ಬ್ಯಾಂಕ್ ಸಾಲದ ಕಂತು ಬಾಕಿಯಿಟ್ಟರೆ ಬಡ್ಡಿ ಕಟ್ಟಲು ಸಿದ್ಧರಾಗಿ!

Update: 2020-03-30 17:58 GMT

ಹೊಸದಿಲ್ಲಿ, ಮಾ. 30: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಘೋಷಿಸಿದಂತೆ, ಮುಂದಿನ ಮೂರು ತಿಂಗಳು ಗೃಹ ಸಾಲ ಮತ್ತು ವಾಹನ ಸಾಲಗಳ ಕಂತುಗಳನ್ನು ಕಟ್ಟದಿರಲು ನೀವು ನಿರ್ಧರಿಸಿದರೆ, ನಿಮ್ಮ ಬಾಕಿಯಿರುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಪಾವತಿಸಲು ನೀವು ಸಿದ್ಧರಾಗಿರಬೇಕಾಗುತ್ತದೆ.

ಸಾಲ ಮರುಪಾವತಿ ಮಾಡದ ಮೂರು ತಿಂಗಳ ಅವಧಿಗೂ ಬ್ಯಾಂಕ್ಗಳು ಸರಳ ಬಡ್ಡಿ ಲೆಕ್ಕಹಾಕುತ್ತವೆ ಎಂದು ವಿಶ್ಲೇಷಕರು ಮತ್ತು ಪರಿಣತರು ಹೇಳುತ್ತಾರೆ. ಈ ಬಡ್ಡಿಯನ್ನು ಮೂರು ತಿಂಗಳ ಸಾಲ ವಸೂಲು ತಡೆ ಅವಧಿ ಮುಗಿದ ಬಳಿಕ ನಿಮ್ಮ ಕಂತಿಗೆ ಸೇರಿಸಲಾಗುತ್ತದೆ. ಆಗ ನಿಮ್ಮ ತಿಂಗಳ ಕಂತಿನ ಮೊತ್ತ ಹೆಚ್ಚಾಗುತ್ತದೆ.

 ಉದಾಹರಣೆಗೆ; ನೀವು ಪ್ರತಿ ತಿಂಗಳು 1,000 ರೂ. ಕಂತು ಕಟ್ಟುತ್ತಿದ್ದೀರಿ ಎಂದು ಭಾವಿಸೋಣ. ಬ್ಯಾಂಕ್ ಹೊರಬಾಕಿಯ ಮೇಲೆ 10 ಶೇಕಡದಂತೆ ಬಡ್ಡಿ ವಸೂಲು ಮಾಡುತ್ತದೆ ಎಂದಿರಲಿ. ಆಗ ಬಾಕಿಯಾದ ಮೂರು ತಿಂಗಳ ಕಂತುಗಳಿಗೆ, ಪ್ರತಿ ಕಂತಿಗೆ ಹೆಚ್ಚುವರಿ 25 ರೂಪಾಯಿಯನ್ನು ನೀವು ಪಾವತಿಸಬೇಕಾಗುತ್ತದೆ. ಈ ಹೆಚ್ಚುವರಿ ಬಡ್ಡಿಯು ನಿಮ್ಮ ಮುಂದಿನ ಎಲ್ಲ ಕಂತುಗಳಲ್ಲಿ ಹಂಚಿ ಹೋಗಬಹುದು ಅಥವಾ ನಿಮ್ಮ ಈಗಿನ ಕಂತು ಮೊತ್ತವನ್ನೇ ಮುಂದುವರಿಸಿ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬಹುದಾಗಿದೆ.

 ‘‘ಗ್ರಾಹಕರು ಈ ಹೆಚ್ಚುವರಿ ಬಡ್ಡಿಯನ್ನು ಏಕಗಂಟಿನಲ್ಲಿ ಪಾವತಿಸಬೇಕೋ ಅಥವಾ ಅದನ್ನು ಹೆಚ್ಚುವರಿ ಕಂತಾಗಿ ಪಾವತಿಸಲು ಅವರಿಗೆ ಅವಕಾಶ ನೀಡಲಾಗುತ್ತಿದೆಯೋ ಎನ್ನುವುದನ್ನು ಬ್ಯಾಂಕ್ಗಳು ಸ್ಪಷ್ಟಪಡಿಸಬೇಕಾಗಿದೆ’’ ಎಂದು ಹಣಕಾಸು ಕ್ಷೇತ್ರದ ಪರಿಣತರೊಬ್ಬರು ಹೇಳುತ್ತಾರೆ.

ಎಲ್ಲ ಸಾಲಗಳ ಕಂತು ಪಾವತಿಗೆ ಮಾರ್ಚ್ 1ರಿಂದ ಮೇ 31ರವರೆಗೆ ವಿನಾಯಿತಿ ನೀಡಲಾಗಿದೆ ಎಂದು ಭಾರತೀಯ ರಿಸವರ್ಸ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಘೋಷಿಸಿದ್ದಾರೆ.

ಕೃಪೆ: Livemint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News