ಕೊರೋನ ವಿರುದ್ಧದ ಕ್ರಮಗಳು ಅಸಮಾನತೆಗಳಿಗೆ ಕಾರಣವಾಗಬಾರದು: ವಲಸೆ ಕಾರ್ಮಿಕರ ಬವಣೆ ಕುರಿತು ವಿಶ್ವಸಂಸ್ಥೆ

Update: 2020-04-03 17:25 GMT

ವಿಶ್ವಸಂಸ್ಥೆ, ಎ.3: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಹೇರಿದ ಬಳಿಕ ಭಾರತದಲ್ಲಿ ವಲಸೆ ಕಾರ್ಮಿಕರ ಸಾಮೂಹಿಕ ನಿರ್ಗಮನದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿ ಮಿಶೆಲ್ ಬ್ಯಾಚೆಲೆಟ್ ಅವರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಬವಣೆಯನ್ನು ಕಂಡು ತನಗೆ ನೋವುಂಟಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದ ಬೃಹತ್ ಜನಸಂಖ್ಯೆ ಮತ್ತು ಅದರ ಸಾಂದ್ರತೆಯನ್ನು ಪರಿಗಣಿಸಿದರೆ ದೇಶದಲ್ಲಿ ಲಾಕ್‌ಡೌನ್ ನಿರ್ವಹಣೆ ಮತ್ತು ಅನುಷ್ಠಾನ ಭಾರೀ ಸವಾಲು ಆಗಿದೆ. ಇದು ಕೊರೋನ ವೈರಸ್ ಹರಡುವಿಕೆಯನ್ನು ತಡೆಯುತ್ತದೆ ಎಂದು ನಾವು ಆಶಿಸಿದ್ದೇವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಬ್ಯಾಚೆಲೆಟ್,ಆದರೆ ಕೊರೋನ ವೈರಸ್ ವಿರುದ್ಧದ ಕ್ರಮಗಳು ನಿಷ್ಪಕ್ಷಪಾತವಾಗಿ ಅನ್ವಯವಾಗುವಂತೆ ಹಾಗೂ ಈಗಿರುವ ಅಸಮಾನತೆಗಳು ಮತ್ತು ದೌರ್ಬಲ್ಯಗಳನ್ನು ಇನ್ನಷ್ಟು ಹೆಚ್ಚಿಸದಂತೆ ನೋಡಿಕೊಳ್ಳುವುದು ಸರಕಾರದ ಪಾಲಿಗೆ ಅನಿವಾರ್ಯವಾಗಿದೆ ಎಂದಿದ್ದಾರೆ.

ವಲಸಿಗರ ನಿರ್ಗಮನ ಕುರಿತು ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಎಲ್ಲ ಕಾರ್ಮಿಕರಿಗೆ ಆಹಾರ,ನೀರು ಮತ್ತು ವಸತಿ ಒದಗಿಸುವಂತೆ ಸರಕಾರಕ್ಕೆ ನೀಡಿರುವ ನಿರ್ದೇಶವು ಈ ವಲಸೆ ಕಾರ್ಮಿಕರ ಸುರಕ್ಷತೆ ಮತ್ತು ಹಕ್ಕುಗಳನ್ನು ಖಚಿತಪಡಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಲಿದೆ ಎಂದಿರುವ ಅವರು,ಇಂತಹ ಹೆಚ್ಚಿನವರ ಬದುಕುಗಳು ದಿಢೀರ‌ನೆ ಸಂಕಷ್ಟದ ಸುಳಿಯಲ್ಲಿ ಸಿಲುಕಿವೆ ಮತ್ತು ಅವರು ಅತ್ಯಂತ ಅನಿಶ್ಚಿತ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಬೃಹತ್ ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳ ವಿತರಣೆ,ನೌಕರರಿಗೆ ರಜಾದಿನಗಳಲ್ಲಿ ವೇತನ ನೀಡುವಂತೆ ಎಲ್ಲ ಉದ್ಯೋಗದಾತರಿಗೆ ನಿರ್ದೇಶ ಇತ್ಯಾದಿ ಮಹತ್ವದ ಕ್ರಮಗಳನ್ನು ಸರಕಾರವು ತೆಗೆದುಕೊಂಡಿದೆಯಾದರೂ,ಮಾನವ ದುರಂತವು ನಮ್ಮ ಕಣ್ಣೆದುರಿಗೇ ಬಿಚ್ಚಿಕೊಳ್ಳುವುದು ಮುಂದುವರಿದಿರುವುದರಿಂದ ಇನ್ನಷ್ಟು ಕ್ರಮಗಳು ಅಗತ್ಯವಾಗಿವೆ ಎಂದು ಬ್ಯಾಚೆಲೆಟ್ ಹೇಳಿದ್ದಾರೆ. ಆರ್ಥಿಕ ಸಂಕಷ್ಟ ಮತ್ತು ಸಾಂಕ್ರಾಮಿಕ ಪಿಡುಗಿನ ದುಷ್ಪರಿಣಾಮ ಕ್ಕೊಳಗಾಗಿರುವ ವಲಸಿಗ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಕ್ರಮಗಳನ್ನು ರೂಪಿಸುವಂತೆ ಭಾರತವನ್ನು ಆಗ್ರಹಿಸಿರುವ ಅವರು,ಜನರಿಗೆ ಪರಿಹಾರಗಳನ್ನೊದಗಿಸಲು ಸರಕಾರವು ನಾಗರಿಕ ಸಮಾಜದೊಂದಿಗೆ ಸೇರಿ ಶ್ರಮಿಸಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News