ಈ ಪ್ಯಾಕೇಜ್ ಹಸಿದವರಿಗೆ ತಲುಪಲಿ

Update: 2020-03-27 17:49 GMT

ಕೊರೋನ ಹೊಡೆತದಿಂದ ಇಡೀ ಜಗತ್ತು ತತ್ತರಿಸಿದೆ. ಈ ಮಾರಕ ವೈರಸ್ ಎದುರು ಸಮರ ಸಾರಿದ ಭಾರತ ಕೂಡ ಇಡೀ ದೇಶಕ್ಕೆ ಬೀಗ ಹಾಕಿ ಮನೆ ಸೇರಿದೆ. 130 ಕೋಟಿ ಜನಸಂಖ್ಯೆಯ ಈ ದೇಶದ ದೈನಂದಿನ ಬದುಕು ಸ್ತಬ್ಧ್ದವಾಗಿದೆ. ಇನ್ನು ಮೂರು ವಾರಗಳ ಕಾಲ ಈ ದಿಗ್ಬಂಧನ ಮುಂದುವರಿಯಲಿದೆ. ಕೋವಿಡ್‌_-19 ಎಂದು ಕರೆಯಲ್ಪಡುವ ಈ ಪಿಡುಗು ಇಟಲಿ ಅಮೆರಿಕ, ಫ್ರಾನ್ಸ್, ಸ್ಪೈನ್ ದೇಶಗಳಲ್ಲಿ ಹಬ್ಬುತ್ತಿರುವ ವೇಗ, ಅದಕ್ಕೆ ಬಲಿಯಾಗುವವರ ಸಂಖ್ಯೆಯನ್ನು ಗಮನಿಸಿದರೆ, ಭಾರತ ಸರಕಾರದ ಮುನ್ನೆಚ್ಚರಿಕೆ ಸಮರ್ಥನೀಯವಾಗಿದೆ. ಆದರೆ ನಮ್ಮ ಮೋದಿ ನೇತೃತ್ವದ ಬಿಜೆಪಿ ಸರಕಾರ ತುಂಬ ತಡವಾಗಿ ಕಾರ್ಯಾಚರಣೆಗೆ ಇಳಿಯಿತು. ಜನವರಿಯ ಆಜೂಬಾಜು ಚೀನಾದಲ್ಲಿ ಕೊರೋನ ಸಾವಿನ ಹೆಬ್ಬಾಗಿಲು ತೆರೆದಾಗಲೇ ನಮ್ಮ ಸರಕಾರ ಎಚ್ಚರಿಕೆ ವಹಿಸಿದ್ದರೆ ಈಗ ಇಡೀ ದೇಶಕ್ಕೆ ದಿಗ್ಬಂಧನ ವಿಧಿಸುವ ಪ್ರಸಂಗ ಬರುತ್ತಿರಲಿಲ್ಲ. ಕೊರೋನ ವೈರಸ್ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೆಬ್ರವರಿ 12ರಂದು ಎಚ್ಚರಿಕೆ ನೀಡಿದ್ದರು. ಆದರೆ ಆಗ ನಮ್ಮ ಪ್ರಧಾನಿ ದೇಶಕ್ಕೆ ಟ್ರಂಪ್ ಆಗಮನದ ಸಂಭ್ರಮದಲ್ಲಿದ್ದರು. ಜೊತೆಗೆ ಎನ್‌ಆರ್‌ಸಿ_, ಕಾಶ್ಮೀರ ಎಂದೆಲ್ಲ ತಲೆ ಕೆಡಿಸಿಕೊಂಡಿದ್ದರು. ಸರಕಾರ ಎಚ್ಚೆತ್ತಿದ್ದು ಮಾರ್ಚ್ ಮೊದಲ ವಾರದ ಕೊನೆಯಲ್ಲಿ. ಗಂಭೀರವಾಗಿ ಕಾರ್ಯಾಚರಣೆ ಆರಂಭಿಸಿದ್ದು ಕೊರೋನಕ್ಕೆ ಕಲಬುರಗಿಯ ಒಬ್ಬ ವ್ಯಕ್ತಿ ಬಲಿಯಾದ ನಂತರ.ತಡವಾಗಿ ಕಾರ್ಯೋನ್ಮುಖವಾದ ಸರಕಾರ ಇದೀಗ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿದೆ.

ಪ್ರಧಾನ ಮಂತ್ರಿ ಮೋದಿಯವರು 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ ನಂತರ ಜನಸಾಮಾನ್ಯರ ದೈನಂದಿನ ಬದುಕು ಶೋಚನೀಯವಾಗಿದೆ. ಅಂದೇ ದುಡಿದು ಅಂದೇ ಅಂಗಡಿಯಿಂದ ತಂದು ಹಸಿವನ್ನು ಇಂಗಿಸಿಕೊಳ್ಳುವ ದಿನಗೂಲಿಗಳು ಹಸಿವಿನ ಕೂಪಕ್ಕೆ ದೂಡಲ್ಪಟ್ಟಿದ್ದಾರೆ. ಇಡೀ ದೇಶದ ಅಸಂಘಟಿತ ವಲಯದ ಶ್ರಮಜೀವಿಗಳ ಮೂಕ ಸಂಕಟ ಅಸಹನೀಯವಾಗಿದೆ. ಗ್ರಾಮೀಣ ಪ್ರದೇಶದ ರೈತ ಕೂಲಿಕಾರರಿಗೆ ಆಸರೆಯಾಗಿದ್ದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂನರೇಗಾ) ಸಂಪೂರ್ಣ ಸ್ಥಗಿತಗೊಂಡಿದೆ.ಇವರು ಮಾತ್ರವಲ್ಲ ದೇಶ ವ್ಯಾಪಿಯಾಗಿ ದಿನಗೂಲಿ ನೌಕರರು,ಗುತ್ತಿಗೆ ನೌಕರರು,ಸಣ್ಣ ಪುಟ್ಟ ಉದ್ಯೋಗಸ್ಥರು ಈಗ ಕೊರೋನ ದಿಗ್ಬಂಧನ ಪರಿಣಾಮವಾಗಿ ಬರಿಗೈಯಲ್ಲಿ ಮನೆಯೊಳಗೆ ಕುಳಿತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 1.70 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಪ್ರಕಟಿಸಿದೆ. ಈ ಪ್ಯಾಕೇಜ್ ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ ಪ್ಯಾಕೇಜ್ ಮೇಲ್ನೋಟಕ್ಕೆ ಆಕರ್ಷಕವಾಗಿದೆ. 80 ಕೋಟಿ ಬಡವರಿಗೆ 5 ಕೆ.ಜಿ ಉಚಿತ ಆಹಾರ ಧಾನ್ಯ, ಜನಧನ್ ಖಾತೆ ಹೊಂದಿದ ಮಹಿಳೆಯರಿಗೆ ತಿಂಗಳಿಗೆ 500 ರೂ.ನಂತೆ ಮೂರು ತಿಂಗಳು ಹಣ ನೀಡಿಕೆ. ನಗದು ವರ್ಗಾವಣೆ ಯೋಜನೆಯಡಿ 8.9 ಕೋಟಿ ರೈತರಿಗೆ ಎಪ್ರಿಲ್ ಮೊದಲ ವಾರ ತಲಾ 2,000 ರೂ. ನೀಡುವುದು, 15 ಸಾವಿರ ರೂ. ಸಂಬಳದೊಳಗಿನ ಕಾರ್ಮಿಕರ ಮೂರು ತಿಂಗಳ ಇಪಿಎಫ್ ಮೊತ್ತವನ್ನು ಸರಕಾರ ಭರಿಸುವುದು, ಮುಂತಾದ ಅಂಶಗಳನ್ನು ಪ್ಯಾಕೇಜ್ ಒಳಗೊಂಡಿದೆ.

ಭಾರೀ ಬಂಡವಾಳಗಾರರ 1.78 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ ಸರಕಾರ ಈ ದೇಶ ಕಟ್ಟಿದ ಶ್ರಮಜೀವಿಗಳ, ಬಡವರ ನೆರವಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದು ದೊಡ್ಡದೇನಲ್ಲ. ಆದರೆ ಇನ್ನೊಂದಿಷ್ಟು ಧಾರಾಳತನ ತೋರಿಸಬೇಕಾಗಿತ್ತು. ಮಾಸಾಶನ ಪಡೆಯುವ ಹಿರಿಯರ, ವಿಧವೆಯರ, ವಿಕಲಾಂಗರ ಮಾಸಾಶನವನ್ನು ಮೂರು ತಿಂಗಳಿಗೆ 1 ಸಾವಿರ ರೂಪಾಯಿ ಹೆಚ್ಚಿಸಿರುವುದು ದೊಡ್ಡ ಮೊತ್ತವೇನಲ್ಲ. ಇದರಿಂದ ತಿಂಗಳಿಗೆ 333 ರೂಪಾಯಿ ಮಾತ್ರ ಹೆಚ್ಚಾದಂತಾಗುತ್ತದೆ.ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು 150ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಈಡೇರಿಲ್ಲ. ಎಂನರೇಗಾ ನೌಕರರ ಹಳೆಯ ಬಾಕಿ ಕೂಡ ಪಾವತಿಯಾಗಿಲ್ಲ.ಈಗ ಮೂಗಿಗೆ ತುಪ್ಪ ಸವರಿ ಕೂರಿಸಲಾಗಿದೆ.

ಕಟ್ಟಡ ಕಾರ್ಮಿಕರಿಗೆ ಮೀಸಲಿಟ್ಟಿರುವ 31 ಸಾವಿರ ಕೋಟಿ ರೂ. ಬಳಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಿರುವುದು ಸೂಕ್ತವಾಗಿದೆ. ಕರ್ನಾಟಕದ ಯಡಿಯೂರಪ್ಪ ನೇತೃತ್ವದ ಸರಕಾರ ಕಟ್ಟಡ ಕಾರ್ಮಿಕರಿಗೆ ತಲಾ ಒಂದು ಸಾವಿರ ರೂಪಾಯಿ ನೀಡುವುದಾಗಿ ಈಗಾಗಲೇ ಪ್ರಕಟಿಸಿದೆ.ಕೊರೋನದಿಂದ ಜನಸಾಮಾನ್ಯರ ಬದುಕು ಸ್ಥಗಿತಗೊಂಡಿದೆ. ಆದ್ದರಿಂದ ಇನ್ನಷ್ಟು ಪರಿಹಾರ ಕ್ರಮಗಳನ್ನು ಘೋಷಿಸಬೇಕಾಗಿತ್ತು. ಇಪಿಎಫ್ ಪಿಂಚಣಿ ದಾರರ ಈಗಿನ ಮಾಸಿಕ 1 ಸಾವಿರ ರೂ. ಮೊತ್ತವನ್ನು ಕನಿಷ್ಠ ಐದು ಸಾವಿರಕ್ಕೆ ಹೆಚ್ಚಳ ಮಾಡಬೇಕಾಗಿತ್ತು. ಅಲ್ಲದೆ ಸರಕಾರದ ದಾಖಲೆಯಲ್ಲಿಲ್ಲದ ಹಮಾಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರಿಗೆ, ಗಾರ್ಮೆಂಟ್ ಕಾರ್ಮಿಕರಿಗೆ, ಆಟೊ ಚಾಲಕರಿಗೆ, ಬೀಡಿ ಕಾರ್ಮಿಕರಿಗೆ, ಪ್ಲಾಂಟೇಶನ್ ಕಾರ್ಮಿಕರಿಗೆ ಈ ಪ್ಯಾಕೇಜ್ ಯಾವ ರೀತಿ ಆಸರೆಯಾಗುತ್ತದೆ? ಈ ಸಂದೇಹಗಳು ನಿವಾರಣೆಯಾಗಬೇಕಾಗಿದೆ. ದೇಶದ ಬಹುತೇಕ ದುಡಿಯುವ ಜನ ತೀವ್ರ ತೊಂದರೆಯಲ್ಲಿದ್ದಾರೆ. ಅವರೆಲ್ಲರ ನೆರವಿಗೆ ಸರಕಾರ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News