ಕೊರೋನವೈರಸ್ ಭೀತಿ: ಸುಪ್ರೀಂನಲ್ಲಿ ಕೇವಲ ತುರ್ತು ಪ್ರಕರಣಗಳ ವಿಚಾರಣೆ
ಹೊಸದಿಲ್ಲಿ, ಮಾ. 23: ದೇಶದಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಭೂತಪೂರ್ವ ಕ್ರಮಕ್ಕೆ ಮುಂದಾಗಿರುವ ಸರ್ವೋಚ್ಚ ನ್ಯಾಯಾಲಯವು ತನ್ನ ಆವರಣವನ್ನು ಮುಚ್ಚಲು ಮತ್ತು ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲು ಸೋಮವಾರ ನಿರ್ಧರಿಸಿದೆ.
ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿಯ ಮತ್ತು ಸುತ್ತುಮುತ್ತಲಿನ ವಕೀಲರ ಕೊಠಡಿಗಳನ್ನು ಮಂಗಳವಾರ ಸಂಜೆಯೊಳಗೆ ಮುಚ್ಚುವಂತೆಯೂ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ಆದೇಶಿಸಿತು.
ಮುಂದಿನ ಆದೇಶದವರೆಗೆ ಅತ್ಯಂತ ತುರ್ತು ವಿಷಯಗಳಲ್ಲಿ ಮಾತ್ರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕವೇ ವಿಚಾರಣೆಯನ್ನು ನಡೆಸಲಾಗುವುದು ಮತ್ತು ಇದಕ್ಕಾಗಿ ಇಬ್ಬರು ನ್ಯಾಯಾಧೀಶರ ಪೀಠವು ಲಭ್ಯವಿರುತ್ತದೆ. ನ್ಯಾಯಾಲಯದಲ್ಲಿ ವಕೀಲರು ಸೇರುವುದಕ್ಕೆ ಅವಕಾಶವಿರುವುದಿಲ್ಲ, ಅವರು ನ್ಯಾಯಾಲಯಕ್ಕೆ ಬರುವುದನ್ನು ನಿರುತ್ತೇಜಿಸಲು ಎಲ್ಲ ಪ್ರವೇಶ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದ ಸರ್ವೋಚ್ಚ ನ್ಯಾಯಾಲಯವು,ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರು ಮಾತ್ರ ತುರ್ತು ಕಾರಣಗಳಿಗಾಗಿ ವಕೀಲರು ನ್ಯಾಯಾಲಯದ ಆವರಣವನ್ನು ಪ್ರವೇಶಿಸಲು ಅವಕಾಶ ನೀಡುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಹೇಳಿತು.
ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘವು ತನ್ನ ಸದಸ್ಯರು ಎ.4ರವರೆಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವುದಿಲ್ಲ ಎಂಬ ನಿರ್ಣಯವನ್ನು ರವಿವಾರ ಅಂಗೀಕರಿಸಿತ್ತು. ವಕೀಲರು ಮತ್ತು ನ್ಯಾಯಾಧೀಶರ ಆರೋಗ್ಯದ ಹಿತದೃಷ್ಟಿಯಿಂದ ನ್ಯಾಯಾಲಯದ ಆವರಣವನ್ನು ಮುಚ್ಚುವಂತೆ ಅದು ಮು.ನ್ಯಾ.ಎಸ್.ಎ.ಬೊಬ್ಡೆ ಅವರಿಗೆ ಮನವಿಯನ್ನೂ ಸಲ್ಲಿಸಿತ್ತು. ದಿಲ್ಲಿಯ ಗಡಿಗಳನ್ನು ಮುಚ್ಚಿರುವುದರಿಂದ ಮತ್ತು ಮೆಟ್ರೋ ರೈಲು ಸೇವೆಗಳನ್ನು ರದ್ದುಗೊಳಿಸಿರುವುದರಿಂದ ನೊಯ್ಡೋ,ಘಾಝಿಯಾಬಾದ್ ಮತ್ತು ಗುರುಗ್ರಾಮಗಳಿಂದ ಬರಲು ವಕೀಲರಿಗೆ ಸಾಧ್ಯವಾಗುವುದಿಲ್ಲ ಎಂದು ಅದು ಒತ್ತಿ ಹೇಳಿತ್ತು.