‘ಕೊರೊನಾ ವೈರಸ್ 2ನೆ ಮಹಾಯುದ್ಧಕ್ಕಿಂತ ಭೀಕರ’: ಜಾಗತಿಕ ಉದ್ಯಮಕ್ಕೆ ಭಾರೀ ಹೊಡೆತ
ಹೊಸದಿಲ್ಲಿ,ಮಾ.22: ಜಗತ್ತಿನೆಲ್ಲೆಡೆ ತಾಂಡವವಾಡುತ್ತಿರುವ ಕೊರೋನವೈರಸ್ ಪಿಡುಗು ಆರ್ಥಿಕತೆಗೆ ಭಾರೀ ಹಿನ್ನಡೆಯುಂಟು ಮಾಡಿದೆ. ಎಲ್ಲ ಕ್ಷೇತ್ರಗಳಂತೆ ಪ್ರವಾಸೋದ್ಯಮ ಕ್ಷೇತ್ರಕ್ಕೂ ಭಾರೀ ಹೊಡೆತ ಬಿದ್ದಿದೆ. ಕೊರೋನವೈರಸ್ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವದ ಹಲವೆಡೆ ಸರಣಿ ಐಷಾರಾಮಿ ಹೋಟೆಲ್‌ಗಳನ್ನು ಹೊಂದಿರುವ ಮ್ಯಾರಿಯಟ್ ಇಂಟರ್‌ನ್ಯಾಷನಲ್‌ನ ಸಿಇಒ ಅರ್ನ್ ಸೊರೆನ್ಸನ್ ಅವರು ಕೊರೋನವೈರಸ್ ಪಿಡುಗು ಹೋಟೆಲ್ ಉದ್ಯಮದ ಮೇಲೆ ‘ಗ್ರೇಟ್ ಡಿಪ್ರೆಷನ್’ ಮತ್ತು ದ್ವಿತೀಯ ವಿಶ್ವಯುದ್ಧಕ್ಕಿಂತ ತೀವ್ರ ಪರಿಣಾಮಗಳನ್ನು ಬೀರಿದೆ ಎಂದು ಹೇಳಿದ್ದಾರೆ.
1929-33ರ ಅವಧಿಯಲ್ಲಿ ವಿಶ್ವವು ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತಕ್ಕೆ ಗುರಿಯಾಗಿದ್ದು,ಇದು ‘ಗ್ರೇಟ್ ಡಿಪ್ರೆಷನ್’ಎಂದೇ ಹೆಸರಾಗಿದೆ.
ಕಂಪನಿಯ ಉದ್ಯೋಗಿಗಳಿಗೆ ರವಾನಿಸಿರುವ ಭಾವನಾತ್ಮಕ ವೀಡಿಯೊ ಸಂದೇಶದಲ್ಲಿ ಸೊರೆನ್ಸನ್,‘ಆದಾಯದಲ್ಲಿ ಶೇ.25ರಷ್ಟು ಕುಸಿತವಾಗಿರುವ ಪ್ರಸಕ್ತ ಹಣಕಾಸು ಸ್ಥಿತಿಯು ಕಂಪನಿಯ ಅತ್ಯಂತ ಕೆಟ್ಟ ತ್ರೈಮಾಸಿಕಕ್ಕಿಂತ ಹೆಚ್ಚು ಕೆಟ್ಟದ್ದಾಗಿದೆ. ನಮ್ಮ ಉದ್ಯಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೋವಿಡ್-19ರಂತಹ ಅಪಾಯವನ್ನು ನಾವು ಹಿಂದೆಂದೂ ಕಂಡಿರಲಿಲ್ಲ ’ಎಂದಿದ್ದಾರೆ.
ಜಗತ್ತಿನ ವಿವಿಧ ದೇಶಗಳಲ್ಲಿ ಹರಡಿಕೊಂಡಿರುವ ಮ್ಯಾರಿಯಟ್ ಹೋಟೆಲ್‌ಗಳಲ್ಲಿ ವ್ಯವಹಾರ ಮಾಮೂಲು ಪ್ರಮಾಣದ ಶೇ.75ಕ್ಕೆ ಕುಸಿದಿದೆ ಎಂದಿದ್ದಾರೆ.
ಕಂಪನಿಯು ಸಾವಿರಾರು ಉದ್ಯೋಗಿಗಳನ್ನು ರಜೆಯಲ್ಲಿ ಕಳುಹಿಸಿದೆ,ಎಲ್ಲ ಅನಗತ್ಯ ಪ್ರಯಾಣಗಳು ಮತ್ತು ನೇಮಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದಿರುವ ಸೊರೆನ್ಸನ್,ಈ ವರ್ಷದ ಉಳಿದ ಅವಧಿಗೆ ತಾನು ವೇತನವನ್ನು ಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಕಂಪನಿಯ ಕಾರ್ಯಾಧ್ಯಕ್ಷ ಬಿಲ್ ಮ್ಯಾರಿಯಟ್ ಜ್ಯೂನಿಯರ್ ಅವರೂ ವೇತನವನ್ನು ಪಡೆಯುವುದಿಲ್ಲ ಎಂದು ಈ ಮೊದಲೇ ಘೋಷಿಸಿದ್ದು,ಹಿರಿಯ ಅಧಿಕಾರಿಗಳು ಶೇ.50ರಷ್ಟು ವೇತನಗಳನ್ನು ಮಾತ್ರ ಪಡೆಯಲಿದ್ದಾರೆ.
ಭಾರತದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಸಿಬ್ಬಂದಿಗಳಿಗೆ ಶೇ.25ರಷ್ಟು ವೇತನ ಕಡಿತಗೊಳಿಸುವುದಾಗಿ ಶನಿವಾರ ಪ್ರಕಟಿಸಿತ್ತು. ಬ್ರಿಟಿಷ್ ಏರ್‌ವೇಸ್‌ನ ಪೈಲಟ್‌ಗಳು ಎಪ್ರಿಲ್ ಮತ್ತು ಮೇ ತಿಂಗಳುಗಳಿಗೆ ತಮ್ಮ ಮೂಲವೇತನದ ಶೇ.50ರಷ್ಟನ್ನು ಮಾತ್ರ ಪಡೆಯಲಿದ್ದಾರೆ. ಲಾಕ್‌ಡೌನ್‌ಗಳು ಮತ್ತು ಪ್ರವಾಸಿ ವೀಸಾಗಳ ಅಮಾನತಿನಿಂದಾಗಿ ವಿಮಾನಯಾನಗಳು ಹೆಚ್ಚುಕಡಿಮೆ ಸ್ಥಗಿತಗೊಂಡಿರುವ ಹಿನ್ನೆೆಲೆಯಲ್ಲಿ ವಾಯುಯಾನ ಕ್ಷೇತ್ರದ ಹಲವಾರು ಹಿರಿಯ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ತಮ್ಮ ವೇತನದಲ್ಲಿ ಕಡಿತಗಳಿಗೆ ಒಪ್ಪಿಕೊಂಡಿದ್ದಾರೆ.