ಕೊರೋನ: ಭಯ ಬೇಡ, ಎಚ್ಚರವಿರಲಿ

Update: 2020-03-22 18:21 GMT

ಮನುಷ್ಯ ಶತ ಶತಮಾನಗಳ ಕಾಲ ಪ್ರಕೃತಿಯೊಂದಿಗೆ ನಿರಂತರ ಸಂಘರ್ಷ ನಡೆಸುತ್ತಲೇ ತನ್ನ ಬದುಕನ್ನು ಕಟ್ಟಿಕೊಂಡಿದ್ದಾನೆ. ನಿಸರ್ಗದೊಂದಿಗೆ ನಡೆಸುತ್ತ ಬಂದ ಈ ಸಂಘರ್ಷದಲ್ಲಿ ಅನೇಕ ಬಾರಿ ಸೋತಿದ್ದಾನೆ. ಕೆಲ ಬಾರಿ ಸೋತು ಗೆದ್ದಿದ್ದಾನೆ. ಈ ಸೋಲು, ಗೆಲುವಿನ ಸಮರದಲ್ಲಿ ಸಹ ಜೀವಿಗಳನ್ನು ಕಳೆದುಕೊಂಡಿದ್ದಾನೆ. ಕಳೆದುಕೊಂಡ ಬದಲಿಗೆ ಹೊಸದನ್ನು ಪಡೆದಿದ್ದಾನೆ. ಈಗ ಇಲ್ಲಿಗೆ ಬಂದು ನಿಂತಿದ್ದಾನೆ.

ಕಾಡು ಮೇಡುಗಳನ್ನು ಕಡಿದು, ಗುಡ್ಡ ಬೆಟ್ಟಗಳನ್ನು ಅಗೆದು ತೆಗೆದು ಈ ಭೂಮಿಯಲ್ಲಿ ತನ್ನದೇ ಲೋಕವನ್ನು ಕಟ್ಟಿಕೊಂಡಿದ್ದಾನೆ. ಪಶು, ಪಕ್ಷಿಗಳ ಜಾಗವನ್ನೂ ಆಕ್ರಮಿಸಿಕೊಂಡಿದ್ದಾನೆ. ನಿಸರ್ಗದ ಎದುರು ಗೆದ್ದರೂ ತನ್ನಲ್ಲೆ ವರ್ಗ, ಜಾತಿ,ಬಣ್ಣಗಳ ಭೇದ ಮಾಡಿಕೊಂಡು ಪರಸ್ಪರ ಹೊಡೆದಾಡಿ ಸಾಯುತ್ತ ಬಂದಿದ್ದಾನೆ. ಸಾವಿರಾರು ವರ್ಷಗಳ ಈ ಸಂಘರ್ಷದಲ್ಲಿ ಮನುಷ್ಯ ಮುನ್ನಡೆ ಸಾಧಿಸಿದರೂ ಅತ ಇನ್ನೂ ಸಂಪೂರ್ಣ ಜಯಶಾಲಿಯಾಗಿಲ್ಲ.ಕೆಲ ಬಾರಿ ಸೃಷ್ಟಿಯ ಎದುರು ಗೆದ್ದಿರಬಹುದು. ಸೋತಿರಬಹುದು ಆದರೆ ಸೃಷ್ಟಿಯ ಜೊತೆ ಸಹಬಾಳ್ವೆಯನ್ನು ಮಾಡುವುದನ್ನು ಮನುಷ್ಯ ಕಲಿಯಲೇ ಇಲ್ಲ. ಸಹಜೀವಿಗಳ ಜೊತೆ ಸಹನೆಯಿಂದ ಬದುಕನ್ನು ಕಟ್ಟಿಕೊಳ್ಳಲಿಲ್ಲ. ಹಂಚಿಕೊಂಡು ಉಣ್ಣಲಿಲ್ಲ. ಇದರ ಪರಿಣಾಮವಾಗಿ ನಿಸರ್ಗ ನಿರ್ಮಿತ ಕಷ್ಟಗಳ ಜೊತೆ ಸ್ವನಿರ್ಮಿತ ಸಂಕಷ್ಟಗಳನ್ನು ಆಹ್ವಾನಿಸಿಕೊಂಡಿದ್ದಾನೆ. ಹಿಂದೆ ಹದಿನೇಳು, ಹದಿನೆಂಟನೇ ಶತಮಾನಗಳಲ್ಲಿ ಅಪ್ಪಳಿಸಿದ ಪ್ಲೇಗ್, ಕಾಲರಾಗಳಲ್ಲಿ ಸಾಕಷ್ಟು ಸಾವು-ನೋವು ಅನುಭವಿಸಿದ್ದಾನೆ. ಈಗ ಕೊರೋನ ಎಂಬ ಪ್ರಾಣಘಾತುಕ ವೈರಸ್ ಮನುಕುಲಕ್ಕೆ ಅಪ್ಪಳಿಸಿದೆ. ಇದಕ್ಕೆ ಔಷಧಿ ಕಂಡು ಹಿಡಿಯಲಾಗದೆ ಈಗ ಬಾಗಿಲು ಮುಚ್ಚಿಕೊಂಡು ಮನೆಯೊಳಗೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತನಗೆ ಸಂಕಷ್ಟ ಬಂದಾಗ ಮನುಷ್ಯ ದೇವರಿಗೆ ಪೂಜೆ, ಅಭಿಷೇಕ ಪ್ರಾರ್ಥನೆ, ಮಾಡುತ್ತ ನೆಮ್ಮದಿ ಕಂಡುಕೊಂಡಿದ್ದಾನೆ. ಈಗ ಕೋವಿಡ್ 19ರ ಎದುರು ತಾನು ನಂಬಿದ ದೇವರ ಆಟವೂ ನಡೆಯದಂತಾಗಿದೆ. ದೇವಸ್ಥಾನಗಳ ದ್ವಾರಗಳೇ ಕೊರೋನ ಹೊಡೆತಕ್ಕೆ ಮುಚ್ಚಿಕೊಂಡಿವೆ. ಹದಿನೇಳು ನೂರು ವರ್ಷಗಳಲ್ಲಿ ಎಂದೂ ಮುಚ್ಚದ ತಿರುಪತಿ ಹಾಗೂ ಸಣ್ಣ, ದೊಡ್ಡ ದೇವಾಲಯಗಳು ಇಂದು ಮುಚ್ಚಿವೆ.

ಇದು ಬರೀ ಚಪ್ಪಾಳೆಯಿಂದ, ಮನೆಯೊಳಗೆ ಕುಳಿತುಕೊಳ್ಳುವುದರಿಂದ ಹೋಗುವ ವೈರಸ್ ಅಲ್ಲ. ಇದರ ಬಗ್ಗೆ ವಿಶ್ಲೇಷಣೆ ಮಾಡಲು ಹೊರಟರೆ ಮತ್ತೆ ನಿಸರ್ಗದ ಜೊತೆಗಿನ ಮನುಷ್ಯನ ಸಂಬಂಧಕ್ಕೆ ಬರಲೇಬೇಕಾಗುತ್ತದೆ. ಪ್ರಕೃತಿಯೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿಯದ ಮನುಷ್ಯ ಅಂದರೆ ಮನುಷ್ಯರೊಳಗಿನ ಸಂಪತ್ತಿನ ಮೇಲಿನ ಒಡೆತನ ಹೊಂದಿದ ವರ್ಗ ಎಲ್ಲರೂ ಹಂಚಿಕೊಂಡು ಉಣ್ಣಬೇಕಾದ ನಿಸರ್ಗ ಸಂಪತ್ತನ್ನು ಕಬಳಿಸಲು ಮುಂದಾದಾಗ ಅಂದರೆ ಗಣಿಗಾರಿಕೆ ಹೆಸರಿನಲ್ಲಿ ಕಾಡಿನ ನಾಶ ಮಾಡಲು ಹೊರಟಾಗ, ಕೆರೆ ಕಟ್ಟೆಗಳನ್ನು ಮುಚ್ಚಿ ಬಡಾವಣೆಗಳನ್ನು ನಿರ್ಮಿಸಿ ಕಾಸು ಗಳಿಸಲು ಹೊರಟಾಗ ಒಮ್ಮಿಮ್ಮೆ ಇಂತಹ ಅನಾಹುತಗಳು ಸಂಭವಿಸುತ್ತವೆ. ವಿಜ್ಞಾನ ಮನುಷ್ಯನ ವಿಕಾಸಕ್ಕೆ ಬಳಕೆಯಾಗಬೇಕು, ಈ ರೀತಿ ನಿಸರ್ಗದ ವಿನಾಶಕ್ಕೆ ಬಳಕೆಯಾಗಬಾರದು.

ದೇವಾಲಯದ ಬಾಗಿಲುಗಳು ಮುಚ್ಚಿದ್ದರೆ ದವಾಖಾನೆಗಳ ದ್ವಾರಗಳು ತೆರೆದುಕೊಂಡಿವೆ. ಸಾವಿರಾರು ವೈದ್ಯರು ಪ್ರಾಣ ಪಣಕ್ಕಿಟ್ಟು ಕೊರೋನ ವಿರುದ್ಧ ಸೆಣಸುತ್ತಿದ್ದಾರೆ. ಭಾರತದಲ್ಲಿ ಅದೀಗ ಮೂರನೇ ಹಂತವನ್ನು ಪ್ರವೇಶ ಮಾಡಿರುವುದರಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿದೆ. ಮನೆಯಿಂದ ಯಾರೂ ಹೊರಗೆ ಬರಬಾರದೆಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿಯಂತೆ 22ನೇ ತಾರೀಕು ಜನತಾ ಕರ್ಫ್ಯೂವನ್ನು ಮಾಡಿ ಅನೇಕ ಕಡೆ ಚಪ್ಪಾಳೆ ತಟ್ಟಿದ್ದಾರೆ. ಇದೇ ಕೊರೋನ ವಿರುದ್ಧ ಇಟಲಿ, ಸ್ಪೈನ್ ದೇಶದ ಜನ ಸೆಣಸುತ್ತಿದ್ದಾರೆ. ಅಲ್ಲಿನ ವೈದ್ಯರ ಸೇವೆಯನ್ನು ಗೌರವಿಸಿ ಚಪ್ಪಾಳೆ ತಟ್ಟಲು ಆ ದೇಶದ ಪ್ರಧಾನಿಗಳು ನೀಡಿದ ಕರೆಯಿಂದ ನಮ್ಮ ಪ್ರಧಾನಿಯೂ ಸ್ಫೂರ್ತಿಯನ್ನು ಪಡೆದು ಈ ಕರೆ ನೀಡಿದ್ದಾರೆ.

ನಿಸರ್ಗದ ಜೊತೆ ಸಂಘರ್ಷ ನಡೆಸಿದ ಮನುಷ್ಯ ಅದು ಮುನಿಸಿಕೊಂಡಾಗ ಸಂಭಾವಿತನಾಗುತ್ತಾನೆ. ಸಹಜೀವಿಗಳ ಜೊತೆ ಸೇರಿ ಸೃಷ್ಟಿಯ ಸವಾಲನ್ನು ಎದುರಿಸಲು ಮುಂದಾಗುತ್ತಾನೆ. ಈ ಸಂಕಷ್ಟದ ದಿನಗಳು ಮುಗಿದ ನಂತರ ಸ್ವಹಿತಾಸಕ್ತಿಗಾಗಿ ಸಹಜೀವಿಗಳ ಜೊತೆ ಸಂಘರ್ಷಕ್ಕೆ ಇಳಿಯುತ್ತಾನೆ. ಈ ಕೋವಿಡ್ ಅಪ್ಪಳಿಸುವ ಮುನ್ನ ಇದೇ ಭಾರತದಲ್ಲಿ ಏನೇನು ನಡೆಯುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಏಟು ಕೊಡುವ ಮುನ್ನ ಉತ್ತರ ಪ್ರದೇಶದ ಆದಿತ್ಯನಾಥ್‌ನ ಗೂಂಡಾಗಳು ದಿಲ್ಲಿಗೆ ನುಗ್ಗಿ ಕೃತಕ ಕೋಮು ದಂಗೆ ಎಬ್ಬಿಸಿ ನೂರಕ್ಕೂ ಹೆಚ್ಚು ಅಮಾಯಕರ ಸಾವಿಗೆ ಕಾರಣವಾದರು.ಸ್ಥಳೀಯ ಜನರಲ್ಲಿ ದ್ವೇಷವಿರದಿದ್ದರೂ ಹೊರಗಿನ ಬೆಂಕಿ ಒಳಗಿನ ಮನೆಯನ್ನು ಸುಟ್ಟು ಹಾಕಿತು. ಇದು ಒಂದು ಉದಾಹರಣೆ ಮಾತ್ರ. ಗೋಹತ್ಯೆ ಹೆಸರಿನಲ್ಲಿ ನಡೆದ ಕೊಲೆಗಳು, ದಲಿತರ ಹತ್ಯೆಗಳು ಇವೆಲ್ಲ ಮನುಷ್ಯ ಮನುಷ್ಯತ್ವ ಕಳೆದುಕೊಂಡಾಗಿನ ಘಟನೆಗಳು.

ಈಗ ಅದೆಲ್ಲ ಪಕ್ಕಕ್ಕೆ ಹೋಗಿ ಕೊರೋನ ಕಾಲದಲ್ಲಿದ್ದೇವೆ. ಇಡೀ ದೇಶ ದಿಗಿಲುಗೊಂಡಿದೆ. ನಾನೀಗ ಇರುವ ಕಲಬುರಗಿಯಲ್ಲಿ ಒಬ್ಬನ ಸಾವಿನ ನಂತರ ಪರಿಸ್ಥಿತಿ ಸಂಪೂರ್ಣ ಗಂಭೀರವಾಗಿದೆ. ಕಳೆದ ಎರಡು ವಾರಗಳಿಂದ ಇಡೀ ನಗರ ಬಂದ್ ಆಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಕಂಡು ಬರುವಂತೆ ಕೊರೋನ ಕಡು ಬಡವರ ಬದುಕನ್ನು ಮೂರಾ ಬಟ್ಟೆ ಮಾಡಿದೆ.ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿ ದೊಡ್ಡ ನಗರ. ಇಲ್ಲಿ ದುಡಿಯಲು ಸುತ್ತಲಿನ ತಾಲೂಕುಗಳ ಜನ ಬರುತ್ತಾರೆ. ಬೆಳಗ್ಗೆ ಬಂದು ಸಂಜೆಯ ವರೆಗೆ ಮೈ ಮುರಿದು ದುಡಿದು ಕೂಲಿ ಪಡೆದು ಅರ್ಧ ಕಿಲೋ ಅಕ್ಕಿ, ಉಪ್ಪು, ಮೆಣಸಿನಕಾಯಿ ಒಯ್ದು ಅಂದೇ ರಾತ್ರಿ ಬೇಯಿಸಿ ತಿನ್ನುವವರಿಗೆ ಕೊರೋನದಿಂದ ಚೇತರಿಸಲಾಗದ ಏಟು ಬಿದ್ದಿದೆ.

ಕೊರೋನ ಎದುರಿಸಲು ಜನರು ಮನೆಯೊಳಗೆ ಇರಬೇಕು. ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಬೇಕು ಎಂದು ನಮ್ಮ ಪ್ರಧಾನಿ ಕರೆ ನೀಡಿದ್ದು ಮತ್ತೆ ನೆನಪಾಗುತ್ತಿದೆ. ಪ್ರಧಾನಿ ಕರೆಗೆ ಸ್ಪಂದಿಸಿ ಮನೆಯೊಳಗೆ ಉಳಿದು ಚಪ್ಪಾಳೆ ತಟ್ಟುವವರು ಬಾಲ್ಕನಿ ಇರುವ ಬಂಗಲೆಗಳಲ್ಲಿರುವವರು.ಆದರೆ ಸ್ವಂತ ಮನೆಯಿಲ್ಲದ, ಸಾವಿರಾರು ಜನ ಇಲ್ಲಿದ್ದಾರೆ. ಗುಡಿಸಿಲುಗಳಲ್ಲಿ, ಹಾಗೂ ರೈಲು, ಬಸ್ ನಿಲ್ದಾಣಗಳಲ್ಲಿ ಮಲಗಿ ಏಳುವವರಿದ್ದಾರೆ. ಅವರು ಬಟ್ಟ ಬಯಲಲ್ಲೆ ಇರುತ್ತಾರೆ. ಅಂಥವರ ಗತಿ ಏನು!

ತೊಂಬತ್ತರ ದಶಕದಲ್ಲಿ ಅಯೋಧ್ಯೆಯ ರಾಮ ಮಂದಿರ ಕಟ್ಟಲು ಇಟ್ಟಿಗೆ ಯಾತ್ರೆ ನಡೆದಾಗ ಪಿ.ಲಂಕೇಶ್, ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ ಎಂದು ಬರೆದ ಸಂಪಾದಕೀಯ ವಿವೇಕದ ಬೆಳಕನ್ನು ಚೆಲ್ಲಿತ್ತು. ಆದರೂ ಮಂದಿರ-ಮಸೀದಿ ಹೆಸರಿನಲ್ಲಿ ಭಾರೀ ರಕ್ತಪಾತ ನಡೆಯಿತು. ಅದಕ್ಕಿಂತ ಘೋರವಾದುದೆಂದರೆ ಮನಸ್ಸುಗಳ ನಡುವೆ ದ್ವೇಷದ ಗೋಡೆ ಎದ್ದು ನಿಂತಿತು.

ಮಲದ ಗುಂಡಿಗಳಲ್ಲಿ ಇಳಿದು ಉಸಿರುಗಟ್ಟಿ ನರಳುವವರು, ಬೀದಿ ಬೀದಿಗಳಲ್ಲಿ ಕಸಗುಡಿಸಿ ನಮ್ಮ ನಗರಗಳನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರು, ಸರಕಾರಿ ಆಸ್ಪತ್ರೆಗಳ ಸಿಬ್ಬಂದಿ, ಪೊಲೀಸರು ಇವರಿಗೆಲ್ಲ ಮನೆಯೊಳಗೆ ಉಳಿದು ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯುವ ಅವಕಾಶವೂ ಇಲ್ಲ. ಬಾಲ್ಕನಿ ಇರುವ ಬಂಗಲೆಗಳೂ ಇಲ್ಲ.

ಈ ಕೊರೋನ ಅಪ್ಪಳಿಸಿದ ನಂತರ ಪುಟ್ಟ ರಾಜ್ಯವಾದ ಕೇರಳದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದರು. ಆದರೆ ನಮ್ಮ ಪ್ರಧಾನಿಗಳು ಒಂದೇ ಒಂದು ಪೈಸೆ ಪರಿಹಾರ ನೆರವು ಘೋಷಿಸಲಿಲ್ಲ.ಆಸ್ಪತ್ರೆಗಳ ಹಾಗೂ ಟೆಸ್ಟ್ ಲ್ಯಾಬ್‌ಗಳ ಬಗ್ಗೆ ಮಾತಾಡಲಿಲ್ಲ. ಅದರ ಬದಲಿಗೆ ಜನರಿಗೆ ಚಪ್ಪಾಳೆ ತಟ್ಟುವ ಉಚಿತ ಉಪದೇಶವನ್ನು ನೀಡಿದರು.

ಈ ಪ್ರಶ್ನೆಗಳ ಜೊತೆಗೆ ಒಂದು ಮನವಿ ಕೋವಿಡ್-19 ಎದುರಿಸಲು ತುರ್ತಾಗಿ ಸಾರ್ವಜನಿಕ ವೈದ್ಯಕೀಯ ಸೌಕರ್ಯಗಳನ್ನು ಬಲಪಡಿಸಿ, ದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳನ್ನು ಸರಕಾರ ತಕ್ಷಣ ವಶ ಪಡಿಸಿಕೊಂಡು ಕೊರೋನದ ಮುಂಬರುವ ಸವಾಲುಗಳನ್ನು ಎದುರಿಸಲು ಮುಂದಾಗಲಿ.

ಕೊರೋನ ಜಗತ್ತಿನ ಬಹುತೇಕ ದೇಶಗಳಲ್ಲಿ ಆತಂಕ ಉಂಟು ಮಾಡಿದೆ.ಇಂಥ ಸಂದರ್ಭದಲ್ಲಿ ಸಮಾಜದಿಂದ ಪಡೆದು ಬೆಳೆದ ಕಾರ್ಪೊರೇಟ್ ಉದ್ಯಮಪತಿಗಳಿಗೂ ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ಇಟಲಿಯ ಕಾರ್ಪೊರೇಟ್ ವಲಯದ ಬಹು ಕೋಟ್ಯಧೀಶರು 18 ಶತಕೋಟಿ ನೆರವನ್ನು ಕೊರೋನ ಪಿಡುಗನ್ನು ಎದುರಿಸಲು ಘೋಷಿಸಿದ್ದಾರೆ. ಸ್ಪೇನ್‌ನಲ್ಲಿ 28 ಮಿಲಿಯನ್ ಕೋಟಿಯನ್ನು ಅಲ್ಲಿನ ಕಾರ್ಪೊರೇಶನ್ ವಲಯ ನೀಡಲು ಮುಂದಾಗುದೆ. ಬಿಲ್‌ಗೇಟ್ಸ್‌ಐವತ್ತು ಶತಕೋಟಿ ಡಾಲರ್ ನೀಡಿದ್ದಾರೆ. ಆದರೆ ಭಾರತದ ಬಹು ಕೋಟ್ಯಧೀಶರು ಎಲ್ಲಿದ್ದಾರೆ.ಮೋದಿಯವರು ಪ್ರಧಾನಿಯಾದ ನಂತರ ಸಾವಿರ, ಸಾವಿರ ಕೋಟಿ ಬಾಚಿಕೊಂಡ ಅಂಬಾನಿ, ಅದಾನಿ, ಮಿತ್ತಲ್‌ಗಳು ಎಲ್ಲಿದ್ದಾರೆ? ಅವರೇಕೆ ಒಂದೇ ಒಂದು ಪೈಸೆ ನೆರವನ್ನೂ ಘೋಷಿಸಿಲ್ಲ. ದೇಶದ ಪ್ರಜೆಗಳಿಗೆ ಜನತಾ ಕರ್ಫ್ಯೂ ಮಾಡಲು ಉಪದೇಶ ನೀಡುವ ನಮ್ಮ ಪ್ರಧಾನ ಮಂತ್ರಿಗಳು ತಮ್ಮ ಆಪ್ತರಾದ ಕಾರ್ಪೊರೇಟ್ ಧಣಿಗಳಿಗೆ ಕೊರೋನ ಎದುರಿಸಲು ನೆರವು ನೀಡಲು ಯಾಕೆ ಮನವಿ ಮಾಡಿಕೊಂಡಿಲ್ಲ.? ಈ ಪ್ರಶ್ನೆಗಳನ್ನು ಕೇಳುವ ಕಾಲ ಇದಲ್ಲ ಎಂಬ ಅರಿವು ನಮಗೂ ಇದೆ. ಕೊರೋನ ಭೀತಿಯಿಂದ ವ್ಯಾಪಾರ, ವಹಿವಾಟು ಬಂದ್ ಆದ ಈ ಕಾಲದಲ್ಲೂ ಮಧ್ಯಪ್ರದೇಶದ ಕಾಂಗ್ರೆಸ್‌ನ ಕಮಲನಾಥ್ ಸರಕಾರ ಉರುಳಿಸಲು ಶಾಸಕರ ಕುದುರೆ ವ್ಯಾಪಾರ ಅಬಾಧಿತವಾಗಿ ನಡೆದಿರುವುದರಿಂದ ನಾವು ನಮ್ಮೆಲ್ಲರ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪ್ರಶ್ನೆ ಕೇಳಿದರೆ ತಪ್ಪಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News