ಅಮೆರಿಕದಲ್ಲಿ 2.4 ಲಕ್ಷ ಮಂದಿವರೆಗೂ ಕೊರೋನಗೆ ಬಲಿ?: ಶ್ವೇತಭವನ ಆತಂಕ

Update: 2020-04-01 04:03 GMT

ವಾಷಿಂಗ್ಟನ್, ಎ.1: ಕೊರೋನ ವೈರಸ್ ದಾಳಿಯಿಂದ ಜರ್ಜರಿತವಾಗಿರುವ ಅಮೆರಿಕಕ್ಕೆ ಮುಂದಿನ ಎರಡು ವಾರ ಇನ್ನಷ್ಟು ನೋವುದಾಯಕವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಗರಿಷ್ಠ 2.40 ಲಕ್ಷ ಅಮೆರಿಕನ್ನರು ಈ ಮಹಾಮಾರಿಗೆ ಬಲಿಯಾಗುವ ಅಪಾಯವಿದೆ ಎಂದು ಶ್ವೇತಭವನ ಎಚ್ಚರಿಕೆ ನೀಡಿದೆ.

ಇದು ತೀರಾ, ತೀರಾ ಸೋವಿನ ಸಂಗತಿಯಾಗಲಿದೆ. ಮುಂದಿನ ಎರಡು ವಾರಗಳು ತೀರಾ ತೀರಾ ನೋವುದಾಯಕ ಎಂದು ಟ್ರಂಪ್ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಸಾಂಕ್ರಾಮಿಕವನ್ನು ಪ್ಲೇಗ್‌ ಎಂದು ಟ್ರಂಪ್ ಬಣ್ಣಿಸಿದರು. ಇನ್ನಷ್ಟು ಕಷ್ಟದ ದಿನಗಳಿಗೆ ಅಮೆರಿಕನ್ನರು ಸಜ್ಜಾಗಬೇಕು ಎಂದು ಅವರು ಮನವಿ ಮಾಡಿದರು.

ಈ ವೈರಸ್ ಹರಡುವುದನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಯುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಅಮೆರಿಕದಲ್ಲಿ ನಾಲ್ಕನೇ ಮೂರರಷ್ಟು ಮಂದಿ ಒಂದಲ್ಲ ಒಂದು ಬಗೆಯ ಲಾಕ್‌ಡೌನ್‌ನಲ್ಲಿ ಸಿಲುಕಿದ್ದಾರೆ.

ಇದಕ್ಕೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇಲ್ಲ. ನಮ್ಮ ನಡವಳಿಕೆಯೊಂದೇ ಇದಕ್ಕೆ ಮದ್ದು. ಮುಂದಿನ 30 ದಿನಗಳಲ್ಲಿ ನಮ್ಮ ಪ್ರತಿಯೊಬ್ಬರ ನಡವಳಿಕೆಯೂ ಬದಲಾಗಲಿದೆ ಎಂದು ಶ್ವೇತಭವನದ ಕೊರೋನ ವೈರಸ್ ಸ್ಪಂದನೆ ವಿಭಾಗದ ಸಂಯೋಜಕ ದೆಬ್ರೋಹ್ ಬ್ರಿಕ್ಸ್ ಹೇಳಿದರು.

ಸದ್ಯ ಅಮೆರಿಕ ಕೈಗೊಂಡಿರುವ ಪರಿಹಾರ ಕ್ರಮಗಳ ಬಳಿಕವೂ ದೇಶದಲ್ಲಿ ಒಂದು ಲಕ್ಷದಿಂದ 2.4 ಲಕ್ಷ ಮಂದಿಯವರೆಗೆ ಜೀವ ಕಳೆದುಕೊಳ್ಳುವ ಭೀತಿ ಇದೆ ಎಂದು ಅವರು ಅಂಕಿಅಂಶಗಳ ಆಧಾರದಲ್ಲಿ ಅಂದಾಜಿಸಿದರು. ಪರಿಹಾರ ಕ್ರಮಗಳು ನಿಜಕ್ಕೂ ಅದ್ಭುತ ಯಶಸ್ಸು ಕಂಡಿವೆ. ವೈದ್ಯಕೀಯ ತಂಡ ಈ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಹಗಲು- ರಾತ್ರಿ ಶ್ರಮಿಸುತ್ತಿದೆ ಎಂದು ಸೋಂಕು ರೋಗ ತಜ್ಞ ಅಂಥೋನಿ ಫೌಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News