ಕೊರೋನವೈರಸ್: ಇಂದಿನಿಂದ ಏಮ್ಸ್‌ನ ಒಪಿಡಿ ಬಂದ್
Update: 2020-03-23 22:58 IST
ಹೊಸದಿಲ್ಲಿ, ಮಾ. 23: ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಸೇವೆಗಳು,ಎಲ್ಲ ಹೊಸ ಮತ್ತು ಹಳೆಯ ರೋಗಿಗಳ ನೋಂದಣಿ-ಮರುನೋಂದಣಿ ಸೇರಿದಂತೆ ತನ್ನ ಹೊರರೋಗಿಗಳ ವಿಭಾಗ (ಒಪಿಡಿ) ವನ್ನು ಮಂಗಳವಾರದಿಂದ ಮುಚ್ಚುವಂತೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯು ಸೋಮವಾರ ಆದೇಶಿಸಿದೆ.
ತನ್ನ ವೈದ್ಯಕೀಯ ಸಿಬ್ಬಂದಿಗಳನ್ನು ಕೊರೋನವೈರಸ್ ಪಿಡುಗಿನ ನಿಯಂತ್ರಣಕ್ಕೆ ನಿಯೋಜಿಸಿರುವ ಹಿನ್ನೆಲೆಯಲ್ಲಿ ಹೊರರೋಗಿಗಳ ನೋಂದಣಿಯನ್ನು ಮಾ.23ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಏಮ್ಸ್ ಈ ಮೊದಲು ನಿರ್ಧರಿಸಿತ್ತು.
ಮಾ.21ರಿಂದ ಎಲ್ಲ ಅವಶ್ಯವಲ್ಲದ ಆಯ್ದ ವೈದ್ಯಕೀಯ ಪ್ರಕ್ರಿಯೆಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ಮುಂದೂಡಿ ಶುಕ್ರವಾರ ಸುತ್ತೋಲೆಯನ್ನು ಹೊರಡಿಸಿದ್ದ ಏಮ್ಸ್, ತುರ್ತು ಜೀವರಕ್ಷಕ ಶಸ್ತ್ರಚಿಕಿತ್ಸೆಗಳನ್ನು ಮಾತ್ರ ನಡೆಸುವಂತೆ ನಿರ್ದೇಶ ನೀಡಿತ್ತು.