ಚೀನಾದ ಕೊರೋನ ಅಂಕಿ-ಸಂಖ್ಯೆ ಸುಳ್ಳು: ಟ್ರಂಪ್

Update: 2020-04-02 16:53 GMT

ವಾಶಿಂಗ್ಟನ್, ಎ. 2: ಕೊರೋನವೈರಸ್‌ಗೆ ಸಂಬಂಧಿಸಿದ ಚೀನಾದ ಅಧಿಕೃತ ಅಂಕಿ-ಸಂಖ್ಯೆಗಳ ನಿಖರತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಂಶಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಸಂಸದರು ಗುಪ್ತಚರ ವರದಿಯೊಂದನ್ನು ಉಲ್ಲೇಖಿಸಿ, ಚೀನಾ ನಿಜವಾದ ಅಂಕಿ-ಸಂಖ್ಯೆಗಳನ್ನು ಮುಚ್ಚಿಡುತ್ತಿದೆ ಎಂದು ಆರೋಪಿಸಿದ ಬಳಿಕ ಟ್ರಂಪ್ ಕೂಡ ಈ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

‘‘ಅವರು ನಿಖರ ಮಾಹಿತಿಗಳನ್ನು ನೀಡುತ್ತಿದ್ದಾರೆಯೇ ಎನ್ನುವುದು ನಮಗೆ ಹೇಗೆ ಗೊತ್ತಾಗಬೇಕು’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಟ್ರಂಪ್ ಪ್ರಶ್ನಿಸಿದರು. ‘‘ಅವರ ಅಂಕಿ-ಸಂಖ್ಯೆಯು ಸ್ವಲ್ಪ ಹಗುರವಾಗಿರುವಂತೆ ಕಾಣುತ್ತದೆ’’ ಎಂದರು.

ಕೊರೋನವೈರಸ್ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆಗೆ ಸಂಬಂಧಿಸಿ ಚೀನಾವು ಉದ್ದೇಶಪೂರ್ವಕವಾಗಿ ಅಂತರ್‌ರಾಷ್ಟ್ರೀಯ ಸಮುದಾಯವನ್ನು ತಪ್ಪುದಾರಿಗೆಳೆದಿರುವಂತೆ ಕಾಣುತ್ತಿದೆ ಎಂಬುದಾಗಿ ಸಂಸತ್ತು ಕಾಂಗ್ರೆಸ್‌ನಲ್ಲಿರುವ ರಿಪಬ್ಲಿಕನ್ ಸಂಸದರು ‘ಬ್ಲೂಮ್‌ಬರ್ಗ್’ ವರದಿಯೊಂದನ್ನು ಉಲ್ಲೇಖಿಸಿ ಹೇಳಿದ್ದಾರೆ.

ಕೊರೋನವೈರಸ್ ಸಾವು-ಸೋಂಕುಗಳನ್ನು ಚೀನಾವು ವರದಿ ಮಾಡುತ್ತಿರುವ ರೀತಿಯು ಉದ್ದೇಶಪೂರ್ವಕವಾಗಿ ಅಸಂಪೂರ್ಣವಾಗಿದೆ ಹಾಗೂ ಚೀನಾ ಒದಗಿಸಿರುವ ಅಂಕಿ-ಸಂಖ್ಯೆಗಳು ನಕಲಿಯಾಗಿವೆ ಎಂದು ಗುಪ್ತಚರ ಅಧಿಕಾರಿಗಳು ಹೇಳುತ್ತಾರೆ ಎಂದು ‘ಬ್ಲೂಮ್‌ಬರ್ಗ್’ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಬುಧವಾರದ ವೇಳೆಗೆ, ಕೊರೋನವೈರಸ್‌ನಿಂದಾಗಿ 3,316 ಸಾವುಗಳು ಸಂಭವಿಸಿವೆ ಹಾಗೂ 82,361 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಚೀನಾ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News