ಶಿವರಾಜ್ ಸಿಂಗ್ ಚೌಹಾಣ್ ಪ್ರಮಾಣವಚನ: ಪ್ರಧಾನಿಯ ಸೂಚನೆಯನ್ನೇ ಮರೆತ ಬಿಜೆಪಿ ಶಾಸಕರು!

Update: 2020-03-24 12:16 GMT

ಭೋಪಾಲ್: ಕೊರೋನ ವೈರಸ್ ಸೋಂಕು ಹರಡುವಿಕೆಯ ವಿರುದ್ಧ ಎಚ್ಚರಿಕೆಯ ಕ್ರಮವಾಗಿ ಸೋಶಿಯಲ್ ಡಿಸ್ಟೆನ್ಸಿಂಗ್ (ಸಾಮಾಜಿಕ ಅಂತರ) ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆಯಾದರೂ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಈ ಸೋಶಿಯಲ್ ಡಿಸ್ಟೆನ್ಸಿಂಗ್ ನಿಯಮವನ್ನು  ಬಿಜೆಪಿ ನಾಯಕರು ಸುಲಭವಾಗಿ ಗಾಳಿಗೆ ತೂರಿದ್ದಾರೆ.

ಚೌಹಾಣ್ ಪ್ರಮಾಣವಚನ ಸ್ವೀಕರಿಸಿದ ನಂತರ ರಾಜ್ಯಪಾಲರು ಅವರ ಕೈಕುಲುಕಿದ ವೀಡಿಯೋ ಕೂಡ ಹರಿದಾಡುತ್ತಿದ್ದು, ಕೊರೋನ ಮುನ್ನೆಚ್ಚರಿಕೆಯನ್ನು ಮರೆತೇ ಬಿಟ್ಟರೇನೋ ಎಂಬಂತಿದೆ. ಸಮಾರಂಭದಲ್ಲಿ ಎಲ್ಲಾ ಬಿಜೆಪಿ ಶಾಸಕರೂ ಒಬ್ಬರ ಕೈಗಳನ್ನು ಒಬ್ಬರು ಹಿಡಿದು ಕೈ ಮೇಲಕ್ಕೆತ್ತಿದ ಫೋಟೋ ಕೂಡ ವೈರಲ್ ಆಗುತ್ತಿದೆ. ಈ ಎಲ್ಲಾ ಜನಪ್ರತಿನಿಧಿಗಳು ಕೊರೋನಾ ಬಗ್ಗೆ ಆತಂಕವನ್ನೇ ಹೊಂದಿಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ.

ಇಪ್ಪತ್ತೆರಡು ಮಂದಿ ಮಾಜಿ ಕಾಂಗ್ರೆಸ್ ಶಾಸಕರು ಮಾರ್ಚ್ 21ರಂದು ಬಿಜೆಪಿಗೆ ಸೇರಿದ ಸಂದರ್ಭದ ಫೋಟೋಗಳನ್ನೂ ಬಿಜೆಪಿ ಪೋಸ್ಟ್ ಮಾಡಿದ್ದು ಎಲ್ಲರೂ ಜತೆಯಾಗಿ ನಿಂತ ಫೋಟೋ ಕೂಡ ಇದೆ. ಸೋಶಿಯಲ್ ಡಿಸ್ಟೆನ್ಸಿಂಗ್ ಕಾಪಾಡುವಂತೆ ಪ್ರಧಾನಿ  ಮೋದಿ ಮಾಡಿದ ಮನವಿಯನ್ನು ಸ್ವಪಕ್ಷೀಯರೇ ಏಕೆ ಪುರಸ್ಕರಿಸಿಲ್ಲ ಎಂದು ಟ್ವಿಟ್ಟರಿಗರು ಪ್ರಶ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News