ಕನಿಕಾ ಕಪೂರ್ ವಿರುದ್ಧದ ಎಫ್‌ಐಆರ್‌ನಲ್ಲಿ ದಿನಾಂಕದ ಬಗ್ಗೆ ಗೊಂದಲ

Update: 2020-03-21 19:16 GMT

ಲಕ್ನೊ, ಮಾ.21: ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಗಾಯಕಿ ಕನಿಕಾ ಕಪೂರ್ ವಿರುದ್ಧ ಲಕ್ನೊದ ಮುಖ್ಯ ವೈದ್ಯಾಧಿಕಾರಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕನಿಕಾ ಕಪೂರ್ ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ ಎಫ್‌ಐಆರ್‌ನಲ್ಲಿ ನಮೂದಿಸಿರುವ ದಿನಾಂಕ ಗೊಂದಲಕ್ಕೆ ಕಾರಣವಾಗಿದೆ. ಐಪಿಸಿ ಸೆಕ್ಷನ್ 188, 269 ಮತ್ತು 270ರಡಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ - ಕನಿಕಾರನ್ನು ಲಕ್ನೊ ವಿಮಾನ ನಿಲ್ದಾಣದಲ್ಲಿ ಮಾರ್ಚ್ 14ರಂದು ಸ್ಕ್ರೀನಿಂಗ್ ನಡೆಸಿದಾಗ ವೈರಲ್ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ , ಪರೀಕ್ಷೆಯ ವರದಿ ಬರುವವರೆಗೆ ಪ್ರತ್ಯೇಕವಾಗಿ ಇರಬೇಕು ಎಂಬ ಸಲಹೆಯನ್ನು ಪಾಲಿಸದೆ ಅವರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅವರಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಸಲಹೆ ನೀಡಲಾಗಿತ್ತು. ಆದರೆ ಅವರು ಈ ಸಲಹೆಯನ್ನು ನಿರ್ಲಕ್ಷಿಸಿದ್ದರು ಎಂದು ಉಲ್ಲೇಖಿಸಲಾಗಿದೆ.

 ಆದರೆ ತಾನು ಲಕ್ನೊ ವಿಮಾನ ನಿಲ್ದಾಣಕ್ಕೆ ಮಾರ್ಚ್ 11ರಂದು ಆಗಮಿಸಿದ್ದೇನೆ ಎಂದು ಕನಿಕಾ ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಯಾವುದೇ ಸಮಸ್ಯೆ ಪತ್ತೆಯಾಗಿರಲಿಲ್ಲ. ಆದ್ದರಿಂದ ತನಗೆ ಕೊರೊನ ವೈರಸ್ ಸೋಂಕು ತಗುಲಿರುವುದು ಗೊತ್ತೇ ಇರಲಿಲ್ಲ ಎಂದವರು ಹೇಳಿದ್ದಾರೆ.

 ಮುಖ್ಯ ವೈದ್ಯಾಧಿಕಾರಿಯ ವರದಿಯಲ್ಲಿ , ಕನಿಕಾ ಆಗಮನದ ದಿನವನ್ನು ಪ್ರಮಾದವಶಾತ್ ಮಾರ್ಚ್ 14 ಎಂದು ಬರೆದಿದ್ದು ಇದನ್ನೇ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ವಾಸ್ತವಿಕ ಭಾಗವನ್ನು ತನಿಖೆಯ ಸಂದರ್ಭ ಪೊಲೀಸರು ಸರಿಪಡಿಸಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುಜಿತ್ ಪಾಂಡೆ ಹೇಳಿದ್ದಾರೆ.

 ಲಕ್ನೊ ವಿಮಾನನಿಲ್ದಾಣದಲ್ಲಿ ತಪಾಸಣೆಯ ಸಂದರ್ಭದಲ್ಲಿ ಲೋಪ ಆಗಿರುವುದನ್ನು ಉತ್ತರಪ್ರದೇಶದ ಆರೋಗ್ಯ ಸಚಿವ ಜೈಪ್ರತಾಪ್ ಸಿಂಗ್ ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳಿಂದ ಅಚಾತುರ್ಯವಾಗಿದೆ. ತಪಾಸಣೆಗೆ ಒಳಗಾಗದೆ ಕನಿಕಾ ಕಪೂರ್ ವಿಮಾನ ನಿಲ್ದಾಣದಿಂದ ಹೊರಹೋಗಿದ್ದು ಹೇಗೆ ಎಂಬ ಬಗ್ಗೆ ವಿವರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದವರು ಹೇಳಿದ್ದಾರೆ. ಮಾರ್ಚ್ 14ರಂದು ನಡೆದಿದ್ದ ಹುಟ್ಟುಹಬ್ಬದ ಆಚರಣೆಯಲ್ಲಿ ತಾನು ಕೂಡಾ ಪಾಲ್ಗೊಂಡಿರುವುದರಿಂದ ಸ್ವಯಂ ಪ್ರತ್ಯೇಕತೆಯ ವ್ಯವಸ್ಥೆಯಲ್ಲಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಕೊರೊನ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡಿರುವುದರಿಂದ ಈಗ ಪ್ರತ್ಯೇಕ ವಾಸದ ವ್ಯವಸ್ಥೆಗೆ ಒಳಪಟ್ಟಿದ್ದೇನೆ ಎಂದು ಮಾರ್ಚ್ 20ರಂದು ಕನಿಕಾ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಈಕೆ ಇತ್ತೀಚೆಗೆ ಲಕ್ನೊದಲ್ಲಿ ನಡೆದಿದ್ದ ಖಾಸಗಿ ಔತಣಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ರಾಜಸ್ತಾನದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೆ, ಅವರ ಪುತ್ರ ದುಷ್ಯಂತ ಸಿಂಗ್, ಉತ್ತರಪ್ರದೇಶದ ಸಚಿವ ಜೈಪ್ರತಾಪ್ ಸಿಂಗ್ ಸಹಿತ ಹಲವು ರಾಜಕೀಯ ಮುಖಂಡರೂ ಈ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಬಳಿಕ ದುಷ್ಯಂತ್ ಸಿಂಗ್ ದಿಲ್ಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನೂ ಭೇಟಿಯಾಗಿದ್ದರು.

 ಈ ಮಧ್ಯೆ, ಕನಿಕಾ ಕಪೂರ್ ಮಾರ್ಚ್ 11ರಿಂದ ಮುಂದಿನ 1 ವಾರದ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ಪಾಲ್ಗೊಂಡಿದ್ದ ಹಲವು ಕಾರ್ಯಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಉತ್ತರಪ್ರದೇಶ ಸರಕಾರ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News