ಬೆಕ್ಕಿಗೂ ಬರುತ್ತದೆಯೇ ಕೊರೋನ ಸೋಂಕು?!

Update: 2020-03-28 04:38 GMT
ಸಾಂದರ್ಭಿಕ ಚಿತ್ರ

ಬ್ರುಸ್ಸೆಲ್ಸ್, ಮಾ.28: ಕೊರೋನ ವೈರಸ್ ಸೋಂಕಿತ ಮಾಲಕನಿಂದ ಮನೆಯಲ್ಲಿ ಸಾಕಿದ ಬೆಕ್ಕಿಗೆ ಕೂಡಾ ಸೋಂಕು ಹರಡಿರುವ ಪ್ರಕರಣ ಪತ್ತೆಯಾಗಿದೆ ಎಂದು ಬೆಲ್ಜಿಯಂ ಆರೋಗ್ಯ ಅಧಿಕಾರಿಗಳು ಪ್ರಕಟಿಸಿದ್ದಾರೆ.

ಸಾಕುಪ್ರಾಣಿಗಳಿಗೆ ಈ ಸೋಂಕು ತಗುಲುವುದು ತೀರಾ ಅಪರೂಪ. ಮನೆಯಲ್ಲಿ ಸಾಕಿದ ಪ್ರಾಣಿಗಳಿಂದ ಮನುಷ್ಯರಿಗೆ ಈ ಸೋಂಕು ಹರಡುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂಥದ್ದೇ ಪ್ರಕರಣ ಹಾಂಕಾಂಗ್‌ನಿಂದಲೂ ವರದಿಯಾಗಿದ್ದು, ಕೊರೋನ ಸೋಂಕಿತರ ಜತೆಗಿದ್ದ 17 ಸಾಕುನಾಯಿ ಮತ್ತು 8 ಬೆಕ್ಕುಗಳ ಆರೋಗ್ಯ ತಪಾಸಣೆ ನಡೆಸಿದಾಗ ಎರಡು ನಾಯಿಗಳಿಗೆ ಸೋಂಕು ದೃಢಪಟ್ಟಿತ್ತು. ಬೆಲ್ಜಿಯಂನಲ್ಲಿ ಲೀಗ್ ಪಶುವೈದ್ಯ ಔಷಧ ವಿಭಾಗದ ಸಂಶೋಧಕರು ನಡೆಸಿದ ಸಂಶೋಧನೆಯಿಂದ ಬೆಕ್ಕಿಗೆ ಸೋಂಕು ತಗುಲಿರುವುದು ಕಂಡುಬಂದಿದೆ.

ಇದು ತೀರಾ ಅಪರೂಪದ ಪ್ರಕರಣ; ಸೋಂಕಿತ ವ್ಯಕ್ತಿ ಮತ್ತು ಸಾಕುಪ್ರಾಣಿ ನಡುವೆ ನಿಕಟ ಸಂಪರ್ಕ ಇದ್ದಾಗ ಇಂಥ ಸಾಧ್ಯತೆ ಇದೆ ಎಂದು ವೈದ್ಯ ಇಮ್ಯಾನ್ಯುಯಲ್ ಆ್ಯಂಡ್ರ್ಯೂ ಹೇಳಿದ್ದಾರೆ. ಮನುಷ್ಯನಿಂದ ಪ್ರಾಣಿಗಳಿಗೆ ವೈರಸ್ ಹರಡಬಲ್ಲದು. ಆದರೆ ಪ್ರಾಣಿಗಳು ಸಮಾಜದಲ್ಲಿ ಇದರ ವಾಹಕವಾಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಂಕಾಂಗ್‌ನ ನಾಯಿಗಳಲ್ಲಿ ಯಾವುದೇ ರೋಗಲಕ್ಷಣ ಕಂಡುಬರಲಿಲ್ಲ. ಆದರೆ ಬೆಲ್ಜಿಯಂ ಪ್ರಕರಣದಲ್ಲಿ ಬೆಕ್ಕಿಗೆ ಉಸಿರಾಟದ ತೊಂದರೆ ಹಾಗೂ ಜೀರ್ಣಕ್ಕೆ ಸಂಬಂಧಿಸಿದ ತೊಂದರೆ ಕಂಡುಬಂದಿದೆ ಎಂದು ಬೆಲ್ಜಿಯಂನ ಆಹಾರ ಸುರಕ್ಷಾ ಏಜೆನ್ಸಿ ಎಎಫ್‌ಎಸ್‌ಸಿಎ ಹೇಳಿಕೆ ನೀಡಿದೆ. ಆದರೆ ಸಾಕುಪ್ರಾಣಿಗಳು ಮನುಷ್ಯರಿಗೆ ಅಥವಾ ಇತರ ಸಾಕುಪ್ರಾಣಿಗಳಿಗೆ ಸೋಂಕು ಹರಡಿದ್ದಕ್ಕೆ ಯಾವುದೇ ಪುರಾವೆ ಇದುವರೆಗೆ ಸಿಕ್ಕಿಲ್ಲ ಎಂದು ಸಾರ್ವಜನಿಕ ಆರೋಗ್ಯ ವಿಭಾಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News