ಕೇರಳದಲ್ಲಿ ಆಡಳಿತ- ವಿರೋಧ ಪಕ್ಷಗಳು ಒಗ್ಗೂಡಿದ್ದೇಕೆ ಗೊತ್ತೇ?

Update: 2020-03-20 03:43 GMT

ತಿರುವನಂತಪುರ, ಮಾ.20: ಕೇರಳ ರಾಜಕೀಯ ಇತಿಹಾಸದಲ್ಲಿ ಅತಿ ವಿರಳ ಎಂಬಂತೆ ಆಡಳಿತಾರೂಢ ಎಲ್‌ಡಿಎಫ್ ಹಾಗೂ ಪ್ರಮುಖ ವಿರೋಧಿ ಕೂಟವಾದ ಯುಡಿಎಫ್, ಕೊರೋನ ವಿರುದ್ಧ ಹೋರಾಡಲು ಒಗ್ಗಟ್ಟು ಪ್ರದರ್ಶಿಸಿವೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಒಗ್ಗಟ್ಟಿನ ಮಂತ್ರ ಪಠಿಸಿದರು.

ಸ್ಥಳೀಯ ಸ್ವ- ಸರ್ಕಾರ ಖಾತೆ ಸಚಿವ ಸಿ.ಎ.ಮೊಯ್ದಿನ್ ಜತೆ ಸೇರಿ ಉಭಯ ಗಣ್ಯರು, ಶಿಕ್ಷಣ ಇಲಾಖೆಯ ವಿಕ್ಟ್ರೆಸ್ ವಾಹನಿಯ ಮೂಲಕ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕೊರೋನ ಜಾಗೃತಿಯಲ್ಲಿ ಮತ್ತು ಶಂಕಿತರ ಮೇಲೆ ಕಣ್ಗಾವಲು ಇಡುವಲ್ಲಿ ಸ್ಥಳೀಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲಿವೆ. ಕೇರಳದಲ್ಲಿ ಸುಮಾರು 26 ಸಾವಿರ ಮಂದಿಯ ಆರೋಗ್ಯಸ್ಥಿತಿ ಮೇಲೆ ನಿಗಾ ವಹಿಸಲಾಗಿದ್ದು, ಅವರಿಗೆ ಮನೆಗಳಲ್ಲೇ ದಿಗ್ಬಂಧನ ವಿಧಿಸಲಾಗಿದೆ. ಕೊರೋನ ಸಾಂಕ್ರಾಮಿಕ ಸಾಮಾನ್ಯ ಜನಜೀವನಕ್ಕೆ ಧಕ್ಕೆಯಾಗದಂತೆ ರೋಗ ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿಜಯನ್ ಸ್ಪಷ್ಟಪಡಿಸಿದರು. 

ಇದಕ್ಕೆ ಸ್ಥಳೀಯ ಸಂಸ್ಥೆಗಳ ಸಹಕಾರ ಅತ್ಯಗತ್ಯ. ಮನೆಗಳಲ್ಲೇ ಪ್ರತ್ಯೇಕವಾಗಿ ಇರುವ ಶಂಕಿತರಿಗೆ ಆಹಾರ ಮತ್ತು ಔಷಧಿಯನ್ನು ಒದಗಿಸುವಲ್ಲಿ ಯಾವುದೇ ತೊಂದರೆ ಆಗಬಾರದು. ಅವರ ರಕ್ಷಣೆ ನಮ್ಮ ಕಳಕಳಿ ಎಂದು ಹೇಳಿದರು.

ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಆರೆ ಇಡೀ ರಾಜ್ಯ 350 ಮಂದಿ ಶಂಕಿತರ ಫಲಿತಾಂಶದ ನಿರೀಕ್ಷೆಯಲ್ಲಿದೆ. ಈ ಮಧ್ಯೆ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆದಿದೆ ಎಂದರು.

ಬುಡಕಟ್ಟು ಗ್ರಾಮಗಳಲ್ಲಿ ವಿಶೇಷ ಎಚ್ಚರಿಕೆ ವಹಿಸುವ ಅಗತ್ಯವಿದೆ. ಆಶಾ ಕಾರ್ಯಕರ್ತರು, ಆರೋಗ್ಯ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಆರೋಗ್ಯ ಇಲಾಖೆ ಸೂಚನೆಯಂತೆ ಶ್ರಮಿಸಬೇಕಿದೆ. ಸರ್ಕಾರದ ನಿರ್ದೇಶನವನ್ನು ರಾಜಕೀಯ ಪಕ್ಷಗಳು ಕೂಡಾ ಕಟ್ಟುನಿಟ್ಟಾಗಿ ಪಾಲಿಸಿ, ಸಾರ್ವಜನಿಕ ಸಭೆ ಸಮಾರಂಭ ನಡೆಸಬಾರದು. ಈ ಮೂಲಕ ಸಮುದಾಯಕ್ಕೆ ಸಾಂಕ್ರಾಮಿಕ ಹರಡುವುದು ತಡೆಯಬಹುದು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಗ್ಗೂಡಿ ಹೋರಾಡೋಣ ಎಂದು ಚೆನ್ನಿತ್ತಲ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News