ಕೊರೋನ: ದೇಶದಲ್ಲಿ ಸಾವಿನ ಸಂಖ್ಯೆ 20, ಸೋಂಕಿತರು 700ಕ್ಕೂ ಅಧಿಕ

Update: 2020-03-27 03:54 GMT

ಹೊಸದಿಲ್ಲಿ, ಮಾ.27: ದೇಶಾದ್ಯಂತ ಗುರುವಾರ ಕೋವಿಡ್-19 ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದು, ಈ ಮಾರಕ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 20ನ್ನು ತಲುಪಿದೆ. ಸೋಂಕಿನಿಂದಾಗಿ ಒಂದೇ ದಿನದಲ್ಲಿ ಗರಿಷ್ಠ ಸಾವು ಗುರುವಾರ ದಾಖಲಾಗಿದೆ. ರಾಜಧಾನಿಯಲ್ಲಿ 4 ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು 71 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 727 ಆಗಿದೆ.

ಆದರೆ ಆರೋಗ್ಯ ಸಚಿವಾಲಯ ಕೋವಿಡ್-19 ಸೋಂಕಿನಿಂದ ಆರು ಮಂದಿ ಮೃತಪಟ್ಟಿರುವುದನ್ನಷ್ಟೇ ದೃಢಪಡಿಸಿದೆ. ಸಚಿವಾಲಯ ಇದುವರೆಗೆ ದೃಢಪಡಿಸಿದ ಸಾವಿನ ಸಂಖ್ಯೆ 16. ಹೊಸದಾಗಿ 88 ಪ್ರಕರಣಗಳು ಪತ್ತೆಯಾಗಿವೆ ಎಂದು ಸಚಿವಾಲಯ ಹೇಳಿದ್ದು, 694 ಮಂದಿಗೆ ಸೋಂಕು ತಗುಲಿದೆ.

ಕೋವಿಡ್-19 ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡ ಇತಿಹಾಸ ಇಲ್ಲದ 65 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಮುಂಬೈನಲ್ಲಿ ಮೃತಪಟ್ಟಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಜಮ್ಮು ಮತ್ತು ಕಾಶ್ಮೀರದ ಸೋಪುರದಲ್ಲಿ 65 ವರ್ಷದ ವ್ಯಾಪಾರಿ ಸೋಂಕಿನಿಂದ ಮೃತಪಟ್ಟಿದ್ದು, ರಾಜಸ್ಥಾನದ ವಿರೂಶಿಟ್ ಬಿಲ್ವಾರಾದಲ್ಲಿ 73 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಇವರು ಮಧುಮೇಹ, ತೀವ್ರ ಕಿಡ್ನಿ ಸಮಸ್ಯೆ ಮತ್ತು ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ. ಬಹುತೇಕ ಸಾವಿನ ಪ್ರಕರಣಗಳಲ್ಲಿ ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳು ಕೂಡಾ ಕೋವಿಡ್-19 ಸೋಂಕಿನ ಸಮಸ್ಯೆ ಜತೆ ಸೇರಿಕೊಂಡಿದೆ.

ಮಧ್ಯಪ್ರದೇಶದಲ್ಲಿ ಕೂಡಾ ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲದ 35 ವರ್ಷದ ವ್ಯಕ್ತಿಯೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಜ್ವರ, ಕಫ ಮತ್ತು ಉಸಿರಾಟದ ಸಮಸ್ಯೆ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಈ ವ್ಯಕ್ತಿಗೆ ಕೋವಿಡ್-19 ಸೋಂಕು ತಗುಲಿರುವುದು ಬಳಿಕ ದೃಢಪಟ್ಟಿತ್ತು. ಇದಕ್ಕೂ ಮುನ್ನ ರಾಜ್ಯದಲ್ಲಿ 65 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದರು. ಗುಜರಾತ್‌ನಲ್ಲಿ ಗುರುವಾರ 70 ವರ್ಷದ ವ್ಯಕ್ತಿ ಕೊನೆಯುಸಿರೆಳೆದಿದ್ದು, ಐದು ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಮೂವರು ಬಲಿಯಗಿದ್ದು, ಒಟ್ಟು 44 ಪ್ರಕರಣಗಳು ದೃಢಪಟ್ಟಿವೆ.

ಗುರುವಾರ ಕೇರಳದಲ್ಲಿ ಗರಿಷ್ಠ (19) ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದರೂ, ರಾಜ್ಯದಲ್ಲಿ ಈವರೆಗೆ ಯಾರೂ ಸೋಂಕಿನಿಂದ ಮೃತಪಟ್ಟಿಲ್ಲ. ಮಹಾರಾಷ್ಟ್ರದಲ್ಲಿ 8 ಪ್ರಕರಣ ವರದಿಯಾಗಿವೆ. ಕೇರಳದಲ್ಲಿ 137, ಮಹಾರಾಷ್ಟ್ರದಲ್ಲಿ 130, ಕರ್ನಾಟಕದಲ್ಲಿ 55 ಪ್ರಕರಣಗಳು ವರದಿಯಾಗಿದ್ದು, ತೆಲಂಗಾಣ (45), ಗುಜರಾತ್ (44) ನಂತರದ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News