘‘ಒಲಿಂಪಿಕ್ ಗೇಮ್ಸ್ ವಿಳಂಬವಾಗುವ ಸಾಧ್ಯತೆಯಿದೆ. ಈ ಕ್ಷಣದಲ್ಲಿ ಏನೂ ಕೂಡ ಆಗುವ ಸಂಭವವಿದೆ’’ಎಂದು ಗೇಮ್ಸ್ ಸೆಪ್ಟಂಬರ್ ಅಥವಾ ಅಕ್ಟೋಬರ್‌ಗೆ ಮುಂದೂಡಲ್ಪಡಲಿದೆಯೇ ಎಂಬ ಪ್ರಶ್ನೆಗೆ ಸೆಬಾಸ್ಟಿಯನ್ ಉತ್ತರಿಸಿದರು.

2021ರ ತನಕ ಒಲಿಂಪಿಕ್ ಗೇಮ್ಸ್ ಮುಂದೂಡಿಕೆಯು ಸಮಸ್ಯೆಯನ್ನು ಸೃಷ್ಟಿಸಬಹುದು. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡುಬಂದರೂ ಸದಸ್ಯ ಫೆಡರೇಶನ್‌ಗಳು ತಮ್ಮ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸಲು ಒಲಿಂಪಿಕ್ಸ್ ವರ್ಷಗಳನ್ನು ತಪ್ಪಿಸಿಕೊಳ್ಳುತ್ತವೆ ಎಂದು ಸೆಬಾಸ್ಟಿಯನ್ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ನಮಗೆ ಇತರ ಆದ್ಯತೆಗಳಿವೆ ಹಾಗೂ ಈ ಹಂತದಲ್ಲಿ ಒಲಿಂಪಿಕ್ಸ್ ನ್ನು ಮುಂದೂಡಲೇಬೇಕು ಅಥವಾ ರದ್ದುಪಡಿಸಬೇಕೆಂದು ನಾವು ಒತ್ತಾಯಿಸಬೇಕಾಗಿದೆ. ಈ ಹಂತದಲ್ಲಿ ನಮಗೆ ಹೆಚ್ಚಿನ ಆಯ್ಕೆಗಳಿವೆ ಎಂದು ನಾನು ಭಾವಿಸುವುದಿಲ್ಲ ಎಂದು ಬ್ರಿಟನ್‌ನ ಮಾಜಿ ನಾಲ್ಕು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಮ್ಯಾಥ್ಯೂ ಪಿನ್ಸೆಂಟ್ ನಿರ್ಣಾಯಕ ಕ್ರಮಕ್ಕೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News