ಹೊಸದಿಲ್ಲಿಯಿಂದ ಕಾಲ್ನಡಿಗೆಯಲ್ಲೇ ಗುಳೆ ಹೋಗುತ್ತಿರುವ ವಲಸೆ ಕಾರ್ಮಿಕರು

Update: 2020-03-28 18:16 GMT

ಹೊಸದಿಲ್ಲಿ,ಮಾ.28: ಕೊರೋನವೈರಸ್ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರಕಾರ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡಿರುವ ಕಾರ್ಮಿಕರು ಹೊಸದಿಲ್ಲಿ ಸೇರಿದಂತೆ ದೇಶದ ವಿವಿಧ ನಗರಗಳಿಂದ ಹಸಿದ ಹೊಟ್ಟೆಯಲ್ಲೇ ತಮ್ಮ ಊರುಗಳಿಗೆ ವಾಪಾಸಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ವಲಸಿಗ ಕಾರ್ಮಿಕರ ಸಮಸ್ಯೆಯು ಇನ್ನೊಂದು ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಯಿದೆ.

 ಹೊಸದಿಲ್ಲಿಯಿಂದ ಸಾವಿರಾರು ವಲಸಿಗರು ಉತ್ತರಪ್ರದೇಶ, ಬಿಹಾರಗಳಲ್ಲಿರುವ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದಾರೆ. ಇನ್ನು ಕೆಲವರು ಉತ್ತರಪ್ರದೇಶದ ಗಾಝಿಯಾಬಾದ್‌ನಿಂದ ಸರಕಾರಿ ಹಾಗೂ ಖಾಸಗಿ ಬಸ್‌ಗಳನ್ನೇರಿ, ತಮ್ಮ ಹಳ್ಳಿಗಳನ್ನು ಸೇರುತ್ತಿದ್ದಾರೆ.

 ಲಾಕ್‌ಡೌನ್ ವೇಳೆ ಖಾಸಗಿ ಬಸ್‌ಗಳ ಒಡಾಟವನ್ನು ನಿಷೇಧಿಸಲಾಗಿದ್ದರೂ, ಅವು ಪ್ರಯಾಣಿಕರನ್ನು ಕೊಂಡೊಯ್ಯಲು ಅಧಿಕ ಹಣವನ್ನು ವಸೂಲು ಮಾಡುತ್ತಿವೆಯೆಂದು ಈ ಬಡಕಾರ್ಮಿಕರು ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ.

ಖಾಸಗಿ ಬಸ್‌ಗಳು ಈ ಕಾರ್ಮಿಕರನ್ನು ಉತ್ತರಪ್ರದೇಶದಲ್ಲಿರುವ ಊರಿಗೆ ಕೊಂಡೊಯ್ಯಲು 1 ಸಾವಿರ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿವೆಯೆಂಬ ಆರೋಪಗಳು ಕೇಳಿಬರುತ್ತಿವೆ.

 ನಗರಗಳಿಂದ ಗುಳೇ ಹೋಗುತ್ತಿರುವ ಭಾರೀ ಸಂಖ್ಯೆಯ ವಲಸಿಗರಿಗೆ ಊರು ಸೇರುವಂತೆ ಮಾಡಲು ಉ.ಪ್ರ.ಸರಕಾರವು ಲಾಕ್‌ಡೌನ್ ನಡುವೆಯೂ ಸರಕಾರಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ ಅವು ಅಗತ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಲಭ್ಯವಿರುವುದು ಸಮಸ್ಯೆಯನ್ನು ಬಿಗಡಾಯಿಸಿದೆ.

 ಹೇಗಾದರೂ ಮಾಡಿ ತಮ್ಮ ಊರನ್ನು ಸೇರಲು ಪರದಾಡುತ್ತಿರುವ ಈ ಕಾರ್ಮಿಕರು, ಯಾವುದೇ ಸರಕಾರವು ಈವರೆಗೆ ತಮ್ಮ ನೆರವಿಗೆ ಬಂದಿಲ್ಲವೆಂದು ರೋದಿಸುತ್ತಾರೆ.

ಈ 21 ದಿನಗಳ ಲಾಕ್‌ಡೌನ್ ವಲಸಿಗ ಕೃಷಿ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ದಿಕ್ಕು ತೋಚದೆ ಅವರು ಅರೆಹೊಟ್ಟೆಯಲ್ಲಿ ಊರು ಸೇರುತ್ತಿದ್ದಾರೆ.

ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯವು ವಲಸಿಗ ಕಾರ್ಮಿಕರನ್ನು ತಡೆಯುವಂತೆ ರಾಜ್ಯ ಸರಕಾರಕ್ಕೆ ಸೂಚನಾಪತ್ರವನ್ನು ಹೊರಡಿಸಿದೆ.

 ಕೊರೋನಾ ವೈರಸ್ ಸೋಂಕು ಹಳ್ಳಿಗಳಿಗೂ ಹರಡುವುದನ್ನು ತಪ್ಪಿಸುವುದಕ್ಕಾಗಿ ವಲಸಿಗ ಕೃಷಿ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಸಾಮೂಹಿಕ ಪಲಾಯನವನ್ನು ತಡೆಯಬೇಕೆಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿದೆ ಎಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ.

 ಪಡಿತರ ವ್ಯವಸ್ಥೆಯ ಮೂಲಕ ಅಗತ್ಯ ಸಾಮಗ್ರಿಗಳು ಹಾಗೂ ಆಹಾರಧಾನ್ಯಗಳ ವಿತರಣೆ ಸೇರಿದಂತೆ ಸರಕಾರವು ಕೈಗೊಂಡಿರುವ ಕ್ರಮಗಳ ಬಗ್ಗೆ ದುರ್ಬಲ ವರ್ಗಗಳಲ್ಲಿ ಅರಿವು ಮೂಡಿಸುವಂತೆ ಸಚಿವಾಲಯವು ರಾಜ್ಯಗಳಿಗೆ ಸಲಹೆ ನೀಡಿದೆ.

 ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲಾಕ್‌ಡೌನ್‌ನಿಂದಾಗಿ ಅತಂತ್ರರಾಗಿರುವ ವಲಸಿಗ ಕಾರ್ಮಿಕರಿಗೆ, ಕೃಷಿಕರಿಗೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಲು 1.70 ಲಕ್ಷ ರೂ.ಗಳ ಪ್ಯಾಕೇಜ್ ಘೋಷಿಸಿದ್ದರು. ಇದರಿಂದಾಗಿ ಲಾಕ್‌ಡೌನ್ ಮೂರು ತಿಂಗಳವರೆಗೂ ವಿಸ್ತರಿಸುವ ಸಾಧ್ಯತೆಯಿದ್ದು, ತಾವು ಇನ್ನಷ್ಟು ಸಂಕಷ್ಟಕ್ಕೊಳಗಾಗಬೇಕಾದೀತೆಂದು ವಲಸಿಗ ಕಾರ್ಮಿಕರು ಭೀತಿಗೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News