ಕೊರೋನ ವೈರಸ್ ಭೀತಿ ನಡುವೆ ಹಸಿವಿನ ಕೂಗು ಕೇಳುವವರ್ಯಾರು? !

Update: 2020-03-24 07:27 GMT

ಮಾರಕ ವೈರಸ್ ಕೊರೋನ ಭೀತಿ ಜನಸಾಮಾನ್ಯರನ್ನು ತತ್ತರಗೊಳಿಸಿದೆ. ಮುಂಜಾಗೃತಾ ಕ್ರಮವಾಗಿ ದೇಶಾದ್ಯಂತ ಕ್ರಮಗಳನ್ನು ಕೈಗೊಳ್ಳಲಾಗಿರುವಂತೆಯೇ ರಾಜ್ಯದಲ್ಲೂ ಮಾ. 31ರವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಂಡಿದೆ. ಜನರು ಅನಗತ್ಯವಾಗಿ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಲಾಗಿದೆ. ಸ್ವಯಂ ನಿಯಂತ್ರಣ, ಮನೆಯಲ್ಲಿದ್ದೇ ಕೆಲಸ ಮಾಡಿ, ಸುರಕ್ಷತೆ ಕಾಪಾಡಿಕೊಳ್ಳಿ ಎಂಬ ಸಂದೇಶವನ್ನು ಕಚೇರಿ ಸಿಬ್ಬಂದಿಗಳಿಗೆ ನೀಡಲಾಗಿರುವಂತೆಯೇ ಸಂಸ್ಥೆಗಳು, ಕಾರ್ಖಾನೆಗಳು ಲಾಕ್‌ಡೌನ್ ಆಗಿವೆ. ಆದರೆ ಈ ನಡುವೆ ಹೊರ ರಾಜ್ಯ, ಜಿಲ್ಲೆಗಳಿಂದ ಬಂದು ನಗರದಲ್ಲಿ ದಿನಕೂಲಿ ಮಾಡಿ ಬೀದಿ ಬದಿಯಲ್ಲೇ ದಿನ ಕಳೆಯುತ್ತಿದ್ದವರ ಪಾಡು ಅಕ್ಷರಶ: ಬೀದಿ ಪಾಲಾಗಿದೆ.

ಒಂದೆಡೆ ಕೆಲಸವೂ ಇಲ್ಲ. ಮತ್ತೊಂಡೆಡೆ ಕೈಯ್ಯಲ್ಲಿ ಹಣವೂ ಇಲ್ಲದೆ ಪರದಾಡುವ ಪರಿಸ್ಥಿತಿಯನ್ನು ನಗರದ ರೈಲ್ವೇ ನಿಲ್ದಾಣದ ಸುತ್ತಮುತ್ತ ಕಾಣಬಹುದು. ಇದು ಕೇವಲ ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದ ಸುತ್ತಮುತ್ತಕ್ಕೆ ಮಾತ್ರ ಸೀಮಿತವಾಗಿಲ್ಲ. ನಗರದ ಬಹುತೇಕ ಪ್ರದೇಶಗಳಲ್ಲಿ ಈ ರೀತಿ ಅಲೆಮಾರಿ ಜೀವನ ನಡೆಸುತ್ತಿರುವವರ ಬದುಕು ಅಕ್ಷರಶ: ಬೀದಿ ಪಾಲಾಗಿರುವುದನ್ನು ಕಾಣಬಹುದು.

ನಗರದ ಕೇಂದ್ರ ರೈಲ್ವೇ ನಿಲ್ದಾಣದ ಸುತ್ತಮುತ್ತ ಸುಮಾರು 100ಕ್ಕೂ ಅಧಿಕ ಮಂದಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಆಶ್ರಯ ಪಡೆದಿದ್ದಾರೆ. ದಿನದ ಹೊತ್ತು ಇಂತಹವರಲ್ಲಿ ಕೆಲವರು ದಿನಕೂಲಿ, ಗಾರೆ ಕೆಲಸಕ್ಕೆ ಹೋಗುವವರು. ಆದರೆ ಕಳೆದ ಮೂರು ದಿನಗಳಿಂದ ಕೆಲಸವೂ ಇಲ್ಲದೆ ಈ ಮಂದಿ ರಸ್ತೆ ಬದಿಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇವರಿಗೆ ಪ್ರತಿನಿತ್ಯ ಮಧ್ಯಾಹ್ನ ಹಾಗೂ ಸಂಜೆ ಹೊತ್ತು ಸಾಮಾಜಿಕ ಸಂಘಟನೆ, ಆಶ್ರಮಗಳ ಮೂಲಕ ಊಟದ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ. ಹಾಗಿದ್ದರೂ ಬೀದಿ ಬದಿಯ ಇವರ ಬದುಕು ಮಾತ್ರ ಶೋನೀಯ.

ಚಿಕಿತ್ಸೆಗಾಗಿ ಬಂದ ದಂಪತಿ ಬೀದಿ ಬದಿಯಲ್ಲಿ !

ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿರುವ ತಮಿಳುನಾಡಿನ ಶ್ರೀರಾಜ್ ಎಂಬವರು ತಮ್ಮ ಪತ್ನಿಯೊಂದಿಗೆ ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ನಗರದ ಕೇಂದ್ರ ರೈಲ್ವೇ ನಿಲ್ದಾಣದ ಬಳಿಯ ರಸ್ತೆ ಬದಿ ಊಟಕ್ಕಾಗಿ ಕಾಯುತ್ತಿದ್ದ ದೃಶ್ಯ ಮನಕಲಕುವಂತಿತ್ತು.

‘‘ಕಳೆದ ಶನಿವಾರ ತಮಿಳುನಾಡಿನಿಂದ ಪತ್ನಿ ಜತೆ ಕೇರಳದಲ್ಲಿ ಕಾಲಿನ ಚಿಕಿತ್ಸೆಗಾಗಿ ರೈಲು ಹತ್ತಿದ್ದೆ. ರಾತ್ರಿ ನಿದ್ದೆಯಲ್ಲಿದ್ದವನಿಗೆ ಕೇರಳ ಸ್ಟೇಷನ್ ಬಂದಿದ್ದೇ ತಿಳಿಯಲಿಲ್ಲ. ಹಾಗಾಗಿ ಮಂಗಳೂರಿನಲ್ಲಿ ಇಳಿಯಬೇಕಾಯಿತು. ಆದರೆ ಇಲ್ಲಿ ಇಳಿದು ನೋಡಿದಾಗ ಎಲ್ಲಾ ರೈಲು ಸಂಚಾರ ಸ್ಥಗಿತ. ಹಾಗಾಗಿ ಮೂರು ದಿನಗಳಿಂದ ಇಲ್ಲೇ ಉಳಿದುಕೊಂಡಿದ್ದೇವೆ. ನಾನು ಹೆಚ್ಚು ದೂರ ನಡೆದು ಹೋಗುವಂತಿಲ್ಲ. ನಿನ್ನೆ ಎರಡು ದಿನ ಎರಡು ಹೊತ್ತು ಊಟ ಸಿಕ್ಕಿದೆ. ಇವತ್ತೂ ಕಾಯುತ್ತಿದ್ದೇವೆ. ಎರಡು ದಿನ ಹತ್ತಿರದ ದೇವಸ್ಥಾನದ ಎದುರು ಮಲಗಿದ್ದೆವು. ಆದರೆ ಅಲ್ಲಿ ತುಂಬಾ ಜನ ಸೇರಿ ಗಲಾಟೆ ಆರಂಭವಾದ ಕಾರಣ, ಅಲ್ಲಿಂದ ಓಡಿಸಿದ್ದಾರೆ. ಹಾಗಾಗಿ ನನ್ನ ಪತ್ನಿ ಜತೆ ಬೀದಿಯಲ್ಲೇ ಕಾಲ ಕಳೆಯುವಂತಾಗಿದೆ. ಮನೆಗೆ ಹಿಂತಿರುಗಲೂ ಆಗದೆ ನಾವು ಬೀದಿಗೆ ಬಿದ್ದಿದ್ದೇವೆ’’ ಎಂದು ತಮಿಳು ಮಿಶ್ರಿತ ಕನ್ನಡದಲ್ಲಿಯೇ ಶ್ರೀರಾಜ್ ಪ್ರತಿಕ್ರಿಯಿಸಿದರು.

‘‘ನಾನು ಇಲ್ಲಿ ಮೈದಾನದಲ್ಲಿ ಕಾಂಕ್ರೀಟ್ ಕೆಲಸಕ್ಕೆ ಗಂಡನ ಜತೆ ಬಂದಿದ್ದೆ. ಶನಿವಾರ ಇಲ್ಲೇ ಬಾಕಿಯಾದೆವು. ರವಿವಾರ ಒಂದು ದಿನ ಬಂದ್ ಎಂದು ಹೇಳಲಾಗಿತ್ತು. ಹಾಗಾಗಿ ಇಲ್ಲೇ ಉಳಿದಿದ್ದೆವು. ಇದೀಗ ಮೂರು ದಿನಗಳಿಂದ ಕೆಲಸವಿಲ್ಲ. ಈಗ ಊಟಕ್ಕಾಗಿ ಕಾಯುತ್ತಿದ್ದೇವೆ’’ ಎಂದು ಪ್ರಿಯಾ ಎಂಬಾಕೆ ಪ್ರತಿಕ್ರಿಯಿಸಿದರು.

ಈ ಪರಿಸ್ಥಿತಿ ಇನ್ನು ಅದೆಷ್ಟು ದಿನವೋ. ಒಂದೆಡೆ ಕೆಲಸವಿಲ್ಲ. ಯಾವುದೇ ಅಂಗಡಿ, ಹೊಟೇಲ್‌ಗಳೂ ಇಲ್ಲ. ಇನ್ನು ಇಲ್ಲಿ ಬರುವ ಊಟವೂ ನಿಂತರೆ ನಾವೇನು ಮಾಡಬೇಕು ತೋಚುವುದಿಲ್ಲ ಎನ್ನುವಾಗ ಅವರ ಮುಖದಲ್ಲಿನ ದುಗುಡ, ಆತಂಕ ಮಾತ್ರ ಕರುಣಾಜನಕ. ಅಷ್ಟರಲ್ಲಿ ಅಲ್ಲಿ ಪೊಲೀಸ್ ಗಸ್ತು ವಾಹನವೊಂದು ಬಂದಿದ್ದು, ಇಲ್ಲಿದ್ದವರೆಲ್ಲಾ ಹೋಗಿ ಎಂದು ಸಂದೇಶವನ್ನು ಮೊಳಗಿಸುತ್ತಾ ಸಾಗಿತು. ಇದನ್ನು ಕೇಳಿದಾಗ ಅಲ್ಲಿದ್ದವರಲ್ಲೆಲ್ಲಾ ಸ್ತಬ್ಧ. ‘‘ಇಲ್ಲೂ ಇರಬಾರದೆಂದರೆ ನಾವು ಹೋಗುವುದಾದರೂ ಎಲ್ಲಿ’’? ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News