25 ರಾಜ್ಯಗಳಲ್ಲಿ 3 ವರ್ಷಗಳಿಂದ ಸಭೆ ಸೇರದ ಎಸ್‌ಸಿ/ಎಸ್‌ಟಿ ಸಮಿತಿ !

Update: 2020-03-19 17:33 GMT
ತಾವರ್‌ಚಂದ್ ಗೆಹ್ಲೋಟ್

ಹೊಸದಿಲ್ಲಿ, ಮಾ.19: ಪರಿಶಿಷ್ಟ ಜಾತಿ/ಪಂಗಡ( ದೌರ್ಜನ್ಯ ತಡೆ) ಕಾಯ್ದೆ, 1989ರ ಅನುಷ್ಟಾನದ ಮೇಲ್ವಿಚಾರಣೆ ವಹಿಸಲು ರೂಪಿಸಲಾಗಿರುವ ಎಸ್‌ಸಿ/ಎಸ್‌ಟಿ ಸಮಿತಿಗಳು 25 ರಾಜ್ಯಗಳಲ್ಲಿ ಕಳೆದ 3 ವರ್ಷದಿಂದ ಸಭೆ ಸೇರಿಯೇ ಇಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಂಸತ್ತಿಗೆ ಮಾಹಿತಿ ನೀಡಿದೆ.

ಲೋಕಸಭೆಯಲ್ಲಿ ಡಿಎಂಕೆಯ ಸಂಸದ ಡಿ ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಇಲಾಖೆಯ ಸಚಿವ ತಾವರ್‌ಚಂದ್ ಗೆಹ್ಲೋಟ್, ನಿಯಮದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಿಗಾ ಮತ್ತು ಮೇಲ್ವಿಚಾರಣೆ ಸಮಿತಿಯನ್ನು ರೂಪಿಸಲಾಗಿದೆ. ಆಯಾ ರಾಜ್ಯದ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುವ ಸಮಿತಿ ವರ್ಷಕ್ಕೆ ಎರಡು ಬಾರಿ ಸಭೆ ಸೇರಬೇಕಿದೆ. ಆದರೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಗೋವಾ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ರಾಜಸ್ತಾನ್, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರಪ್ರದೇಶ, ಉತ್ತರಾಖಂಡ, ಅಂಡಮಾನ್ ಮತ್ತು ನಿಕೋಬಾರ್, ದಾದ್ರಾ ಮತ್ತು ನಗರಹವೇಲಿ, ಡಾಮನ್ ಮತ್ತು ಡಿಯು, ದಿಲ್ಲಿ ಹಾಗೂ ಲಕ್ಷದ್ವೀಪಗಳಲ್ಲಿ 2016, 2017, ಮತ್ತು 2018ರಲ್ಲಿ ಸಮಿತಿಯ ಸಭೆ ನಡೆದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

2016ರಲ್ಲಿ ಹರ್ಯಾನದಲ್ಲಿ 2 ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಒಂದು ಸಭೆ ನಡೆದಿದೆ. 2017ರಲ್ಲಿ ಛತ್ತೀಸ್‌ಗಢ, ಗುಜರಾತ್, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ತಲಾ ಒಮ್ಮೆ ಸಭೆ ನಡೆದಿದೆ. 2018ರಲ್ಲಿ ಅಸ್ಸಾಂ, ಛತ್ತೀಸ್‌ಗಢ, ಹರ್ಯಾನ, ಮಹಾರಾಷ್ಟ್ರ, ಚಂಡೀಗಢ ಮತ್ತು ಪುದುಚೇರಿಯಲ್ಲಿ ತಲಾ ಒಮ್ಮೆ, ಪ.ಬಂಗಾಳದಲ್ಲಿ 2 ಮತ್ತು ಗುಜರಾತ್‌ನಲ್ಲಿ 3 ಬಾರಿ ಸಮಿತಿ ಸಭೆ ನಡೆಸಿದೆ ಎಂದು ಸಚಿವರು ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News