×
Ad

ಕೊರೋನ ವಿರುದ್ಧದ ಹೋರಾಟಕ್ಕೆ ಬಜಾಜ್ ಸಮೂಹದಿಂದ 100 ಕೋಟಿ ರೂ.!

Update: 2020-03-27 09:51 IST

ಹೊಸದಿಲ್ಲಿ, ಮಾ.27: ದೇಶವನ್ನು ಬೆಚ್ಚಿ ಬೀಳಿಸಿರುವ ಕೊರೋನ ವೈರಸ್ ಸೋಂಕು ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಬಜಾಜ್ ಉದ್ಯಮ ಸಮೂಹ ಈ ಉದ್ದೇಶಕ್ಕಾಗಿ 100 ಕೋಟಿ ರೂಪಾಯಿಗಳನ್ನು ನೀಡುವ ವಾಗ್ದಾನ ಮಾಡಿದೆ. ಸರ್ಕಾರ ಮತ್ತು 200ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಜಾಲದೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲಿದ್ದು, ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಸಂಪನ್ಮೂಲ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಪ್ರಕಟಿಸಿದೆ.

ಪುಣೆ ಮೂಲದ ಕಂಪನಿಯಾಗಿರುವ ಬಜಾಜ್ ಸಮೂಹ, ಕೊರೋನ ವೈರಸ್ ಹರಡುವುದನ್ನು ತಡೆಯಲು ಅಗತ್ಯವಾದ ಪ್ರಮುಖ ಆರೋಗ್ಯ ಸೇವಾ ಮೂಲ ಸೌಕರ್ಯವನ್ನು ಮೇಲ್ದರ್ಜೆಗೇರಿಸಲು ನೆರವಾಗುತ್ತಿದೆ. ಯಾವೆಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಸೌಲಭ್ಯವನ್ನು ಮೇಲ್ದರ್ಜೆಗೇರಿಸಬೇಕು ಎನ್ನುವುದನ್ನು ಗುರುತಿಸಲಾಗಿದ್ದು, ಇದಕ್ಕೆ ಅಗತ್ಯ ನೆರವು ನೀಡಲಿದೆ. ಜತೆಗೆ ತೀರಾ ಅಗತ್ಯ ಎನಿಸಿದ ರೋಗಿಗಳಿಗೆ ವೆಂಟಿಲೇಟರ್ ಹಾಗೂ ವೈದ್ಯರು, ಆರೋಗ್ಯ ಕಾರ್ಯಕರ್ತರು, ನರ್ಸ್‌ಗಳು ಹಾಗೂ ಇದರ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಖರೀದಿಸಲು ಕೂಡಾ ನೆರವಾಗಲಿದೆ. ಪುಣೆ, ಪಿಂಪ್ರಿ-ಚಿಂಚವಾಡ ಮತ್ತು ಪುಣೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳಿಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಲು ಹಾಗೂ ತಪಾಸಣಾ ಸೌಲಭ್ಯಗಳನ್ನು ವಿಸ್ತರಿಸಲು ಕೂಡಾ ನೆರವು ಒದಗಿಸಲಿದೆ.

ಅಂತೆಯೇ ದಿನಗೂಲಿ ಕಾರ್ಮಿಕರು, ನಿರ್ಗತಿಕರು ಮತ್ತು ಬೀದಿ ಮಕ್ಕಳಂಥ ಸೌಲಭ್ಯ ವಂಚಿತರಿಗೆ ತಕ್ಷಣದ ನೆರವು ಒದಗಿಸುವ ಸಂಘ ಸಂಸ್ಥೆಗಳ ಜತೆ ಕೂಡಾ ಬಜಾಜ್ ಕೈಜೋಡಿಸಲಿದೆ. ಆಹಾರ ಪೂರೈಕೆ, ವಸತಿ ವ್ಯವಸ್ಥೆ, ನೈರ್ಮಲ್ಯ ಮತ್ತು ಆರೋಗ್ಯ ಸೇವೆ ಪಡೆಯಲು ಅಗತ್ಯವಾದ ನೆರವನ್ನು ಕೂಡಾ ನೀಡಲಿದೆ.

ಜನರು ನಗರಗಳಿಂದ ಹಳ್ಳಿಗಳಿಗೆ ವಲಸೆ ಹೋಗುವ ಪ್ರಕ್ರಿಯೆಯನ್ನು ಕೂಡಾ ಬಜಾಜ್ ಸಮೂಹ ಗುರುತಿಸಿದ್ದು, ಈ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ನೆರವು ಒದಗಿಸುವ ಸಲುವಾಗಿ ಮೊತ್ತವನ್ನು ವಿನಿಯೋಗಿಸಲು ಕೂಡಾ ಬದ್ಧವಾಗಿದೆ. ಇದರ ಜತೆಗೆ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರದ ಜತೆ ಕೈಜೋಡಿಸುವುದು, ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಸೇವಾ ಮೂಲ ಸೌಕರ್ಯಗಳನ್ನು ಬಲಪಡಿಸುವುದು ಮತ್ತಿತರ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News