ಕೊರೋನ: ನಿರ್ವಹಣೆಗೆ ಬೇಕಿದೆ ಸಮರ್ಥ ಆರೋಗ್ಯ ಸೇವಾ ವ್ಯವಸ್ಥೆ

Update: 2020-03-19 18:22 GMT

ಯಾವ ರೀತಿಯ ಆಹಾರ ಕ್ರಮದಿಂದ ಸೋಂಕುಗಳು ಹರಡುತ್ತವೆ ಎನ್ನುವ ಮಾತುಕತೆಗಳಲ್ಲಿ ಸಮಯ ವ್ಯರ್ಥ ಮಾಡದೇ, ಭೂಮಿಯ ವಾತಾವರಣದಲ್ಲಿ ಉಂಟಾಗಿರುವ ವ್ಯತ್ಯಾಸಗಳಿಂದಾಗಿ ನಮ್ಮ ನಡುವೆ ಇರುವ ಅನೇಕ ರೀತಿಯ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಗಳು ಪ್ರಬಲವಾಗುತ್ತಿರುವ ಸತ್ಯವನ್ನು ಒಪ್ಪಿಕೊಂಡು, ಇವುಗಳನ್ನು ನಿಭಾಯಿಸುವ ವ್ಯವಸ್ಥೆಗಳನ್ನು ಕಟ್ಟಿಕೊಳ್ಳುವುದು ತಕ್ಷಣದ ತುರ್ತಾಗಿರುತ್ತದೆ. ಜೊತೆಗೆ ಸಾರ್ಕ್‌ನಂತಹ ಸಂಸ್ಥೆಗಳ ಮೂಲಕ ನೆರೆಹೊರೆ ದೇಶಗಳೊಂದಿಗೆ ಉತ್ತಮ ಸಂವಹನ ಮತ್ತು ಸಂಪರ್ಕಗಳನ್ನು ಸಾಧಿಸಿಕೊಂಡು ಜನರನ್ನು ರಕ್ಷಿಸಿಕೊಳ್ಳುವ ಯೋಜಿತ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕಾಗಿದೆ.

ಅವರು ಹಿರಿಯರು. ಬದುಕಿನ ಏರಿಳಿತಗಳನ್ನು ಹತ್ತಿರದಿಂದ ಕಂಡವರು. ಬಹಳ ಬೇಸರದಿಂದ ಇಂದಿನವರು ಹಿಂದಿನವರ ಕುರಿತು ಅಸಡ್ಡೆ ತೋರುತ್ತಾರೆಂದು ಹೇಳುತ್ತಿದ್ದರು. ಕೊರೋನದಂತಹ ಕಾಯಿಲೆಗಳಿಗೆ ಬೆಳ್ಳುಳ್ಳಿ ರಾಮಬಾಣ, ಆದರೆ ಇಂದಿನವರಿಗೆ ಇಂತಹ ವಿಷಯಗಳನ್ನು ಅರಿತುಕೊಳ್ಳುವ ವ್ಯವಧಾನವೇ ಇಲ್ಲ ಎನ್ನುತ್ತಿದ್ದರು. ಅವರ ಮಾತುಗಳನ್ನು ಕೇಳಿಸಿಕೊಂಡ ನಾನು ಮೌನಕ್ಕೆ ಶರಣಾದೆ. ಅವರ ಅರಿವಿಗೆ ನಿಲುಕಲು ಸಾಧ್ಯವಿರದ ಅನೇಕ ಸಂಗತಿಗಳು ಕೊರೋನದ ಹಿಂದಿವೆ. ಅವುಗಳನ್ನು ಅವರಿಗೆ ಅರ್ಥ ಮಾಡಿಸಲು ಸಾಧ್ಯವೇ ಇಲ್ಲ. ಅವರ ನೋವು ಸತ್ಯವಾದುದು. ಹಾಗೆಯೇ ನ್ನ ಮೌನ ಕೂಡ ಸತ್ಯವಾದುದೆ.

ಕಳೆದ ಎರಡು ಸಾವಿರ ವರ್ಷಗಳವರೆಗೆ ಬದಲಾವಣೆ ಎನ್ನುವುದು ಸೌದೆ ಒಲೆಯ ಕಾವಲಿಯ ಮೇಲಿನ ರೊಟ್ಟಿಯಂತೆ ಇತ್ತು. ಒಣಗಿರುವ ಸೌದೆಯ ಮರದ ಜಾತಿಯನ್ನು ಆಧರಿಸಿ, ಬೀಸುತ್ತಿರುವ ಗಾಳಿಯನ್ನು ಅವಲಂಬಿಸಿ ರೊಟ್ಟಿ ಬೇಯುವ ಸಮಯದಲ್ಲಿ ಒಂದಿಷ್ಟು ವ್ಯತ್ಯಾಸವಾಗಲು ಅವಕಾಶವಿರುತ್ತಿತ್ತು. ಇಂತಹ ಸೌದೆಯ ಒಲೆಯ ಅಡುಗೆಗೆ ಹೊಂದಿಕೊಂಡವರಿಗೆ ಗ್ಯಾಸಿನ ಒಲೆಯ ಕುರಿತು ಒಂದಿಷ್ಟು ಅರ್ಥ ಮಾಡಿಸಲು ಅವಕಾಶವಾಗಬಹುದು. ಆದರೆ ಬೆಂಕಿಯೇ ಇರದ ಕುಕ್ ಟಾಪ್ ಒಲೆ ಮತ್ತು ಒವೆನ್‌ಗಳನ್ನು ಅರ್ಥ ಮಾಡಿಸುವುದು ಹೇಗೆ? ಒಲೆಯೆಂದು ಗುರುತಿಸಲು ಬೇಕಾದ ಬೆಂಕಿ ಮತ್ತು ಹೊಗೆ ಎರಡೂ ಇರದ ಒಲೆಯು ಅವರ ್ರಹಿಕೆಗೆ ನಿಲುಕುವುದಾದರೂ ಹೇಗೆ?

ಕೊರೋನ ಸೋಂಕು ಕೂಡ ಹೀಗೆಯೇ. ನಾವು ನೀವು ಅರ್ಥ ಮಾಡಿಕೊಂಡಿರುವ ಕಾಯಿಲೆಯ ಲಕ್ಷಣಗಳನ್ನು ಮತ್ತು ಸೋಂಕಿನ ಗುಣಗಳನ್ನು ಬುಡಮೇಲು ಮಾಡಿರುವ ಸ್ಥಿತಿಯಿದು. ಒವೆನ್‌ಗಳು ಮತ್ತು ಕುಕ್ ಟಾಪ್‌ಗಳು ಸೌದೆ ಒಲೆಗಳಂತೆ ಅಕ್ಕಿಯನ್ನು ಅನ್ನ ಮಾಡುತ್ತವೆ. ಆದರೆ ಇಲ್ಲಿ ಅಕ್ಕಿಯನ್ನು ಅನ್ನವಾಗಿಸಲು ಬಳಸುವ ಶಕ್ತಿಯೇ ಬೇರೆ. ಕೊರೋನ ಇತರೆ ವೈರಸ್‌ಗಳಂತೆ ನೆಗಡಿ, ಸೀನು ಮತ್ತು ಜ್ವರವನ್ನು ತರುತ್ತದೆ. ಆದರೆ ಅದನ್ನು ತರುವ ಮತ್ತು ಶರೀರವನ್ನು ಆಕ್ರಮಿಸುವ ವಿಧಾನವೇ ಬೇರೆ. ಸಾವಿರಾರು ವೈರಸ್‌ಗಳು ಮನುಷ್ಯನಲ್ಲಿ ಕಾಯಿಲೆಗಳನ್ನು ತರುತ್ತವೆ. ಶರೀರವೂ ಅಷ್ಟೇ, ಅನೇಕ ವೈರಸ್‌ಗಳನ್ನು ಸೋಲಿಸುವ ಶಕ್ತಿಯನ್ನು ಹೊಂದಿದೆ. ಆದರೆ ಕೊರೋನ ಗುಂಪಿನ ವೈರಸ್‌ಗಳ ರೀತಿ ನೀತಿಯೇ ಬೇರೆ. ಈ ಹಿಂದೆ ಬಂದಿದ್ದ ಕಾಯಿಲೆಗಳಾದ ಸಾರ್ಸ್, ಮೆನಾರ್ಸ್‌ಗಳು ಇದೇ ಕೊರೋನ ಗುಂಪಿನ ವೈರಸ್‌ಗಳಾಗಿವೆ. ಈ ಗುಂಪಿನ ಇತ್ತೀಚಿನ ವೈರಸ್ ‘ನೋವೆಲ್ ಕೊರೋನ’ ಅಥವಾ ‘ಕೋವಿಡ್ 19’. ನಮ್ಮನ್ನು ಈಗ ಕಾಡುತ್ತಿರುವ ಕೊರೋನ ಗುಂಪಿನ ವೈರಸ್‌ಗಳು ಸುಮಾರು ಎಂಟು ಸಾವಿರ ವರ್ಷಗಳಿಂದಲೂ ಭೂಮಿಯ ಮೇಲೆ ಇವೆ ಎನ್ನುವುದು ವಿಜ್ಞಾನಿಗಳ ಅಂದಾಜು. ಮನುಷ್ಯನ ಮೇಲೆ ಆಕ್ರಮಣ ಮಾಡುವ ಏಳು ಕೊರೋನ ವೈರಸ್‌ಗಳನ್ನು ಗುರುತಿಸಲಾಗಿತ್ತು. ಇದರಲ್ಲಿ ಸಾರ್ಸ್ ಮತ್ತು ಮೆನಾರ್ಸ್‌ ಹೆಚ್ಚು ಮನುಷ್ಯರನ್ನು ಕಾಡಿದ್ದವು. ಈ ಗುಂಪಿನ ಎಂಟನೆೀ ಸದಸ್ಯನೇ ಕೋವಿಡ್ 19.

ಕೊರೋನ ಗುಂಪಿನ ವೈರಸ್‌ಗಳ ಸಹಜ ತಾಣ ಕಾಡು ಪ್ರಾಣಿಗಳು. ಸಸ್ತನಿ ಪ್ರಾಣಿಗಳನ್ನು ಇವು ಆಶ್ರಯಿಸುತ್ತವೆ. ಶ್ವಾಸಕೋಶದ ಮೇಲೆ ದಾಳಿ ಮಾಡುವ ಈ ಗುಂಪಿನ ವೈರಸ್‌ಗಳು ಹಕ್ಕಿಗಳಲ್ಲಿ, ಕೋಳಿಗಳಲ್ಲಿ, ಹಸುಗಳಲ್ಲಿ, ಹಂದಿಗಳಲ್ಲಿ ಉಸಿರಾಟದ ಸಮಸ್ಯೆಯನ್ನು ತರುತ್ತವೆ. ಕಳೆದ ಇಪ್ಪತ್ತು ವರ್ಷಗಳಿಂದ ಇವುಗಳ ಹರುಡುವಿಕೆಯ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಮೊದಲು ಈ ವೈರಸ್‌ಗಳು ಭೂಮಿಯಲ್ಲಿ ಇರಲಿಲ್ಲ ಎಂದೇನು ಅಲ್ಲ. ಈಗಾಗಲೇ ಹೇಳಿದ ಹಾಗೆ, ಕಾಡು ಪ್ರಾಣಿಗಳಲ್ಲಿ ಇದ್ದವು. ಅಪರೂಪಕ್ಕೆ ಸಾಕು ಪ್ರಾಣಿಗಳಿಗೆ ಹರಡುತ್ತಿದ್ದವು. ಮನುಷ್ಯರಿಗೆ ಬರುತ್ತಿದ್ದ ಸಂದರ್ಭಗಳು ಬಹಳ ಅಪರೂಪ. ಒಂದು ವೇಳೆ ಬಂದರೂ, ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದ್ದ ಪ್ರಮಾಣ ತೀರ ಕಡಿಮೆಯಾಗಿತ್ತು. ಆದರೆ 2003ರಲ್ಲಿ ಕಾಣಿಸಿಕೊಂಡ ಸಾರ್ಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿತ್ತಾದರೂ, ಹರಡುವಿಕೆ ಸುಲಭವಾಗಿರಲಿಲ್ಲ. ಆದರೆ ಕೋವಿಡ್ 19 ಮಾತ್ರ ಬಹಳ ಬೇಗ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ.

ಕೊರೋನ ಗುಂಪಿನ ವೈರಸ್‌ನಲ್ಲಿ ಇದು ಅಪರೂಪದ ವರ್ತನೆ. ಚೀನಾದಲ್ಲಿ ಇದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಾಣಿಸಿಕೊಂಡಾಗ ವಿಜ್ಞಾನಿಗಳಿಗೆ ಆರಂಭದಲ್ಲಿ ಗೊಂದಲವಾಯಿತು. ಏನಾಗುತ್ತಿದೆ ಎಂದು ಅರಿಯುವ ಮೊದಲೇ ಸಾವಿರಾರು ಜನರಿಗೆ ಸೋಂಕು ಹರಡಿಬಿಟ್ಟಿತ್ತು. ಸೋಂಕು ಹರಡತೊಡಗಿದ ಒಂದು ತಿಂಗಳೊಳಗೆ ಈ ವೈರಸ್ ಅನ್ನು ಅರ್ಥ ಮಾಡಿಕೊಳ್ಳುವಲ್ಲಿ ತಕ್ಕಮಟ್ಟಿಗೆ ಯಶಸ್ಸು ಗಳಿಸಿದ ವಿಜ್ಞಾನಿಗಳು, ಒಂದಿಷ್ಟು ಸ್ಪಷ್ಟತೆಯನ್ನು ನಮ್ಮಂತಹ ಸಾಮಾನ್ಯರಿಗೆ ನೀಡಿದ್ದಾರೆ. ಕೊರೋನ ವೈರಸ್‌ಗಳಲ್ಲಿ ಅತ್ಯಂತ ವಿಕಾಸಗೊಂಡ ವೈರಸ್ ಇದಾಗಿದೆ. ಬಹಳ ಬೇಗ ತನ್ನ ಲಕ್ಷಣಗಳನ್ನು ಬದಲಿಸಿಕೊಳ್ಳುತ್ತದೆ. ಒಂದು ರೀತಿಯಲ್ಲಿ ಊಸವರಳ್ಳಿ ಹಾಗೆ. ಅದರ ಹಾಗೆ ತನ್ನ ಬಣ್ಣವನ್ನು ಬದಲಿಸಿಕೊಳ್ಳದೆ, ತನ್ನ ಒಳರಚನೆಯನ್ನೇ ಬದಲಿಸಿಕೊಳ್ಳುವ ವೈರಸ್ ಇದಾಗಿದೆ! ಈ ಕಾರಣದಿಂದ ಇದರ ಇರುವಿಕೆಯನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಇದರ ಜೊತೆಗೆ ಮತ್ತೊಂದು ಒಳ್ಳೆಯ ಸುದ್ದಿಯೂ ಇದೆ. ಸೋಂಕು ತಗಲಿದ ಶೇ. 60ರಿಂದ 80ರಷ್ಟು ಜನರು ಒಂದೆರಡು ವಾರಗಳ ನಂತರ ಚೇತರಿಸಿಕೊಳ್ಳುತ್ತಾರೆ. ಅನೇಕ ವೇಳೆ ತೀವ್ರ ರೀತಿಯ ಸಮಸ್ಯೆಗೆ ಒಳಗಾಗದೆ ಇರುವ ಸಂದರ್ಭವೇ ಹೆಚ್ಚು.

ಇಂತಹ ವೈರಸ್ ಹೇಗೆ ನಮ್ಮ ನಡುವೆ ಸೃಷ್ಟಿಯಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸುವ ಪ್ರಯತ್ನದಲ್ಲಿ ವಿಜ್ಞಾನಿಗಳಿದ್ದಾರೆ. ಇದು ಯಾವುದೋ ಕಾಡು ಪ್ರಾಣಿಯಿಂದ ಮನುಷ್ಯನಿಗೆ ಬಂತು ಎನ್ನುವುದು ಸುಸ್ಪಷ್ಟವಾಗಿದೆ. ಇದರ ಇತಿಹಾಸವನ್ನು ಅರಿಯುವ ಕಾರ್ಯದಲ್ಲಿ ಎಪಿಡಮಿಯಾಲಿಜಿ ತಜ್ಞರು ತೊಡಗಿಕೊಂಡಿದ್ದಾರೆ. ಎಪಿಡಮಿಯಾಲಜಿಯು ಕಾಯಿಲೆಯೊಂದು ಹೇಗೆ, ಎಲ್ಲಿಂದ ಮತ್ತು ಯಾವ ರೂಪದಲ್ಲಿ ಮೂಡುತ್ತದೆ, ವಿಸ್ತರಿಸುತ್ತದೆ ಇತ್ಯಾದಿಗಳನ್ನು ಅರ್ಥ ಮಾಡಿಕೊಳ್ಳುವ ವಿಜ್ಞಾನವಾಗಿದೆ. ಇವರ ಜೊತೆಗೆ ಸಾರ್ವಜನಿಕ ಆರೋಗ್ಯ ತಜ್ಞರು ಸಾಕಷ್ಟು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ತಜ್ಞರಲ್ಲಿ ಒಬ್ಬರು ಅಲಾನ ಶೇಕ್. ಈಕೆ ಕಳೆದ ಎರಡು ದಶಕಗಳಿಂದ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಎಬೋಲಾ ಸೋಂಕು, ಸಾರ್ಸ್ ಸೋಂಕುಗಳನ್ನು ವ್ಯವಸ್ಥಿತವಾಗಿ ಅರ್ಥಮಾಡಿಕೊಳ್ಳುವ ಯತ್ನ ಮಾಡಿರುವ ಇವರು ಅನೇಕ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಇವರು ಇದೇ ಮಾರ್ಚ್ 12 ಟೆಡ್ ಭಾಷಣವೊಂದನ್ನು ನೀಡಿದ್ದರು(https://youtu.be/Fqw-9yMV0sI). ಅವರು ನೀಡಿದ ವಿವರಗಳು ಹೀಗಿವೆ.

ಇವರ ಪ್ರಕಾರ, ಕೋವಿಡ್ 19ನಂತಹ ವೈರಸ್‌ಗಳು ಮುಂಬರುವ ದಿನಗಳಲ್ಲಿ ಸಾಮಾನ್ಯ ಸಂಗತಿಗಳಾಗಲಿವೆ. ಇದಕ್ಕೆ ಎರಡು ಪ್ರಮುಖ ಕಾರಣಗಳನ್ನು ಅವರು ನೀಡುತ್ತಾರೆ: ಭೂಮಿಯ ಹವಾಮಾನದಲ್ಲಿ ಆಗುತ್ತಿರುವ ಏರುಪೇರುಗಳು(ಕ್ಲೈಮೆಟ್ ಚೇಂಚ್) ಮತ್ತು ಕಾಡುಗಳ ನಾಶ. ಭೂಮಿಯ ವಾತಾವರಣದಲ್ಲಿ ಆಗುತ್ತಿರುವ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಇಂತಹ ತಾಪಮಾನಗಳಲ್ಲಿ ಕ್ರಿಯಾಶೀಲವಾಗುವ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಗಳು ಹೊಸ ಬಗೆಯ ಸೋಂಕುಗಳಿಗೆ ಕಾರಣವಾಗುತ್ತಿವೆ. ಈ ಸೋಂಕುಗಳೆಲ್ಲವೂ ತೀರ ಹೊಸ ಸೋಂಕುಗಳು. ಹಾಗಾಗಿ ನಮ್ಮ ಹಿಂದಿನ ತಲೆಮಾರಿನವರಿಗೆ ಇವು ಅರ್ಥವೇ ಆಗುವುದಿಲ್ಲ. ಮಾನವ ಕೃಷಿ ಆರಂಭಿಸಿ ಎಂಟು ಸಾವಿರ ವರ್ಷಗಳು ಆಗಿರಬಹುದೆಂಬ ಅಂದಾಜು ಇದೆ. ಈ ಎಂಟು ಸಾವಿರ ವರ್ಷದ ಇತಿಹಾಸದಲ್ಲಿ ಈ ಸೋಂಕುಗಳು ಮೊದಲ ಬಾರಿ ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ನಮ್ಮ ಸಾಂಪ್ರದಾಯಿಕ ಚಿಂತನೆಗಳಿಗೆ ಮತ್ತು ಔಷಧಿಗಳಿಗೆ ಇವು ನಿಲುಕುವುದು ಕಷ್ಟಸಾಧ್ಯವಾಗಿದೆ. ಅಲಾನ ಅವರು ಪಟ್ಟಿ ಮಾಡುವ ಎರಡನೇ ಕಾರಣ ಬಹಳ ಕುತೂಹಲಕಾರಿಯಾದ ವಿಚಾರವಾಗಿದೆ. ಕಾಡುಗಳ ನಾಶವಾಗುತ್ತಾ ಸಾಗಿದಂತೆ, ಮನುಷ್ಯನಿಂದ ದೂರ ಉಳಿದಿದ್ದ ಕಾಡಿನ ಭಾಗಗಳು ಇಂದು ಸಂಪರ್ಕಕ್ಕೆ ಬರುತ್ತಿವೆ. ಇಲ್ಲಿ ವಾಸವಾಗಿದ್ದ ಕಾಡು ಪ್ರಾಣಿಗಳು ಅನೇಕ ರೀತಿಯ ವೈರಸ್‌ಗಳಿಗೆ ಮತ್ತು ಬ್ಯಾಕ್ಟೀರಿಯಗಳಿಗೆ ಆಶ್ರಯತಾಣಗಳಾಗಿದ್ದವು. ಈಗ ಇಂತಹ ರೋಗಾಣುಗಳ ಸಂಪರ್ಕಕ್ಕೆ ಮನುಷ್ಯ ಮೊದಲಬಾರಿಗೆ ಬರುತ್ತಿದ್ದಾನೆ. ಚೀನಾದ ವುಹಾನ್‌ನಲ್ಲಿ ಇಂತಹ ಅಪರೂಪದ ಕಾಡಿನಲ್ಲಿದ್ದ ಯಾವುದೋ ಪ್ರಾಣಿಯ ಮೂಲದಿಂದ ‘ಕೋವಿಡ್ 19’ ಮನುಷ್ಯರ ಸಂಪರ್ಕಕ್ಕೆ ಬಂದಿದೆ. ಬಹಳ ಚಾಲಾಕಿ ಗುಣದ ‘ಕೋವಿಡ್ 19’ ಬಹುಬೇಗ ಹರಡಿಕೊಂಡು ಬಿಟ್ಟಿದೆ. ಹೆಚ್ಚು ಜನರನ್ನು ಸಾಯಿಸದೆ ಇರುವುದು ಈ ವೈರಸ್ ಚಾಲಾಕಿತನದ ಪರಿಣಾಮವೇ ಎನಿಸುತ್ತದೆ. ಎಲ್ಲಿಯವರೆಗೆ ಆತಿಥ್ಯವನ್ನು ನೀಡುವ ಆತಿಥೇಯ ಇರುತ್ತಾನೋ(ಹೋಸ್ಟ್) ಅಲ್ಲಿಯವರಗೆ ಅತಿಥಿಗೆ ಭಯವಿಲ್ಲ! ನಿರಾತಂಕವಾಗಿ ಆತಿಥ್ಯ ದೊರೆಯುತ್ತಿರುತ್ತದೆ (ವೈರಸ್‌ನ ವಿಷಯದಲ್ಲಿ ಹೊಸ ಹೊಸ ಜೀವ ಕೋಶಗಳ ಲಭ್ಯತೆಯನ್ನು ಆತಿಥ್ಯದ ದೊರೆಯುವಿಕೆ ಎನ್ನಬಹುದು).

ಅಲಾನ ಹೇಳುವುದು ಇಷ್ಟು: ನಾವು ಕಾಡುಗಳನ್ನು ನಾಶ ಮಾಡುತ್ತಾ ಸಾಗಿ, ಇದುವರೆಗೂ ನಮ್ಮ ಸಂಪರ್ಕದಿಂದ ದೂರವೇ ಇದ್ದಂತಹ ಪ್ರಾಣಿಗಳ ಸಂಪರ್ಕಕ್ಕೆ ನೇರವಾಗಿ ಬಂದಿದ್ದೇವೆ. ನಮ್ಮಿಂದ ಇದುವರೆಗೂ ದೂರವೇ ಉಳಿದುಕೊಂಡು ಬಂದಿದ್ದ ನೂರಾರು ರೋಗಾಣುಗಳ ಸಂಪರ್ಕಕ್ಕೆ ಬಂದುಬಿಟ್ಟಿದ್ದೇವೆ. ಜೊತೆಗೆ, ವೈರಸ್‌ನಂತಹ ಜೀವಿಗಳು ಬಹುಬೇಗ ಇತರ ವೈರಸ್‌ಗಳೊಂದಿಗೆ ಬೆರೆತು ಹೊಸ ರೂಪ ಪಡೆಯುವ ಶಕ್ತಿಯನ್ನು ಮತ್ತು ಸಾಮರ್ಥ್ಯವನ್ನು ಹೊಂದಿರುತ್ತವೆ. ಹಾಗಾಗಿ, ಕೋವಿಡ್ 19 ನಮ್ಮ ಭವಿಷ್ಯವೂ ಹೌದು!

ಇವೆಲ್ಲದರ ಜೊತೆಗೆ ನಾವೀಗ(ಮನುಷ್ಯರು) ಏಳು ಬಿಲಿಯನ್ ಆಗಿಬಿಟ್ಟಿದ್ದೇವೆ. ಸೀಮಿತ ಭೂಮಿಯ ಮೇಲೆ, ಬಹಳಷ್ಟು ಕಡೆ ಒತ್ತೊಟ್ಟಿಗೆ ಬದುಕುತ್ತಿದ್ದೇವೆ. ಉದಾಹರಣೆಗೆ ಭಾರತದಲ್ಲಿ ಪ್ರತಿ ಚದರ ಕಿಲೋಮೀಟರ್‌ನಲ್ಲಿ 480 ಜನರಿದ್ದಾರೆ. ಹೀಗಾಗಿ, ಸೋಂಕು ಬಹಳ ಬೇಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮಲೇರಿಯಾ, ಚಿಕುನ್‌ಗುನ್ಯಾದಂತಹ ರೋಗಗಳು ಹರಡಲು ಸೊಳ್ಳೆಗಳಂತಹ ಮಧ್ಯವರ್ತಿಗಳು ಬೇಕು. ಕೊರೋನ ವೈರಸ್‌ಗಳಿಗೆ ಇದ್ಯಾವುದು ಬೇಡ. ನಾವು ಸೀನಿದರೆ ಸಾಕು, ಗಾಳಿಯಲ್ಲಿ ತೇಲಿಕೊಂಡು ಮತ್ತೊಬ್ಬರನ್ನು ಪ್ರವೇಶಿಸುತ್ತವೆ! ಬಹಳ ಸ್ವತಂತ್ರ ಜೀವಿಗಳು ಇವು. ಹಾಗಾಗಿ ಇವುಗಳ ಹಬ್ಬುವಿಕೆಯನ್ನು ತಡೆಯುವುದು ಕಷ್ಟಸಾಧ್ಯ.

ಅಲಾನ ಅವರ ಪ್ರಕಾರ ನಾವೀಗ ನಮ್ಮ ಆರೋಗ್ಯ ಸೇವೆಗಳನ್ನು ನೀಡುವ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬೇಕಿದೆ. ‘ಕೋವಿಡ್ 19’ರ ಸೋಂಕಿಗೆ ಒಳಗಾಗುವ ಶೇ. 10ರಿಂದ 15ರಷ್ಟು ಜನರಿಗೆ ಆಸ್ಪತ್ರೆಗಳಲ್ಲಿ ಒಳರೋಗಿ ಸೇವೆ ಅಗತ್ಯವಿರುತ್ತದೆ. ಒಂದು ಅಂದಾಜಿನ ಪ್ರಕಾರ, ಒಟ್ಟು ಜನಸಂಖ್ಯೆಯ ಶೇ. 60ರಷ್ಟು ಜನರಿಗೆ ‘ಕೋವಿಡ್ 19’ರ ಸೋಂಕು (ಅದರ ತೀವ್ರ ಸ್ಥಿತಿಯಲ್ಲಿ) ತಗಲಲಿದೆ. ಅಂದರೆ, ಭಾರತದಲ್ಲಿ ಸುಮಾರು 70ಕೋಟಿ ಜನರು ಇದರ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಇವರಲ್ಲಿ ಸುಮಾರು ಏಳು ಕೋಟಿ ಜನರಿಗೆ ಒಳರೋಗಿ ಸೌಲಭ್ಯಗಳು ಬೇಕಾಗಬಹುದು. ಅಲಾನ ಅವರ ಪ್ರಕಾರ, ಸಮಸ್ಯೆಯಿರುವುದು ಉಂಟಾಗಬಹುದಾದ ಸಾವಿನ ಪ್ರಮಾಣದಲ್ಲಿ ಅಲ್ಲ(ಇದು ಬಹಳ ಕಡಿಮೆ ಇರುತ್ತದೆ). ಬದಲಿಗೆ ಒಳರೋಗಿ ಚಿಕಿತ್ಸೆಯ ಅಗತ್ಯ ಬೀಳುವ ಜನರನ್ನು ನಿಭಾಯಿಸುವ ಮೂಲಭೂತ ವ್ಯವಸ್ಥೆಯನ್ನು ಸಿದ್ಧವಾಗಿಟ್ಟು ಕೊಳ್ಳುವ ವಿಷಯದಲ್ಲಿ.

ಅಲಾನ ಅವರ ಪ್ರಕಾರ, ಅಮೆರಿಕ ಮತ್ತು ದಕ್ಷಿಣ ಕೊರಿಯದಂತಹ ದೇಶಗಳು ಸಹ ಇದನ್ನು ಸೃಷ್ಟಿಸಿಕೊಳ್ಳಲು ಕಷ್ಟಪಡಲಿವೆ. ಈ ಸಂದರ್ಭದಲ್ಲಿ ಭಾರತದಂತಹ ದೇಶದ ಸಮಸ್ಯೆ ಇನ್ನೂ ವಿಶಿಷ್ಟವಾಗಲಿದೆ. ಮುಂಬೈ, ದಿಲ್ಲಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿರುವ ಸ್ಲಂಗಳು ಸೋಂಕು ಪೀಡಿತರನ್ನು ಪ್ರತ್ಯೇಕವಾಗಿಡುವ (ಕ್ವಾರಂಟೀನ್) ಕಾರ್ಯವನ್ನು ಜಾರಿಗೆ ತರುವುದನ್ನು ಅಸಾಧ್ಯವಾಗಿಸುತ್ತವೆ. ಜನಸಂದಣಿ ಮೊದಲೇ ಹೆಚ್ಚಿರುವ ನಮ್ಮ ದೇಶದಲ್ಲಿ, ಸೋಂಕು ಹರಡುವಿಕೆ ಬಹಳ ವೇಗವಾಗಿ ಸಾಗಿಬಿಡುತ್ತದೆ. ಜೊತೆಗೆ ಸೋಂಕುಪೀಡಿತರನ್ನು ಪ್ರತ್ಯೇಕಗೊಳಿಸುವ ಅವಕಾಶಗಳು ಕೂಡ ಕಡಿಮೆಯೇ. ಹಾಗಾಗಿ, ಇರುವ ಏಕೈಕ ದಾರಿ, ಸೋಂಕಿನ ತೀವ್ರತೆಗೆ ಸಿಲುಕುವ ಜನಸಂಖ್ಯೆಯ ಶೇ. 10-15ರಷ್ಟು ಜನರನ್ನು ಒಳರೋಗಿಗಳಾಗಿ ನಿಭಾಯಿಸುವ ವ್ಯವಸ್ಥೆಗಳನ್ನು ಸ್ಥಾಪಿಸಿಕೊಳ್ಳುವುದು. ಜೊತೆಗೆ, ಸೋಂಕನ್ನು ಬೇಗ ಪತ್ತೆ ಹಚ್ಚುವ ಟೆಸ್ಟ್ ಕಿಟ್‌ಗಳ ಲಭ್ಯತೆಯನ್ನು ಹೆಚ್ಚಿಸಿಕೊಳ್ಳುವುದು. ಹಾಗೆಯೇ, ರೋಗಿಗಳನ್ನು ನಿಭಾಯಿಸಲು ಬೃಹತ್ ಪ್ರಮಾಣದಲ್ಲಿ ಬೇಕಾಗುವ ಪರಿಕರಗಳನ್ನು (ಇಂಜೆಕ್ಷನ್ ಟ್ಯೂಬ್‌ಗಳು, ಮುಖಗವಸುಗಳು ಇತ್ಯಾದಿ) ಅತ್ಯಂತ ಕಡಿಮೆ ಅವಧಿಯಲ್ಲಿ ತಯಾರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು. ಇಡೀ ಜಗತ್ತಿಗೆ ವೈದ್ಯಕೀಯ ಪರಿಕರಗಳನ್ನು ರಫ್ತು ಮಾಡುವ ಚೀನಾ ದೇಶವೇ ಅಗತ್ಯವಿರುವ ವೈದ್ಯಕೀಯ ಪರಿಕರಗಳನ್ನು ಒದಗಿಸಿಕೊಳ್ಳಲು ಹೆಣಗಾಡಿರುವುದನ್ನು ನೆನಪಿಡಬೇಕೆಂದು ಅಲಾನ ಒತ್ತಿ ಹೇಳುತ್ತಾರೆ.

ಇಂಗ್ಲೆಂಡ್‌ನ ಜೀವಶಾಸ್ತ್ರ ಗಣಿತಜ್ಞ ನೀಲ್ ಫರ್ಗುಸನ್ ಅವರ ಅಂದಾಜಿನ ಪ್ರಕಾರ ಕೋವಿಡ್ 19ರ ಸೋಂಕಿನಿಂದ ಸುಮಾರು 5 ಲಕ್ಷ ಸಾವುಗಳು ಇಂಗ್ಲೆಂಡಿನಲ್ಲಿ ಮತ್ತು 22 ಲಕ್ಷ ಸಾವುಗಳು ಅಮೆರಿಕದಲ್ಲೂ ಉಂಟಾಗಬಹುದು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಇಂಗ್ಲೆಂಡ್‌ನ ಸರಕಾರ ಸುಮಾರು 330 ಬಿಲಿಯನ್ ಪೌಂಡ್ ಹಣವನ್ನು ‘ಕೋವಿಡ್ 19’ರ ಪರಿಣಾಮವನ್ನು ಎದುರಿಸಲು ಮೀಸಲಿಟ್ಟಿದೆ. ಇದರಲ್ಲಿ ಸುಮಾರು 30 ಬಿಲಿಯನ್ ಪೌಂಡ್ ನೇರವಾಗಿ ಆರೋಗ್ಯ ಸೇವೆಗಳಿಗೆ ಲಭ್ಯವಿದೆ ಎಂದು ವರದಿಗಳು ಹೇಳಿವೆ.

‘ಕೋವಿಡ್ 19’ರ ರೀತಿಯ ಸೋಂಕುಗಳು ನಮ್ಮ ಭವಿಷ್ಯದಲ್ಲಿ ಸಹಜ ಪ್ರಕ್ರಿಯೆಯಾಗಲಿವೆ ಎನ್ನುವ ಅಲಾನ, ಹೆದರುವ ಮತ್ತು ಹೆದರಿಸುವ ಕ್ರಿಯೆಗಳಿಗೆ ಬಲಿಯಾಗದೆ, ಯೋಜಿತ ತಯಾರಿಯ ಮೂಲಕ ಇಂತಹ ಸೋಂಕುಗಳನ್ನು ನಿಭಾಯಿಸಬೇಕೆನ್ನುವುದನ್ನು ಒತ್ತಿ ಹೇಳುತ್ತಾರೆ. ಹವಾಮಾನ ವೈಪರೀತ್ಯಗಳನ್ನು ತಹಬದಿಗೆ ತರುವ ಮತ್ತು ಕಾಡಿನ ನಾಶವನ್ನು ತಡೆಯುವ ದೂರಗಾಮಿ ಯೋಜನೆಗಳ ಜೊತೆಗೆ, ಮುಂದಿನ ದಿನಗಳಲ್ಲಿ ನಮ್ಮನ್ನು ಕಾಡಲಿರುವ ಸೋಂಕುಗಳನ್ನು ನಿಭಾಯಿಸಲು ಬೇಕಾದ ಆರೋಗ್ಯ ಸೇವೆಗಳ ವ್ಯವಸ್ಥೆಯನ್ನು ರಚಿಸಿಕೊಳ್ಳುವೆಡೆಗೆ ಗಮನ ಕೇಂದ್ರಿತವಾಗಬೇಕೆನ್ನುವುದನ್ನು ಒತ್ತಿ ಹೇಳುತ್ತಾರೆ.

ಅಲಾನ ಅವರ ಮಾತುಗಳಲ್ಲಿ ಸತ್ಯವಿದೆ. ಯಾವ ರೀತಿಯ ಆಹಾರ ಕ್ರಮದಿಂದ ಸೋಂಕುಗಳು ಹರಡುತ್ತವೆ ಎನ್ನುವ ಮಾತುಕತೆಗಳಲ್ಲಿ ಸಮಯ ವ್ಯರ್ಥ ಮಾಡದೇ, ಭೂಮಿಯ ವಾತಾವರಣದಲ್ಲಿ ಉಂಟಾಗಿರುವ ವ್ಯತ್ಯಾಸಗಳಿಂದಾಗಿ ನಮ್ಮ ನಡುವೆ ಇರುವ ಅನೇಕ ರೀತಿಯ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಗಳು ಪ್ರಬಲವಾಗುತ್ತಿರುವ ಸತ್ಯವನ್ನು ಒಪ್ಪಿಕೊಂಡು, ಇವುಗಳನ್ನು ನಿಭಾಯಿಸುವ ವ್ಯವಸ್ಥೆಗಳನ್ನು ಕಟ್ಟಿಕೊಳ್ಳುವುದು ತಕ್ಷಣದ ತುರ್ತಾಗಿರುತ್ತದೆ. ಜೊತೆಗೆ ಸಾರ್ಕ್‌ನಂತಹ ಸಂಸ್ಥೆಗಳ ಮೂಲಕ ನೆರೆಹೊರೆ ದೇಶಗಳೊಂದಿಗೆ ಉತ್ತಮ ಸಂವಹನ ಮತ್ತು ಸಂಪರ್ಕಗಳನ್ನು ಸಾಧಿಸಿಕೊಂಡು ಜನರನ್ನು ರಕ್ಷಿಸಿಕೊಳ್ಳುವ ಯೋಜಿತ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕಾಗಿದೆ. ನಾವೂ ನೀವೂ ನಮ್ಮ ಜನಪ್ರತಿನಿಧಿಗಳ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಗುತ್ತದೆ. ಎಲ್ಲರೂ ಕೈಜೋಡಿಸಿ ನಿಭಾಯಿಸಲೇ ಬೇಕಾದ ಪರಿಸ್ಥಿತಿ ಇದಾಗಿರುತ್ತದೆ.

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News

ಜಗದಗಲ
ಜಗ ದಗಲ