ಕೊರೋನ ವಿಷಯದಲ್ಲಿ ಚೀನಾ ಪರವಾಗಿ ಕೆಲಸ ಮಾಡುತ್ತಿರುವ ಡಬ್ಲ್ಯುಎಚ್‌ಒ: ಟ್ರಂಪ್ ಆರೋಪ

Update: 2020-03-26 17:08 GMT

ವಾಶಿಂಗ್ಟನ್, ಮಾ. 26: ಕೊರೋನವೈರಸ್ ಬಿಕ್ಕಟ್ಟಿಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಪರವಾಗಿ ಪಕ್ಷಪಾತ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಜಾಗತಿಕ ಆರೋಗ್ಯ ಸಂಸ್ಥೆಯ ಬಗ್ಗೆ ಹೆಚ್ಚಿನವರು ಅತೃಪ್ತಿ ಹೊಂದಿದ್ದಾರೆ ಹಾಗೂ ಅದು ‘‘ತುಂಬಾ ಪಕ್ಷಪಾತ ಮಾಡುತ್ತಿದೆ’’ ಎಂಬ ಭಾವನೆ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಚೀನಾಕ್ಕೆ ಅನುಚಿತ ವಿನಾಯಿತಿಗಳನ್ನು ನೀಡಿದೆ ಎಂಬುದಾಗಿ ರಿಪಬ್ಲಿಕನ್ ಪಕ್ಷದ ಸೆನೆಟರ್ ಮಾರ್ಕೊ ರೂಬಿಯೊ ಮಾಡಿರುವ ಆರೋಪದ ಬಗ್ಗೆ ಶ್ವೇತಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

ಹೌಸ್ ವಿದೇಶ ಸಂಬಂಧಗಳ ಸಮಿತಿಯ ಸದಸ್ಯ ಮೈಕಲ್ ಮೆಕೌಲ್, ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್‌ರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದಾರೆ. ಚೀನಾದೊಂದಿಗಿನ ಸಂಬಂಧಕ್ಕೆ ಸಂಬಂಧಿಸಿ ಗೇಬ್ರಿಯೇಸಸ್‌ರ ಗತಜೀವನದ ಹಲವು ಆಕ್ಷೇಪಾರ್ಹ ಸಂಗತಿಗಳತ್ತ ಅವರು ಬೆಟ್ಟು ಮಾಡಿದ್ದಾರೆ.

‘‘ವಿಶ್ವ ಆರೋಗ್ಯ ಸಂಸ್ಥೆಯು ಪಕ್ಷಾಪತದಿಂದ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಹೆಚ್ಚಿನವರು ಆಡಿಕೊಳ್ಳುತ್ತಿದ್ದಾರೆ’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನುಡಿದರು.

ಕೊರೋನವೈರಸ್ ಸಾಂಕ್ರಾಮಿಕದ ವೇಳೆ, ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಮುಖವಾಣಿಯಂತೆ ಕೆಲಸ ಮಾಡುತ್ತಿತ್ತು ಎಂದು ಟ್ವೀಟೊಂದರಲ್ಲಿ ಸಂಸತ್ ಕಾಂಗ್ರೆಸ್‌ನ ಸದಸ್ಯ ಗ್ರೆಗ್ ಸ್ಟೂಬ್ ಆರೋಪಿಸಿದ್ದಾರೆ. ಒಮ್ಮೆ ಈ ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದಾಗ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳೆರಡೂ ಅದರ ಪರಿಣಾಮಗಳನ್ನು ಎದುರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘‘ಈ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ವೇಳೆ, ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿಗೆ ವಿರುದ್ಧವಾಗಿ ನಿಂತು ಚೀನಾದ ಪರವಾಗಿ ಕೆಲಸ ಮಾಡಿತು’’ ಎಂದು ಸೆನೆಟರ್ ಜೋಶ್ ಹಾಲಿ ಟ್ವೀಟ್ ಮಾಡಿದ್ದಾರೆ.

ಚೀನಾವನ್ನು ಹೊಗಳಿದ್ದ ಡಬ್ಲ್ಯುಎಚ್‌ಒ ಮುಖ್ಯಸ್ಥ

ನೂತನ-ಕೊರೋನವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ಕೊನೆಗೊಳಿಸುವಲ್ಲಿ ಚೀನಾದ ನಾಯಕತ್ವ ತೋರಿಸಿದ ‘ದೃಢನಿರ್ಧಾರ’ವನ್ನು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಗೇಬ್ರಿಯೇಸಸ್ ಶ್ಲಾಘಿಸಿದ್ದರು. ಆದರೆ, ಇದಕ್ಕಾಗಿ ಅವರು ಭಾರೀ ಟೀಕೆಗೆ ಗುರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News