“ಮೋದೀಜಿ, ಒಳ್ಳೆಯ ಮಾಸ್ಕ್ ಕೊಟ್ಟು ನಮ್ಮನ್ನು ರಕ್ಷಿಸಿ”: ಬಿಹಾರದ ನರ್ಸ್ ಮನವಿ

Update: 2020-03-30 17:42 GMT

ಪಾಟ್ನ (ಬಿಹಾರ), ಮಾ. 30: "ನನ್ನನ್ನು ಮತ್ತು ನನ್ನ ಆಸ್ಪತ್ರೆಯ ಸಿಬ್ಬಂದಿಯನ್ನು ಸಂಭಾವ್ಯ ಸಾವಿನಿಂದ ಪಾರು ಮಾಡಿ" ಎಂದು ಬಿಹಾರ ರಾಜಧಾನಿ ಪಾಟ್ನಾದಲ್ಲಿರುವ ಸರಕಾರಿ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನರ್ಸ್ ಜೂಲೀ ಕುಮಾರಿ ಸಾಮಾಜಿಕ ಮಾಧ್ಯಮದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

ಜೂಲೀ ಮತ್ತು ಅವರ ಸಹೋದ್ಯೋಗಿಗಳು ಆಸ್ಪತ್ರೆಯ ನೋವೆಲ್-ಕೊರೋನವೈರಸ್ ಸೋಂಕುಪೀಡಿತ ರೋಗಿಗಳ ಪ್ರತ್ಯೇಕ ನಿಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಮೂಲಭೂತ ಸುರಕ್ಷಿತ ಕಿಟ್‌ಗಳು, ಎನ್95 ಮಾಸ್ಕ್‌ಗಳು ಮತ್ತು ಆಲ್ಕೊಹಾಲ್ ಮಿಶ್ರಿತ ಸ್ವಚ್ಛತಾ ದ್ರಾವಣಗಳನ್ನು ಒದಗಿಸಲಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

‘‘ದಯವಿಟ್ಟು ಮೋದೀಜಿ, ನಮ್ಮ ಮನವಿಯನ್ನು ಆಲಿಸಿ. ನಾವು ಸಾಯುತ್ತಿದ್ದೇವೆ. ನೀವು ನಮಗೆ ಯಾವ ರೀತಿಯ ಕಿಟ್ ಕೊಟ್ಟಿದ್ದೀರಿ? ಇದರಿಂದ ನಾವು ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡುವುದು? ನಾವು ಬದುಕು ಉಳಿಯುವುದಿಲ್ಲ’’ ಎಂದು ಜೂಲೀ ಆಸ್ಪತ್ರೆಯ ಪ್ರತ್ಯೇಕ ನಿಗಾ ಘಟಕದಲ್ಲಿ ಮಾಡಿದ ವೀಡಿಯೊ ಸಂದೇಶವೊಂದರಲ್ಲಿ ಹೇಳಿದ್ದಾರೆ.

ವೈಯಕ್ತಿಕ ರಕ್ಷಣಾ ಉಪಕರಣಗಳು ಮತ್ತು ಎನ್95 ಮುಖಕವಚಗಳನ್ನು ತಕ್ಷಣ ಒದಗಿಸುವ ಮೂಲಕ ನನ್ನನ್ನು ಮತ್ತು ನನ್ನ ಸಹೋದ್ಯೋಗಿಗಳನ್ನು ರಕ್ಷಿಸಬೇಕು ಎಂದು ಕೂಡಿದ ವೀಡಿಯೊದಲ್ಲಿ ಅವರು ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಮನವಿ ಮಾಡಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ತಮಗೆ ನೀಡಿರುವ ಸಾಮಾನ್ಯ ಸುರಕ್ಷತಾ ಕಿಟ್ (ಶಸ್ತ್ರಚಿಕಿತ್ಸೆಗಳಿಗಾಗಿ) ಮತ್ತು ಎಚ್‌ಐವಿ ಕಿಟ್‌ಗಳ ಗುಣಮಟ್ಟವನ್ನೂ ಅವರು ಪ್ರಶ್ನಿಸಿದ್ದಾರೆ.

ಕೃಪೆ: Rediff.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News