ಅಮೆರಿಕ: ಒಂದೇ ದಿನ 865 ಸಾವು

Update: 2020-04-01 17:22 GMT

ವಾಶಿಂಗ್ಟನ್, ಎ. 1: ಅಮೆರಿಕದಲ್ಲಿ ಕೊರೋನವೈರಸ್‌ನಿಂದಾಗಿ ಸಂಭವಿಸಿರುವ ಸಾವುಗಳ ಸಂಖ್ಯೆ 4,000ವನ್ನು ದಾಟಿದೆ. ಇದು ಸುಮಾರು 20 ವರ್ಷಗಳ ಹಿಂದೆ ನಡೆದ 9/11 ಭಯೋತ್ಪಾದಕ ದಾಳಿಯ ಸಾವಿನ ಸಂಖ್ಯೆಗಿಂತಲೂ ಅಧಿಕವಾಗಿದೆ.

ಅಮೆರಿಕದಲ್ಲಿ ಮಂಗಳವಾರ ಒಂದೇ ದಿನ 865 ಮಂದಿ ಕೊರೋನವೈರಸ್‌ಗೆ ಬಲಿಯಾದರು.

ಈ ನಡುವೆ, ಭೀಕರ ಸಾಂಕ್ರಾಮಿಕವು ಒಂದು ಲಕ್ಷದಿಂದ 2 ಲಕ್ಷದವರೆಗಿನ ಅಮೆರಿಕನ್ನರನ್ನು ಬಲಿ ತೆಗೆದುಕೊಳ್ಳಬಹುದು ಎಂದು ಆರೋಗ್ಯ ಪರಣತರು ಎಚ್ಚರಿಸುತ್ತಾರೆ.

ಸುಮಾರು 1.90 ಲಕ್ಷ ಜನರು ಅಮೆರಿಕದಲ್ಲಿ ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ.

2001ರ ಸೆಪ್ಟಂಬರ್ 11ರಂದು ಅಲ್-ಖಾಯಿದ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಸುಮಾರು 3,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೋನವೈರಸ್‌ನಿಂದಾಗಿ ಚೀನಾದಲ್ಲಿ ಮೃತಪಟ್ಟವರಿಗಿಂತ ಹೆಚ್ಚು ಮಂದಿ ಈಗ ಅಮೆರಿಕದಲ್ಲಿ ಮೃತಪಟ್ಟಿದ್ದಾರೆ. ಕೊರೋನವೈರಸ್ ಕೇಂದ್ರಬಿಂದು ಚೀನಾದಲ್ಲಿ 3,310 ಮಂದಿ ಸಾವನ್ನಪ್ಪಿದ್ದಾರೆ.

ಸಾವು 2 ಲಕ್ಷದವರೆಗೆ?

ನೂತನ-ಕೊರೋನವೈರಸ್‌ನಿಂದಾಗಿ ಅಮೆರಿಕದಲ್ಲಿ ಒಂದು ಲಕ್ಷದಿಂದ 2 ಲಕ್ಷ ಜನರು ಪ್ರಾಣ ಕಳೆದುಕೊಳ್ಳಬಹುದು ಎಂದು ಕೊರೋನವೈರಸ್ ಕುರಿತ ಶ್ವೇತಭವನ ಕಾರ್ಯಪಡೆ ಸದಸ್ಯೆ ಡೆಬೋರಾ ಬರ್ಕ್ಸ್ ಹೇಳಿದ್ದಾರೆ.

ಈ ಸಾವಿನ ಅಂದಾಜು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಈಗಿರುವಂತೆ ಎಪ್ರಿಲ್ 30ರವರೆಗೆ ಮುಂದುವರಿಸಿದರೆ ಮಾತ್ರ.

ಒಂದು ವೇಳೆ, ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸಾವಿನ ಸಂಖ್ಯೆಯು 15 ಲಕ್ಷದಿಂದ 22 ಲಕ್ಷದವರೆಗೆ ಇರಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News