ಬಿಎಸ್ 4 ವಾಹನಗಳ ಮಾರಾಟಕ್ಕೆ 10 ದಿನಗಳ ಕಾಲಾವಕಾಶ ನೀಡಿದ ಸುಪ್ರೀಂ

Update: 2020-03-27 17:55 GMT

ಹೊಸದಿಲ್ಲಿ, ಮಾ.27: ಕೊರೋನ ವೈರಸ್ ಸೋಂಕು ಹರಡುತ್ತಿರುವುದನ್ನು ತಪ್ಪಿಸಲು ದೇಶಾದ್ಯಂತ ಜಾರಿಗೊಳಿಸಲಾದ ಲಾಕ್ ಡೌನ್ ಅವಧಿ ಮುಗಿದ ಬಳಿಕ 10 ದಿನಗಳ ವರೆಗೆ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಬಿಎಸ್ 4 ವಾಹನಗಳ ಮಾರಾಟ ಮತ್ತು ನೋಂದಣಿಗೆ ಮಾರ್ಚ್ 31ರ ತನಕ ಹಿಂದೆ ವಿಧಿಸಲಾಗಿದ್ದ ಗಡುವನ್ನು ಸರ್ವೊಚ್ಚ ನ್ಯಾಯಾಲಯ ಸಡಿಲಿಸಿದೆ.

ಸುಪ್ರೀಂ ಕೋರ್ಟ್ ಪ್ರಕಾರ ಭಾರತೀಯ ಕಾರು ತಯಾರಕರು ಈ ಅವಧಿಯಲ್ಲಿ ತಮ್ಮ ಬಿಎಸ್ 4 ಷೇರುಗಳಲ್ಲಿ ಶೇ 10ರಷ್ಟು ಮಾತ್ರ ಮಾರಾಟ ಮಾಡಬಹುದು. ಆದರೆ, ಉನ್ನತ ನ್ಯಾಯಾಲಯದ ತೀರ್ಪಿನಲ್ಲಿ ದಿಲ್ಲಿ -ಎನ್ಸಿಆರ್ ಪ್ರದೇಶವನ್ನು ಒಳಗೊಂಡಿಲ್ಲ.

 ಈಗಿನ ಪರಿಸ್ಥಿತಿಯಲ್ಲಿ ಲಾಕ್‌ಡೌನನ್ನು ಮತ್ತಷ್ಟು ವಿಸ್ತರಿಸಲು ಸರಕಾರ ನಿರ್ಧರಿಸದಿದ್ದಲ್ಲಿ, ಈಗಿರುವ ಕೊರೋನ ವೈರಸ್ ಲಾಕ್‌ಡೌನ್ ಎಪ್ರಿಲ್ 14 ಕ್ಕೆ ಕೊನೆಗೊಳ್ಳಲಿದೆ.

 ಕೋವಿಡ್ -19 ಕಾರಣದಿಂದಾಗಿ ಏಕಾಏಕಿ ಮಾರಾಟ ಕಡಿಮೆಯಾದ ಕಾರಣ ಬಿಎಸ್ 4 ವಾಹನಗಳ ದಾಸ್ತಾನನ್ನು ತೆರವುಗೊಳಿಸುವಲ್ಲಿ ತೊಂದರೆ ಎದುರಿಸುತ್ತಿರುವ ಆಟೋ ವಿತರಕರು ಈ ಹಿಂದೆ ಸುಪ್ರೀಂ ಕೋರ್ಟ್‌ನ್ನು ಸಂಪರ್ಕಿಸಿ ಹಳೆಯ ಮಾನದಂಡಂತೆ ವಾಹನಗಳನ್ನು ನೋಂದಾಯಿಸಲು ಗಡುವನ್ನು ವಿಸ್ತರಿಸಬೇಕೆಂದು ಕೋರಿದ್ದರು.

ದ್ವಿಚಕ್ರ ವಾಹನಗಳ ತಯಾರಿಕಾ ಸಂಸ್ಥೆ ಹೀರೋ ಮೊಟೊಕಾರ್ಪ್ ಬಿಎಸ್ 4 ವಾಹನಗಳ ಮಾರಾಟ ಅಥವಾ ನೋಂದಣಿಯ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಅಪಾರ ದಾಸ್ತಾನು ಮತ್ತು ಮಾರಾಟ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಸ್ 4 ವಾಹನಗಳನ್ನು ನೋಂದಾಯಿಸುವ ಅವಧಿಯನ್ನು ವಿಸ್ತರಿಸುವಂತೆ ಈ ಹಿಂದೆ ಎಫ್‌ಎಡಿಎ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅದಾಗ್ಯೂ, ಆ ಅರ್ಜಿಯನ್ನು ಫೆಬ್ರವರಿ 14 ರಂದು ನ್ಯಾಯಾಲಯ ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News