ಒಲಿಂಪಿಕ್ಸ್ ಕ್ರೀಡಾಜ್ಯೋತಿ ಯನ್ನು ಸ್ವಾಗತಿಸಿದ ಜಪಾನ್

Update: 2020-03-20 16:56 GMT

ಟೋಕಿಯೊ, ಮಾ.20: ಒಲಿಂಪಿಕ್ಸ್ ಕ್ರೀಡಾಜ್ಯೋತಿ ಶುಕ್ರವಾರ ಜಪಾನ್‌ಗೆ ಆಗಮಿಸಿದ್ದು, ಕೊರೋನ ವೈರಸ್ ಭೀತಿಯಿಂದಾಗಿ ಹೆಚ್ಚು ಸಂಭ್ರಮ ಕಂಡುಬರಲಿಲ್ಲ. ಕೊರೋನ ವೈರಸ್ ಗೇಮ್ಸ್ ಆಯೋಜನೆಗೂ ಧಕ್ಕೆ ಯನ್ನುಂಟು ಮಾಡಿದೆ. ಮಿಯಾಗಿ ಪ್ರಾಂತ್ಯದ ಮಟ್ಸುಶಿಮಾ ವಾಯುನೆಲೆಯಲ್ಲಿ ವಿಶೇಷ ಚಾರ್ಟರ್ ವಿಮಾನದಲ್ಲಿ ಕ್ರೀಡಾಜ್ಯೋತಿಯನ್ನು ತರಲಾಯಿತು. ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದ ಜಪಾನ್‌ನ ತಡಹಿರೊ ನೊಮುರ ಹಾಗೂ ಸಯೊರಿ ಯೊಶಿಡಾವೆರೆ ಮಟ್ಸುಶಿಮಾ ವಾಯುನೆಲೆಯಲ್ಲಿ ಬಂದಿಳಿದ ವಿಮಾನದಿಂದ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು. ಬಳಿಕ ಇದನ್ನು ಆಯ್ದ ಅತಿಥಿಗಳಿದ್ದ ವೇದಿಕೆಯ ಮುಂದೆ ಇರಿಸಿದರು.

ಕ್ರೀಡಾಜ್ಯೋತಿಯನ್ನು ಸ್ವಾಗತಿಸಲು ಸಜ್ಜಾ ಗಿದ್ದ ಸುಮಾರು 200 ಸ್ಥಳೀಯ ಮಕ್ಕಳನ್ನು ಆಯೋಜಕರು ಕೊರೋನ ವೈರಸ್ ಭೀತಿಯಿಂದಾಗಿ ಕಾರ್ಯಕ್ರಮದಿಂದ ದೂರ ಇಟ್ಟಿದ್ದರು.

‘‘ಮಕ್ಕಳು ಒಲಿಂಪಿಕ್ಸ್ ಜ್ಯೋತಿಯನ್ನು ಸ್ವಾಗತಿಸಲು ಯೋಜಿಸಿದ್ದರು. ಆದರೆ, ನಾವು ಇದಕ್ಕೆ ಅವಕಾಶ ನೀಡಲಿಲ್ಲ. ಅವರ ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ’’ ಎಂದು ಮುಖ್ಯ ಸಂಘಟಕ ಯೊಶಿಯೊ ಮೊರಿ ಹೇಳಿದ್ದಾರೆ.

‘‘ಒಲಿಂಪಿಕ್ಸ್‌ಗಿಂತ ಮೊದಲು ಒಲಿಂಪಿಕ್ಸ್ ಜ್ಯೋತಿ ರಿಲೇ ಅತ್ಯಂತ ಪ್ರಮುಖ ಕಾರ್ಯ ಕ್ರಮವಾಗಿದ್ದು, ಯಾವ ಬೆಲೆ ತೆತ್ತಾದರೂ ಇದನ್ನು ಕೊಂಡೊಯ್ಯುವುದು ನಮಗೆ ಅತ್ಯಂತ ಮುಖ್ಯವಾಗಿದೆ’’ ಎಂದು ಟೋಕಿಯೋ ಗೇಮ್ಸ್ ಸಿಇಒ ಟೊಶಿರೊ ಮುಟೊ ಹೇಳಿದ್ದಾರೆ.

ಪ್ರೇಕ್ಷಕರಿಗೆ ರಸ್ತೆಬದಿಯಲ್ಲಿ ನಿಂತು ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಹೆಚ್ಚು ಜನ ಸೇರದಂತೆ ಕ್ರೀಡಾಭಿಮಾನಿಗಳಿಗೆ ಸೂಚಿಸಲಾಗಿದೆ. ಅತಿಯಾದ ದಟ್ಟಣೆಯ ಕಾರಣಕ್ಕೆ ಕಾರ್ಯಕ್ರಮದಲ್ಲಿ ಬದಲಾವಣೆಯಾಗಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರತಿದಿನದ ರಿಲೇ ಆಗಮನ ಹಾಗೂ ನಿರ್ಗಮನದ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ರಿಲೇಯಲ್ಲಿ ಭಾಗವಹಿಸುವವರನ್ನು ಪರೀಕ್ಷಿಸಲಾಗುವುದು. ಕ್ರೀಡಾಜ್ಯೋತಿ ಟೋಕಿಯೊಗೆ ಪ್ರವೇಶಿಸುವ ಮೊದಲು 121 ದಿನಗಳ ಪ್ರಯಾಣದಲ್ಲಿ ದೇಶಾದ್ಯಂತ ಪ್ರತಿ ಪ್ರದೇಶಕ್ಕೆ ಸಂಚರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News