ನಿಝಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ್ದ ದಿಲ್ಲಿಯ ಇಬ್ಬರು ಸೋಂಕಿಗೆ ಬಲಿ

Update: 2020-04-02 17:42 GMT

ಹೊಸದಿಲ್ಲಿ, ಎ.2: ಕಳೆದ ತಿಂಗಳು ಹೊಸದಿಲ್ಲಿಯಲ್ಲ ನಡೆದ ತಬ್ಲೀಗಿ ಜಮಾತ್‌ನ ನಿಝಾಮುದ್ದೀನ್ ಮರ್ಕಝ್‌ನ ಸಮಾವೇಶದಲ್ಲಿ ಭಾಗವಹಿಸಿದ್ದ ಇಬ್ಬರು ಬುಧವಾರ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ತಿಳಿಸಿದ್ದಾರೆ.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಲ್ಲಾ 2346 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ ಎಂದವರು ತಿಳಿಸಿದರು. ಆದರೆ ಈಗ ಲಭ್ಯವಿರುವ ದತ್ತಾಂಶಗಳ ಪ್ರಕಾರ ದಿಲ್ಲಿಯಲ್ಲಿ ಈ ಮಾರಕ ಸೋಂಕು ರೋಗವು ಸಾಮುದಾಯಿಕವಾಗಿ ಹರಡುತ್ತಿರುವ ಬಗ್ಗೆ ಪುರಾವೆಗಳು ಲಭ್ಯವಾಗಿಲ್ಲವೆಂದು ಅವರು ಹೇಳಿದ್ದಾರೆ.

 ‘‘ದಿಲ್ಲಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ತುಸು ಏರಿಕೆಯಾಗಿದೆ. ದಿಲ್ಲಿಯಲ್ಲಿ ವರದಿಯಾದ 219 ಪ್ರಕರಣಗಳ ಪೈಕಿ 51 ವಿದೇಶ ಪ್ರಯಾಣದಿಂದ ಉಂಟಾಗಿರುವುದಾಗಿವೆ. ಇನ್ನು 108 ಪ್ರಕರಣಗಳು ಮರ್ಕಝ್‌ನಿಂದ ವರದಿಯಾಗಿವೆ. ಇತರ 29 ಮಂದಿ ವಿದೇಶದಿಂದ ವಾಪಾಸಾದವರ ನಿಕಟ ಬಂಧುಗಳಾಗಿದ್ದಾರೆ. ಒಟ್ಟಾರೆ ದಿಲ್ಲಿಯಲ್ಲಿ ಈ ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದಾರೆ’’ ಎಂದು ದಿಲ್ಲಿ ಮುಖ್ಯಮಂತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News