ಕೇಂದ್ರದ ವಿಳಂಬ ನೀತಿಯಿಂದ 5 ವಾರ ವ್ಯರ್ಥ: ವೈದ್ಯಕೀಯ ಸುರಕ್ಷತಾ ಕಿಟ್ ತಯಾರಕರು

Update: 2020-04-03 17:07 GMT

ಹೊಸದಿಲ್ಲಿ, ಎ.3: ದೇಶದಲ್ಲಿ ಕೊರೋನ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವಂತೆಯೇ ಸಾಕಷ್ಟು ಸುರಕ್ಷತಾ ಉಪಕರಣಗಳು (ಪಿಪಿಇ ಕಿಟ್ ಗಳು) ಪೂರೈಕೆಯಾಗುತ್ತಿಲ್ಲ ಎಂದು ಕೊರೋನ ವಿರುದ್ಧ ಹೋರಾಟದ ಮುಂಚೂಣಿ ಯೋಧರಾದ ವೈದ್ಯಕೀಯ ಸಿಬ್ಬಂದಿಗಳು ದೂರುತ್ತಿದ್ದಾರೆ . ಕೆಲವೆಡೆ ವೈದ್ಯರು ರೈನ್ ಕೋಟ್ , ಹೆಲ್ಮೆಟ್ ಇತ್ಯಾದಿಗಳನ್ನು ಬಳಸುತ್ತಿರುವ ವರದಿಗಳು ಬರುತ್ತಿವೆ.  ಈ ನಡುವೆ ಕೊರೋನ ವಿರುದ್ಧದ ಹೋರಾಟಕ್ಕೆ ನಿರ್ಣಾಯಕವಾಗಿರುವ  ಪಿಪಿಇ ಕಿಟ್ ಗಳ ತಯಾರಿ ಕುರಿತು ಕೇಂದ್ರ ಸರಕಾರ ವಿಳಂಬ ನೀತಿ ಅನುಸರಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಪಿಪಿಇ ಕಿಟ್ ಗಳ ತಯಾರಿಕೆಯಲ್ಲಿ ಕೇಂದ್ರದ ಜೊತೆ ನಿಕಟ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿರುವ ಪ್ರೆವೆಂಟಿವ್ ವೇರ್ ಮ್ಯಾನುಫ್ಯಾಚ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸಂಜೀವ್ ಅವರು ಈ ಬಗ್ಗೆ thequint.com ಜೊತೆ ಮಾತನಾಡಿ  "ಪಿಪಿಇ ಕಿಟ್ ಗಳ ತಯಾರಿಕೆಯಲ್ಲಿ ಮಹತ್ವದ ಐದು ವಾರಗಳನ್ನು ನಾವು ಕಳೆದುಕೊಂಡಿದ್ದೇವೆ. ನಮಗೆ ಬೇಕಾದ ಅಳತೆ ಮತ್ತು ಸ್ಟಾಕ್ ಇಟ್ಟುಕೊಳ್ಳಬೇಕಾದ ಪ್ರಮಾಣದ ವಿವರವನ್ನು ಸರಿಯಾದ ಸಮಯದಲ್ಲಿ ಕೊಟ್ಟಿದ್ದರೆ ನಾವು ಅದಕ್ಕೆ ತಕ್ಕಂತೆ ಗುರಿ ನಿಗದಿ ಮಾಡಿ ತಯಾರಿ ಮಾಡಲು ಅನುಕೂಲವಾಗುತ್ತಿತ್ತು" ಎಂದು ಹೇಳಿದ್ದಾರೆ.

ಸಂಜೀವ್ ಸಹಿತ ಇತರ ಪಿಪಿಇ ಕಿಟ್ ತಯಾರಕರು ಫೆಬ್ರವರಿಯಲ್ಲೇ ಕೇಂದ್ರ ಸರಕಾರವನ್ನು ಸಂಪರ್ಕಿಸಿ ಸಾಕಷ್ಟು ಕಿಟ್ ಗಳನ್ನು ದಾಸ್ತಾನು ಇಟ್ಟುಕೊಳ್ಳುವ ಬಗ್ಗೆ ಕೇಳಿದ್ದರು. ಆದರೆ ಅವರಿಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಸಂಜೀವ್ thequint.com ಗೆ ಹೇಳಿದ್ದಾರೆ. "ನಮಗೆ ಮಾರ್ಚ್ 21ರವರೆಗೂ ಯಾವುದೇ ಇಮೇಲ್ ಬರಲಿಲ್ಲ. ಫೆಬ್ರವರಿ 21ರೊಳಗೆ ನಮಗೆ ಈ ಕುರಿತು ಕೇಂದ್ರದಿಂದ ಸ್ಪಷ್ಟ ಸೂಚನೆ ಬಂದಿದ್ದರೆ ಬೇಕಾದಷ್ಟು ಕಿಟ್ ಗಳ ತಯಾರಿಗೆ ನಾವು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆಗ ಇಂತಹ ಕೊರತೆ ಕಂಡು ಬರುತ್ತಿರಲಿಲ್ಲ" ಎಂದು ಅವರು ಹೇಳಿದ್ದಾರೆ.

"ಕೇಂದ್ರ ಸರಕಾರದಿಂದ ಸೂಕ್ತ ಸೂಚನೆ ಇಲ್ಲದೆ ಯಾವುದೇ ತಯಾರಕರು ದಾಸ್ತಾನು ಮಾಡಿ ಇಟ್ಟುಕೊಳ್ಳುವುದಿಲ್ಲ. ಯಾವ ರೀತಿಯ ಕಿಟ್ ತಯಾರಿಸಬೇಕು ಎಂದು ಸರಕಾರದಿಂದ ಸ್ಪಷ್ಟ ನಿರ್ದೇಶನ ಇಲ್ಲದೆ ಅದನ್ನು ತಯಾರಿಸಿ ದಾಸ್ತಾನು ಇಡಲು ಸಾಧ್ಯವಿಲ್ಲ.  ಆದರೆ ನಮಗೆ ಕೇಂದ್ರದಿಂದ ಮಾರ್ಗದರ್ಶಿ ಸೂಚನೆ ಬಂದಿದ್ದೇ ಮಾರ್ಚ್ 24ರಂದು. ಅದಕ್ಕೆ ಮೊದಲೇ  ಕಿಟ್ ಗಳಿಗಾಗಿ ಭಾರೀ ಬೇಡಿಕೆ ಬಂದಾಗಿತ್ತು " ಎಂದು ಸಂಜೀವ್ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಅರೋಗ್ಯ ಸಚಿವಾಲಯದ ಬಳಿ thequint ಸ್ಪಷ್ಟನೆ ಕೇಳಿದ್ದು ಅದು ಪ್ರತಿಕ್ರಿಯಿಸಿಲ್ಲ ಎಂದು ತಿಳಿದುಬಂದಿದೆ.

ಸರಕಾರ ಪಿಪಿಇ ಕಿಟ್ ತಯಾರಿಯ ಕುರಿತು ವಿವರವಾದ ಮಾರ್ಗದರ್ಶಿ ಸೂಚನೆ ನೀಡಿದ್ದು,  ಮಾರ್ಚ್ 24ರಂದು. ಅದೇ ದಿನ ಸಂಜೆ ಪ್ರಧಾನಿ ಮೋದಿ ಭಾಷಣ ಮಾಡಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದರು. ಈ ಹಠಾತ್ ಲಾಕ್ ಡೌನ್ ಘೋಷಣೆಯಿಂದ ಮೊದಲೇ ವಿಳಂಬವಾಗಿದ್ದ ತಯಾರಿಗೆ ಮತ್ತಷ್ಟು ಸಮಸ್ಯೆಗಳು ಎದುರಾದವು ಎಂದು ಸಂಜೀವ್ ಹೇಳಿದ್ದಾರೆ . ಕಾರ್ಮಿಕರು ಬರುವುದು, ಅಗತ್ಯ ವಸ್ತುಗಳನ್ನು ಪಡೆಯುವುದು,  ಲಾಕ್ ಡೌನ್ ಗೆ ನಿಂದಾಗಿ ಸ್ಥಳೀಯ ಅನುಮತಿ ಪಡೆಯುವುದು ಇತ್ಯಾದಿಗಳಿಂದ ಕಿಟ್ ತಯಾರಿಗೆ ಇನ್ನಷ್ಟು ಸಮಸ್ಯೆಯಾಯಿತು. ಸಾಮಾನ್ಯವಾಗಿ ಈ ಕಿಟ್ ತಯಾರಿಸುವ 20 ತಯಾರಕರು ದಿನಕ್ಕೆ 25000 ಕಿಟ್ ತಯಾರಿಸಬಹುದು. ಆದರೆ ಲಾಕ್ ಡೌನ್ ನಿಂದ ಅಷ್ಟು ತಯಾರಿಸಲು ಸಾಧ್ಯವಿಲ್ಲವಾಗಿದೆ ಎಂದು ಸಂಜೀವ್ ಹೇಳಿದ್ದಾರೆ. 

ಕೇಂದ್ರ ಸರಕಾರ ನಮಗೆ ಸಹಕಾರ ನೀಡುತ್ತಿದೆ. ಲಾಕ್ ಡೌನ್ ನಿಂದ ಕಿಟ್ ತಯಾರಿಕೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ.  ಆದರೆ ಲಾಕ್ ಡೌನ್ ಆದ ಮೇಲೆ ನಾವು ಸ್ಥಳೀಯ ಆಡಳಿತಗಳ ಸಹಕಾರದ ಮೇಲೂ ಅವಲಂಬಿತರಾಗಿದ್ದೇವೆ. ಪ್ರತಿಯೊಂದಕ್ಕೂ ನಾವು ಅವರ ಅನುಮತಿ ಪಡೆಯಬೇಕಾಗುತ್ತದೆ ಎಂದು ಸಂಜೀವ್ ಹೇಳಿದ್ದಾರೆ.

ಯುನೈಟೆಡ್ ರೆಸಿಡೆಂಟ್ ಆ್ಯಂಡ್ ಡಾಕ್ಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಮಾಸ್ಕ್, ಗವಸು ಇತ್ಯಾದಿ ಸುರಕ್ಷತಾ ಸಾಧನಗಳ ಪೂರೈಕೆಯಾಗುತ್ತಿಲ್ಲ ಎಂದು ದೂರಿದ್ದಾರೆ.  "ಇಂತಹ ಅಗತ್ಯ ವಸ್ತುಗಳನ್ನು ನೀಡದೆ ವೈದ್ಯಕೀಯ ಸಿಬ್ಬಂದಿ ಬಳಿ ಕೆಲಸ ಮಾಡಲು ಹೇಳುವುದು ಯೋಧನಿಗೆ ಗನ್ ನೀಡದೆ ಯುದ್ಧಕ್ಕೆ ಹೋಗಲು ಹೇಳಿದಂತೆ " ಎಂದು ಅಸೋಸಿಯೇಷನ್ ಪತ್ರದಲ್ಲಿ ತಿಳಿಸಿತ್ತು. ಬಿಹಾರದ ಪಾಟ್ನಾ ಮೆಡಿಕಲ್ ಕಾಲೇಜು ಹಾಗು ಆಸ್ಪತ್ರೆಯ ವೈದ್ಯರು ಪಿಪಿಇ ಕಿಟ್ ಗಳು ಇಲ್ಲದೆ ನಾವು ರೈನ್ ಕೋಟ್ ಧರಿಸಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು thequint ಬಳಿ ದೂರಿದ್ದರು.

ಈ ನಡುವೆ 19 ಮಾರ್ಚ್ ನಂದು ಈ ವೈದ್ಯಕೀಯ ಸುರಕ್ಷತಾ ಸಾಧನಗಳ ರಫ್ತಿನ ಮೇಲೆ ಕೇಂದ್ರ ನಿಷೇಧ ಹೇರಿದ್ದರೂ  ಮಾರ್ಚ್ 29 ರಂದು 90 ಟನ್ ವೈದ್ಯಕೀಯ ಸುರಕ್ಷತಾ ಸಾಧನಗಳು ಭಾರತದಿಂದ ಸರ್ಬಿಯಾ ತಲುಪಿದ ಬಗ್ಗೆ ಕೇಂದ್ರ ಸರಕಾರಕ್ಕೇ ಸರಿಯಾದ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೇಳಿದಾಗ ತನಗೆ ಯಾವುದೇ ಮಾಹಿತಿಯಿಲ್ಲ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಹೇಳಿದ್ದಾರೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದ್ದನ್ನು thequint ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News