ಕೊರೋನಾ: ಇಟಲಿಯಲ್ಲಿ ಒಂದೇ ದಿನ 793 ಮಂದಿ ಸಾವು

Update: 2020-03-22 06:13 GMT

ರೋಮ್, ಮಾ.22: ಇಟಲಿಯಲ್ಲಿ ಕೊರೋನ ಮರಣ ಮೃದಂಗ ಮುಂದುವರಿದಿದ್ದು, ಒಂದೇ ದಿನ 793 ಸಾವಿನ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಈ ಮಾರಕ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 4,825ಕ್ಕೆ ಹೆಚ್ಚಿದ್ದು, ವಿಶ್ವದಲ್ಲಿ ಕೋವಿಡ್-19ನಿಂದ ಮೃತಪಟ್ಟ ಒಟ್ಟು ಮಂದಿಯ ಪೈಕಿ ಶೇ.38.3ರಷ್ಟು ಇಟಲಿಯಲ್ಲೇ ಮೃತಪಟ್ಟಿದ್ದಾರೆ. ದೇಶದಲ್ಲಿ ಕೋವಿಡ್-19 ಸೋಂಕಿಗೀಡಾದವರ ಸಂಖ್ಯೆ 6,557ರಷ್ಟು ಹೆಚ್ಚಿದೆ. ಇದರಿಂದಾಗಿ ಒಟ್ಟು 53,578 ಮಂದಿಗೆ ಸೋಂಕು ತಗುಲಿದಂತಾಗಿದೆ.

ಮಿಲನ್ ಪಟ್ಟಣದ ಸುತ್ತಮುತ್ತ ಉತ್ತರ ಲ್ಯಾಂಬಾರ್ಡ್ ಪ್ರದೇಶದಲ್ಲೇ 3000ಕ್ಕೂ ಹೆಚ್ಚು ಮಂದಿ ಮೃತಪಟ್ಟಂತಾಗಿದೆ. ಶುಕ್ರವಾರದಿಂದೀಚೆಗೆ ದೇಶದಲ್ಲಿ 1,420 ಮಂದಿ ಮೃತಪಟ್ಟಿದ್ದಾರೆ. ಸರ್ಕಾರದ ನಿರ್ಬಂಧ ಮತ್ತಿತರ ಕ್ರಮಗಳ ಹೊರತಾಗಿಯೂ ಸಾವಿನ ಸರಣಿ ಮುಂದುವರಿದಿದೆ.

60 ದಶಲಕ್ಷ ಮಂದಿಯನ್ನು ಹೊಂದಿರುವ ಈ ಮೆಡಿಟರೇನಿಯನ್ ದೇಶದಲ್ಲಿ ಮಾರ್ಚ್ 12ರಿಂದಲೂ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಸಾರ್ವಜನಿಕ ಸಭೆ ಸಮಾರಂಭ ನಿಷೇಧಿಸಲಾಗಿದೆ. ಅನಗತ್ಯವಾಗಿ ಹೊರಗೆ ಓಡಾಡುತ್ತಿರುವವರನ್ನು ಹಿಡಿದು ಭಾರಿ ಮೊತ್ತದ ದಂಡ ವಿಧಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News