ತಬ್ಲೀಗಿ ಜಮಾಅತ್ ಪ್ರಕರಣ: 9,000 ಜನರಿಗೆ ಕ್ವಾರಂಟೈನ್ ವ್ಯವಸ್ಥೆ

Update: 2020-04-02 17:48 GMT

ಹೊಸದಿಲ್ಲಿ, ಎ.2: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ತಬ್ಲೀಗಿ ಜಮಾಅತ್ ಸದಸ್ಯರು ಹಾಗೂ ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 9,000 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಗೃಹ ಸಚಿವಾಲದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಕೇಂದ್ರದ ಗೃಹ ಇಲಾಖೆಯು ರಾಜ್ಯ ಸರಕಾರಗಳ ನೆರವಿನಿಂದ ನಡೆಸಿದ ಭಾರೀ ಪ್ರಯತ್ನದ ಫಲವಾಗಿ ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ತಬ್ಲೀಗಿ ಜಮಾಅತ್ ಸದಸ್ಯರನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಇವರಲ್ಲಿ ದಿಲ್ಲಿಯ ತಬ್ಲೀಗಿ ಜಮಾಅತ್ ಸದಸ್ಯರ ಸಂಖ್ಯೆ 2,000 ಆಗಿದ್ದು 1,804 ಸದಸ್ಯರನ್ನು ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸೋಂಕಿನ ಲಕ್ಷಣ ಇರುವ 334 ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ನಿಝಾಮುದ್ದೀನ್‌ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ವಿವಿಧ ಮಸೀದಿಗಳಲ್ಲಿ ತಂಗಿದ್ದ 275 ವಿದೇಶಿ ಪ್ರಜೆಗಳನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಸ್ಪೆಷಲ್ ಬ್ರಾಂಚ್‌ನ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ನಿಝಾಮುದ್ದೀನ್‌ನಲ್ಲಿ ಕಳೆದ ತಿಂಗಳು ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಬಳಿಕ ನೇಪಾಳ ಗಡಿಭಾಗದಲ್ಲಿರುವ ಮಸೀದಿಯಲ್ಲಿ ಅವಿತು ಕುಳಿತಿದ್ದ 9 ಧರ್ಮಗುರುಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News