ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ನನ್ನ ರೆಸಾರ್ಟ್‌ಗಳನ್ನು ನೀಡುತ್ತೇನೆ: ಆನಂದ್ ಮಹೀಂದ್ರ

Update: 2020-03-22 17:49 GMT

ಹೊಸದಿಲ್ಲಿ, ಮಾ.22: ಕೊರೋನವೈರಸ್ ಪೀಡಿತರಿಗಾಗಿ ತಾತ್ಕಾಲಿಕ ಆಸ್ಪತ್ರೆಗಳು ಮತ್ತು ವೆಂಟಿಲೇಟರ್‌ಗಳಿಗಾಗಿ ನಿಧಿಯೊಂದನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿರುವ ಖ್ಯಾತ ಕೈಗಾರಿಕೋದ್ಯಮಿ ಆನಂದ ಮಹೀಂದ್ರ ಅವರು,ತನ್ನ ಪೂರ್ಣ ವೇತನವನ್ನು ನಿಧಿಗೆ ದೇಣಿಗೆಯಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ. ಮುಂದೆ ಇನ್ನಷ್ಟು ದೇಣಿಗೆಯನ್ನು ಸಲ್ಲಿಸುವ ಭರವಸೆಯನ್ನು ನೀಡಿರುವ ಅವರು,ಸ್ವಯಂಪ್ರೇರಿತರಾಗಿ ನಿಧಿಗೆ ದೇಣಿಗೆಗಳನ್ನು ಸಲ್ಲಿಸುವಂತೆ ಇತರ ಉದ್ಯಮಿಗಳನ್ನು ಉತ್ತೇಜಿಸಿದ್ದಾರೆ.

ತನ್ನ ಕಂಪನಿಗೆ ಸೇರಿದ ರೆಸಾರ್ಟ್‌ಗಳನ್ನು ಸೋಂಕುಪೀಡಿತರಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಬಹುದು ಎಂಬ ಕೊಡುಗೆಯನ್ನೂ ಅವರು ಸರಕಾರದ ಮುಂದಿಟ್ಟಿದ್ದಾರೆ. ತಾತ್ಕಾಲಿಕ ಆಸ್ಪತ್ರೆಗಳ ಸ್ಥಾಪನೆಗೆ ಸರಕಾರಕ್ಕೆ ಅಥವಾ ಸೇನೆಗೆ ನೆರವಾಗಲು ತನ್ನ ಯೋಜನಾ ತಂಡವು ಸಂಪೂರ್ಣ ಸನ್ನದ್ಧವಾಗಿದೆ ಎಂದೂ ರವಿವಾರ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಭಾರತವು ಈಗಾಗಲೇ ಕೊರೋನವೈರಸ್ ಹರಡುವಿಕೆಯ ಮೂರನೇ ಹಂತದಲ್ಲಿದೆ ಎಂಬ ಭೀತಿಯನ್ನು ವ್ಯಕ್ತಪಡಿಸಿರುವ ಅವರು,ಇದು ಸೋಂಕು ಪ್ರಕರಣಗಳಲ್ಲಿ ತೀವ್ರ ಏರಿಕೆಯನ್ನು ಮಾಡಬಹುದು ಮತ್ತು ವೈದ್ಯಕೀಯ ಮೂಲಸೌಕರ್ಯದ ಮೇಲೆ ಭಾರೀ ಒತ್ತಡವನ್ನು ಹೇರಬಹುದು ಎಂದಿದ್ದಾರೆ.

 ಮಹೀಂದ್ರ ಗ್ರೂಪ್ ವೆಂಟಿಲೇಟರ್‌ಗಳನ್ನು ತಯಾರಿಸುವ ಬಗ್ಗೆ ತಕ್ಷಣವೇ ಪರಿಶೀಲಿಸಲಿದೆ ಎಂದಿರುವ ಮುಂದಿನ ಕೆಲವು ವಾರಗಳವರೆಗೆ ಲಾಕ್‌ಡೌನ್ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News