ವೈರಸ್ ಹರಡುವಿಕೆಗೆ ಧಾರ್ಮಿಕ ಅಲ್ಪಸಂಖ್ಯಾತರನ್ನು ದೂರುವುದು ಸರಿಯಲ್ಲ: ಅಮೆರಿಕ

Update: 2020-04-03 17:08 GMT

ವಾಶಿಂಗ್ಟನ್, ಎ. 3: ಕೊರೋನವೈರಸ್ ಹರಡುವಿಕೆಗೆ ಧಾರ್ಮಿಕ ಅಲ್ಪಸಂಖ್ಯಾತರನ್ನು ದೂರುವುದು ಸರಿಯಲ್ಲ ಎಂದು ಅಮೆರಿಕ ಹೇಳಿದೆ. ಅದೇ ವೇಳೆ, ಕೋವಿಡ್-19 ಸಾಂಕ್ರಾಮಿಕದ ಮೂಲದ ಕುರಿತ ‘ಆರೋಪ-ಪ್ರತ್ಯಾರೋಪ’ಗಳಿಂದ ಜಗತ್ತಿನಾದ್ಯಂತದ ಸರಕಾರಗಳು ಹಿಂದೆ ಸರಿಯಬೇಕು ಎಂದು ಅದು ಒತ್ತಾಯಿಸಿದೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ರಾಯಭಾರಿ ಸ್ಯಾಮ್ ಬ್ರೌನ್‌ಬ್ಯಾಕ್ ಗುರುವಾರ ವಿವಿಧ ಧಾರ್ಮಿಕ ಗುಂಪುಗಳನ್ನು ಒತ್ತಾಯಿಸಿದ್ದಾರೆ. ಜಗತ್ತಿನಾದ್ಯಂತವಿರುವ, ಅದರಲ್ಲೂ ಮುಖ್ಯವಾಗಿ ಇರಾನ್ ಮತ್ತು ಚೀನಾಗಳಲ್ಲಿರುವ ಶಾಂತಿಯುತ ಧಾರ್ಮಿಕ ಕೈದಿಗಳನ್ನು ಬಿಡುಗಡೆ ಮಾಡುವಂತೆಯೂ ಅವರು ಒತ್ತಾಯಿಸಿದ್ದಾರೆ.

‘‘ಧಾರ್ಮಿಕ ಗುಂಪುಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ನಾವು ಮಾಡಬೇಕಾಗಿರುವುದು ಇದು’’ ಎಂದು ಅವರು ಹೇಳಿದರು.

ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕೋವಿಡ್-19 ಪರಿಣಾಮಕ್ಕೆ ಸಂಬಂಧಿಸಿ ಕಾನ್ಫರೆನ್ಸ್ ಕರೆ ಮೂಲಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಅಲ್ಪಸಂಖ್ಯಾತರನ್ನು ದೂರುವ ಪ್ರವೃತ್ತಿ ಮೇಲೆ ನಿಗಾ

 ಕೋವಿಡ್-19 ಕಾಯಿಲೆಗೆ ಧಾರ್ಮಿಕ ಅಲ್ಪಸಂಖ್ಯಾತರನ್ನು ದೂರುವುದರ ಮೇಲೆ ಅಮೆರಿಕ ನಿಗಾ ಇಟ್ಟಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸ್ಯಾಮ್ ಬ್ರೌನ್‌ಬ್ಯಾಕ್ ಹೇಳಿದರು.

‘‘ದುರದೃಷ್ಟವಶಾತ್, ಇಂಥ ಘಟನೆಗಳು ಹಲವು ಕಡೆಗಳಲ್ಲಿ ನಡೆಯುತ್ತಿವೆ. ಇದನ್ನು ಸರಕಾರಗಳು ಮಾಡುವುದು ತಪ್ಪು. ಸರಕಾರಗಳು ಇದನ್ನು ನಿಲ್ಲಿಸಬೇಕು ಹಾಗೂ ಇದು ಕೊರೋನವೈರಸ್ ಮೂಲವಲ್ಲ ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಹೇಳಬೇಕು. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು ಇದರ ಹಿಂದೆ ಇಲ್ಲ ಎನ್ನುವುದನ್ನು ಸರಕಾರಗಳು ಹೇಳಬೇಕು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News