ಕೊರೋನಾವೈರಸ್: ಪ್ರವಾಸೋದ್ಯಮ ಕ್ಷೇತ್ರದಲ್ಲಿ 3.8 ಕೋಟಿ ಉದ್ಯೋಗ ನಷ್ಟದ ಭೀತಿ
ಹೊಸದಿಲ್ಲಿ: ಕೊರೋನಾವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶದ ವಿವಿಧೆಡೆ ಪ್ರಯಾಣ ನಿರ್ಬಂಧಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ 5 ಶತಕೋಟಿ ರೂ. ಡಾಲರ್ ನಷ್ಟ ಅನುಭವಿಸುವುದರ ಹೊರತಾಗಿ 3.8 ಕೋಟಿ ಜನರು (ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೇರ ಹಾಗೂ ಪರೋಕ್ಷವಾಗಿ ಕೆಲಸದಲ್ಲಿರುವ ಶೇ 70ರಷ್ಟು ಮಂದಿ) ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿಯಿದೆ ಎಂದು ಇಂಡಿಯನ್ ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ ಸಂಘಟನೆಗಳ ಫೆಡರೇಶನ್ ಹೇಳಿದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮಧ್ಯಪ್ರವೇಶಿಸಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉಂಟಾಗಿರುವ ತೊಂದರೆಯನ್ನು ಕಡಿಮೆಗೊಳಿಸಬೇಕೆಂದೂ ಫೆಡರೇಶನ್ ಪ್ರಧಾನಿಗೆ ಪತ್ರ ಬರೆದಿದೆ.
ಕೊರೋನಾವೈರಸ್ ನಿಂದಾಗಿ ದೇಶದ ಪ್ರವಾಸೋದ್ಯಮ ಕ್ಷೇತ್ರ ವಸ್ತುಶಃ ಸ್ಥಗಿತಗೊಂಡಿರುವುದರಿಂದ ಇದು ದೇಶದ ಅರ್ಥವ್ಯವಸ್ಥೆಗೆ 10 ಶತಕೋಟಿ ರೂ. ನಷ್ಟ ಉಂಟು ಮಾಡಲಿದೆಯೆಂದೂ ಸಂಘಟನೆ ಹೇಳಿದೆ.
ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳ ಸಾಲ ಪಾವತಿಗೆ 12 ತಿಂಗಳ ವಿನಾಯಿತಿ ನೀಡಬೇಕು, ಎಲ್ಲಾ ಬಾಕಿ ಪಾವತಿ ಅವಧಿ ಹಾಗೂ ಜಿಎಸ್‍ಟಿ ಪಾವತಿಯನ್ನು ಮುಂದೂಡಬೇಕು ಎಂದು ಫೆಡರೇಶನ್ ಆಗ್ರಹಿಸಿದೆ. ರಾಜ್ಯ ಸರಕಾರಗಳು ವಿಧಿಸುವ ತೆರಿಗೆಗಳು, ನೀರಿನ, ವಿದ್ಯುತ್ ದರಗಳ ಪಾವತಿ ದಿನಾಂಕವನ್ನೂ ಮುಂದೂಡಬೇಕೆಂದು ಅದು ಮನವಿ ಮಾಡಿದೆ.